ಪಾಲಕರೇ ಮಕ್ಕಳ ಮೊದಲ ಗುರುಗಳು: ಪ್ರಾಂಶುಪಾಲ ಮಲ್ಲಿಕಾರ್ಜುನ ಬಿರಾದರ್
ಪಾಲಕರೇ ಮಕ್ಕಳ ಮೊದಲ ಗುರುಗಳು: ಪ್ರಾಂಶುಪಾಲ ಮಲ್ಲಿಕಾರ್ಜುನ ಬಿರಾದರ್
ಕಲ್ಮಡ (ಕಮಲಾಪುರ): ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮಡದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಪಾಲಕರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಸಭೆಗೂ ಮುನ್ನ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಂಶುಪಾಲ ಮಲ್ಲಿಕಾರ್ಜುನ ಬಿರಾದರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, "ಪಾಲಕರೇ ಮಕ್ಕಳ ಮೊದಲ ಗುರುಗಳು. ಮಕ್ಕಳ ಉತ್ತಮ ಶಿಕ್ಷಣ, ಉತ್ತಮ ನಡತೆ ಹಾಗೂ ವ್ಯಕ್ತಿತ್ವ ವಿಕಾಸದಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಿಗೆ ಪ್ರೀತಿ, ಶಿಸ್ತು ಮತ್ತು ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕು. ಅವರ ಓದು, ಹಾಜರಾತಿ ಹಾಗೂ ಶಾಲಾ ಚಟುವಟಿಕೆಗಳ ಬಗ್ಗೆ ನಿರಂತರ ಗಮನಹರಿಸಬೇಕು. ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಉತ್ತಮ ಪರಿಸರ, ಪ್ರೋತ್ಸಾಹ ಹಾಗೂ ನೈತಿಕ ಮೌಲ್ಯಗಳನ್ನು ನೀಡುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ," ಎಂದು ಹೇಳಿದರು.
ಪಾಲಕರ ಸಭೆಯು ಶಿಕ್ಷಕರು ಹಾಗೂ ಪಾಲಕರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ವೇದಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಭಾಷಾ ಶಿಕ್ಷಕರು ಹಾಗೂ ವಿಷಯ ಶಿಕ್ಷಕರು ತಮ್ಮ ಬೋಧನಾ ವಿಧಾನ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಶಾಲೆಯ ವಿವಿಧ ಚಟುವಟಿಕೆಗಳ ಕುರಿತು ಪಾಲಕರಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಅನೇಕ ಪಾಲಕರು ವೀಕ್ಷಿಸಿ ಮಕ್ಕಳ ಸಾಧನೆ ಕುರಿತು ತಿಳಿದುಕೊಂಡರು.
ಸಭೆಯಲ್ಲಿ ಪಾಲಕರು ಶಾಲೆಯ ಶೈಕ್ಷಣಿಕ ವ್ಯವಸ್ಥೆ, ಶಿಸ್ತು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ, ಶಾಲೆಯ ಆಡಳಿತ ಹಾಗೂ ಶಿಕ್ಷಕರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

