ಗುರುನಾಥ ಭೀಮಳ್ಳಿ ಅವರ "ಅಂತರಜ್ಯೋತಿ"ದರ್ಶನ
ಗುರುನಾಥ ಭೀಮಳ್ಳಿ ಅವರ "ಅಂತರಜ್ಯೋತಿ"ದರ್ಶನ
ಕಲ್ಯಾಣ ಕರ್ನಾಟಕದ ಶರಣರ-ಸಂತರ, ವಚನಕಾರರ ನಾಡಿನ ಆಳಂದ ಗ್ರಾಮದವರಾದ ಶ್ರೀ ಗುರುನಾಥ ಭೀಮಳ್ಳಿ ಯವರು ವೃತ್ತಿ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಿ ನಿವೃತ್ತಿಯ ನಂತರ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿಶೇಷ ಕಾರ್ಯ ಸಾಧನೆಯನ್ನು ಮಾಡಿರುವ ಇವರು ದಿನಾಲು ಪ್ರವಚನ ಹೇಳುವ ಮತ್ತು ಕೇಳುವುದರ ಜೊತೆಗೆ 'ಕಾರ್ಯಕ್ರಮಗಳಲ್ಲಿ ತಮ್ಮ ಜ್ಞಾನವನ್ನು ಹಂಚಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದವರಾಗಿದ್ದು ಶ್ರೀ ಸಿದ್ದಾರೂಢರ ಪರಮ ಭಕ್ತರು ಅವರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿದ್ದಾರೆ. ಶ್ರೀಯುತರು ತಮ್ಮ ಅನುಭವದ ಆಧಾರದ ಮೇಲೆ ಆಧ್ಯಾತ್ಮಿಕ ಚಿಂತನೆಗಳನ್ನು ಲೇಖನಗಳ ರೂಪದಲ್ಲಿ ಸಂಗ್ರಹಿಸಿಟ್ಟ ಮಾಹಿತಿಯನ್ನು ನನ್ನ ಜೊತೆಗೆ ಹಂಚಿಕೊಂಡ್ಡಿದ್ದರ ಪ್ರತಿಫಲವೆ ಈ ಅಂತರಜ್ಯೋತಿ.
ಅಂತರ್ಜ್ಯೋತಿ' ಕೃತಿಯಲ್ಲಿರುವ ಲೇಖನಗಳು ಲೌಕಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸುತ್ತಲೇ ಸುತ್ತುತ್ತವೆ. ಇಲ್ಲಿ ಲೇಖಕರು ಮನುಷ್ಯನಿಗೆ ಆತ್ಮಜ್ಞಾನದ ಅವಶ್ಯಕತೆ ಇದೆ ಎನ್ನುವ ಮಾತನ್ನು ಪದೇ ಪದೇ ಸಾಬೀತು ಪಡಿಸುತ್ತಲೇ ಸಾಗುತ್ತಾರೆ. ಅದಕ್ಕೆ ಪೂರಕವಾಗಿ ನೀತಿ ಕತೆ, ಪವಾಡ, ಪುರಾಣಕತೆ, ಮಹಾಭಾರತ ಹಾಗೂ ರಾಮಾಯಣದ ಉಪಕತೆಗಳನ್ನು ಬಳಸಿ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಸತ್ಯ ಹರಿಶ್ಚಂದ್ರ, ಭಕ್ತ ಪ್ರಹ್ಲಾದ, ಹಿರಣ್ಯ ಕಶ್ಯಪ, ಭಕ್ತ ಮೀರಾ, ಶಿವಾಜಿ, ಗಾಂಧೀಜಿ, ವಿವೇಕಾನಂದರು, ಗರಗದ ಮಡಿವಾಳರು, ರೇವಣಸಿದ್ದರು, ಗದುಗಿನ ಶಿವಾನಂದರು, ಸಿದ್ಧಾರೂಢರು, ರಮಣ ಮಹರ್ಷಿಗಳು, ನಿಜಗುಣ ಶಿವಯೋಗಿಗಳು, ಶಂಕರಾಚಾರ್ಯರು, ಕವಿರತ್ನ ಕಾಳಿದಾಸರು ಮುಂತಾದವರನ್ನು ಕತೆ ಸಹಿತ ಸ್ಮರಿಸಲಾಗಿದೆ. ಹನ್ನೆರಡನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಜೇಡರ ದಾಸಿಮಯ್ಯ, ದುಗ್ಗಳೆ, ಅಕ್ಕಮಹಾದೇವಿ ಮುಂತಾದ ಶರಣ, ಶರಣೆಯರ ವಚನಗಳನ್ನು ಕೆಲವು ಬಾರಿ ಉಲ್ಲೇಖಿಸಿದ್ದಾರೆ.
ಈ ಕೃತಿಯ ಓದಿನ ಮಧ್ಯೆ ಗಮನ ಸೆಳೆದ ಕೆಲವು ವಾಕ್ಯಗಳಿವೆ. ಅವು ಹೀಗಿವೆ:
೧. "ಮನಸು ವಾಯುವಿನಿಂದ ಕೂಡಿದ್ದರಿಂದ ಒಂದೇ ಕಡೆ ಇರದೆ ಸದಾ ಓಡಾಡುತ್ತಿರುತ್ತದೆ."
(ಮನಸಿಗೆ ಬಂದಂತೆ ನಡೆಯದಿರಿ)
ಮನುಷ್ಯನ ಮನಸು ಯಾವುದರಿಂದ ಕೂಡಿದೆ ಎನ್ನುವುದನ್ನು ಹೇಳುವುದು ಬಹಳ ಕಷ್ಟ. ಆದರೆ ಈ ವಾಕ್ಯದಲ್ಲಿ ಮನಸ್ಸಿನ ಅಸ್ಥಿರತೆಯನ್ನು ಗಾಳಿಯೊಂದಿಗೆ ಸಮೀಕರಿಸಲಾಗಿದೆ. ಎಲ್ಲೆಂದರಲ್ಲಿ ಓಡಾಡುವ ಮನ ಹಿಡಿತಕ್ಕೆ ಸಿಗಲಾರದು. ಅದನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನನದ ಕುರಿತು ಈ ಲೇಖನ ಅರಿವು ಮೂಡಿಸುತ್ತದೆ.
೨. "ಶರೀರದ ವಿವಿಧ ಅಂಗಗಳಾದ ಕೈ, ಕಾಲು, ಮೂಗು, ಕಣ್ಣು ಚಲನೆಯಾಗಬೇಕಾದರೆ ಶರೀರದಲ್ಲಿ ಇಂದ್ರಿಯಗಳು ಮಾತ್ರ ಕಾರ್ಯ ನಿರ್ವಹಿಸುತ್ತವೆ. ನೀನೇನೂ ಮಾಡುವುದಿಲ್ಲ. ಆದರೆ ವೀಕ್ಷಿಸುತ್ತಿರುವಿರಿ."
(ಜನನ ಮರಣಕ್ಕೆ ಮುಕ್ತಿ ಯಾವಾಗ?)
ಈ ದೇಹ, ಮನಸು ಮತ್ತು ಭಾವನೆಗಳು ಒಂದಕ್ಕೊಂದು ಪೂರಕವಾಗಿದೆಯೆ? ಅಥವಾ ಭಿನ್ನವೆ? ಎನ್ನುವ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಈ ಲೇಖನದಲ್ಲಿದೆ. ಓಶೋ ಹೇಳುವ Inner Consciousness, Observation ಮತ್ತು Witness ಅನ್ನು ನೆನಪಿಸುತ್ತದೆ. ಶರೀರ ಮತ್ತು ಆಂತರಿಕ ಪ್ರಜ್ಞೆಯ ಬಗ್ಗೆ ಕಣ್ಣೆರೆಸುವ ವಿಚಾರಗಳ ಪ್ರತಿಪಾದನೆಯಿದೆ.
೩. "ಬಲ್ಲವರೊಡನೆ ಬಿಲ್ಲಾಗಿರಬೇಕು."
ಜ್ಞಾನ, ವಿದ್ವತ್ತು, ಪಾಂಡಿತ್ಯ ಇದ್ದಲ್ಲಿ ವಿನಯದಿಂದ ಇದ್ದು ಕಲಿಯಬೇಕು ಎನ್ನುವ ಕಿವಿಮಾತು ಇದರಲ್ಲಿದೆ. ಬಿಲ್ಲಾಗುವುದು ಎಂದರೆ ಗೌರವದಿಂದ ಬಾಗಿ ನಡೆಯುವುದು ಎಂಬ ಭಾವ. ಇದರಂತೆಯೇ ಶರಣರು ಹೇಳುವ ವಚನದ ಸಾಲುಗಳು ಅದೇ ಭಾವವನ್ನು ವ್ಯಕ್ತಪಡಿಸುತ್ತವೆ.
'ಬಾಗಿದ ತಲೆ ಮುಗಿದ ಕೈಗಳು' 'ಎನಗಿಂತ ಕಿರಿಯರಿಲ್ಲ' 'ನಾನೇನ ಮಾಡಲಿ ಬಡವನಯ್ಯ'
ವ್ಯಕ್ತಿ ತನ್ನೊಳಗಿನ ಅಹಂಭಾವವನ್ನು ಏನೂ ಇಲ್ಲದಂತೆ ಮಾಡಿಕೊಳ್ಳುವುದು. ಮನುಷ್ಯ ತನ್ನನ್ನು ತಾನು ಸರಳಗೊಳಿಸುವ ಸಂದೇಶವನ್ನು ಈ ಲೇಖನ ಹೊರಹಾಕುತ್ತದೆ. 'ಎನ್ನ ತಪ್ಪು ಅನಂತ ಕೋಟಿ ನಿಮ್ಮ ಸೈರಣೆಗೆ ಲೆಕ್ಕವಿಲ್ಲ' ಎಂದು ಹೇಳುವ ಬಸವಣ್ಣನವರ ಸಾಲು ನೆನಪಾಗುತ್ತದೆ.
ಅಂತರ್ಜೋತಿ ಕೃತಿ ಆಳವಾಗಿ ಚಿಂತನೆ ಮಾಡಲು ಹಚ್ಚುತ್ತದೆ. ಅವರು ಅಧ್ಯಾತ್ಮವನ್ನು ತಿಳಿದುಕೊಂಡು, ಇತರರಿಗೂ ತಿಳಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಭೀಮಳ್ಳಿಯವರು ಅಷ್ಟೇ ಅಲ್ಲ ನಾವೆಲ್ಲರೂ ಶರಣ ತತ್ವಗಳನ್ನು ತಿಳಿದುಕೊಂಡು, ವಚನಗಳನ್ನು ಜೀರ್ಣಿಸಿಕೊಂಡರೆ, ಅನುಭಾವ ಇನ್ನೂ ಸ್ಪಷ್ಟವಾಗುತ್ತದೆ. ಅವರು ಪ್ರವಚನದಲ್ಲಿ ಉತ್ತಮವಾಗಿ ಮಾತನಾಡಿದ್ದಾರೆ. ಆದರೆ ಬರಹದಲ್ಲಿ ದಾಖಲಿಸುವಾಗ ಅಷ್ಟು ಪರಿಣಾಮಕಾರಿಯಾಗಿ ಮೂಡದೆ ಇರಲು ಕಾರಣ ಬರಹದ ಧಾವಂತ. ಮೊದಲ ಕೃತಿಯಾದ್ದರಿಂದ ಅಭಿವ್ಯಕ್ತಿ ಶೈಲಿಗಿಂತ ಅದರ ವಸ್ತುವಿನ ಮೇಲೆ ಹೆಚ್ಚು ಕೇಂದ್ರೀಕರಿಸುವುದು ಒಳಿತು ಎಂದು ಡಾ.ಕಾವ್ಯಶ್ರೀ ಮಹಾಗಾoವಕರ ಅಭಿಪ್ರಾಯ ಪಟ್ಟಿದ್ದಾರೆ.
ಪುಸ್ತಕ ಮುದ್ರಣ ಅಂದವಾಗಿದ್ದು 2026 ರಲ್ಲಿ ಡೊಂಗರಗಾoವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ಪ್ರಕಟಗೊಂಡ ಈ ಕೃತಿಯಲ್ಲಿ 172 ಪುಟಗಳಿದ್ದು, 200 ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ

