ರೈತರ ಕಬ್ಬು ಖರೀದಿಗೆ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಲು ಆಗ್ರಹ
ರೈತರ ಕಬ್ಬು ಖರೀದಿಗೆ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಲು ಆಗ್ರಹ
ಚಿಂಚೋಳಿ : ಕಾಳಗಿ - ಚಿಂಚೋಳಿ ಭಾಗದ ರೈತರಿಗೆ ಕಬ್ಬು ಬೆಳೆಯಲು ಉತ್ತೇಜನ ನೀಡಿದ್ದ ಸಿದ್ದಸಿರಿ ಕಾರ್ಖಾನೆ ಕಬ್ಬು ಖರೀದಿಸದೆ ರೈತರಿಗೆ ಮೋಸದ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತದವರೆಗೆ ಚಿಂಚೋಳಿ - ಕಾಳಗಿ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿತ್ತು.
ಸಕ್ಕರೆ ಬದಲು ಎಥಿನಾಲ್ ಉತ್ಪಾದನೆ ನಡೆಸಿದ ಸಿದ್ದಸಿರಿ ಕಂಪನಿಗೆ ಕೇಂದ್ರ ಬಿಜೆಪಿ ಸರಕಾರ ಎಥಿನಾಲ್ ಉತ್ಪಾದನೆಗೆ ತಡೆ ನೀಡಲಾಗಿದೆ. ತಡೆಯ ಆದೇಶ ನೀಡಿ ತಿಂಗಳು ಕಳೆದಿದ್ದರೂ ಕೂಡ ಸಿದ್ದಸಿರಿ ಕಂಪನಿ ಆಡಳಿತ ಮಂಡಳಿಯ ಮಾಲೀಕರಾಗಲಿ ಸ್ಥಳೀಯ ಶಾಸಕರಾಗಲಿ ಯಾವುದೇ ಮಾಹಿತಿ ನೀಡದೆ ಕಬ್ಬು ಬೆಳೆದ ರೈತರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು. ಶಾಸಕರು ಮತ್ತು ಸಿದ್ದಸಿರಿ ಕಂಪನಿ ಆಡಳಿತ ಮಂಡಳಿಯವರು ರೈತರಿಗೆ ಕಬ್ಬು ಬೆಳೆಯುವಂತೆ ಉತ್ತೇಜನ ಕೊಟ್ಟು ರೈತರಿಂದ ಎರಡು ವರ್ಷ ಕಬ್ಬು ಪಡೆದುಕೊಂಡು ಎಥಿನಾಲ್ ಉತ್ಪಾದನೆ ಮಾಡಿ ಲಾಭ ಪಡೆದುಕೊಂಡಿದೆ. ಆದರೆ ಈಗ ಕಬ್ಬು ಖರೀದಿಸದೇ ರೈತರಿಗೆ ವಂಚಿಸಲಾಗುತ್ತಿದೆ. ರೈತರ ಕಬ್ಬು ಒಣಗುತ್ತಿದೆ. ಇದರ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಿದ್ದಸಿರಿ ಎಥಿನಾಲ್ ಕಂಪನಿಯ ಮಾಲೀಕ ಬಿಜಾಪೂರ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡದೆ ಮೌನ ವಹಿಸಿದ್ದಾರೆ. ಶಾಸಕ ಡಾ. ಅವಿನಾಶ ಜಾಧವ್ ಅವರು ಸಿದ್ದಸಿರಿ ಕಾರ್ಖಾನೆ ರೈತರ ಕಬ್ಬು ಖರೀದಿಸಲು ಕ್ರಮ ವಹಿಸಬೇಕು. ಇಲ್ಲ ಕೇಂದ್ರ ಸರಕಾರವನ್ನು ಮಧ್ಯಸ್ಥಿಕೆಯಲ್ಲಿ ಕಂಪನಿ ಆಡಳಿತ ಮಂಡಳಿಯಿಂದ ಕಬ್ಬು ಬೆಳೆದ ರೈತರಿಗೆ ಪರಿಹಾರ ಹಣ ಕಲ್ಪಿಸಲು ಆಗ್ರಹಿಸಬೇಕೆಂದು ಚಿಂಚೋಳಿ - ಕಾಳಗಿ ಅಧ್ಯಕ್ಷ ಸಂಜುಕುಮಾರ ರಾಣಾಪೂರ್ ಅವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ. ಪ್ರತಿಭಟನೆ ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಉಪಾಧ್ಯಕ್ಷ ಅಬ್ದುಲ್ ಬಾಶೀದ್, ಹಿರಿಯ ಮುಖಂಡ ಲಕ್ಷ್ಮಣ ಆವಂಟಿ, ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಆನಂದಕುಮಾರ್ ಟೈಗರ್ ಅವರು ಮಾತನಾಡಿದರು.
ಪ್ರಮುಖ ಬೇಡಿಕೆಗಳು:
ಕೇಂದ್ರ ಬಿಜೆಪಿ ಸರಕಾರ ರೈತ ವಿರೋಧಿ ಆದೇಶ ಹಿಂಪಡೆಯಬೇಕು. ಚಿಂಚೋಳಿ -ಕಾಳಗಿ ರೈತರ ಕಬ್ಬು ಕಾರ್ಖಾನೆಗೆ ಸಾಗಿಸಲು ವ್ಯವಸ್ಥೆ ಕಲ್ಪಿಸಬೇಕು. ಸಿದ್ದಸಿರಿ ಕಂಪನಿಯಲ್ಲಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಬೇಕು. ಕಂಪನಿಗೆ ಕಬ್ಬು ಸಾಗಿಸಿರುವ ಸ್ಥಳೀಯ ರೈತರಿಗೆ ಸದಸ್ಯತ್ವ ಪಡೆದು ಷೇರು ಕಲ್ಪಿಸಬೇಕು ಮತ್ತು ಬೆಳೆ ವಿಮೆ ನೀಡಲು ಮುಂದಾಗಬೇಕು ಎನ್ನುವ ಬೇಡಿಕೆಗಳ ಮನವಿ ಪತ್ರವನ್ನು ಚಿಂಚೋಳಿ ತಹಸೀಲ್ದಾರ್ ಶಿವಾನಂದ ಮೇತ್ರಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಜಗನ್ನಾಥ ಕಟ್ಟಿ, ಸುರೇಶ ಭಂಟ, ನಾಗೇಶ ಗುಣಾಜಿ, ರಘು ಗುತ್ತೇದಾರ್, ಸೈಯದ್ ಶಬ್ಬೀರ್, ಖಲೀಲ್ ಪಟೇಲ್, ಸಂತೋಷ ಗುತ್ತೇದಾರ್, ನರಸಿಂಲು ಕುಂಬಾರ್, ಮತೀನ್ ಸೌದಾಗರ ಸೇರಿದಂತೆ ಪಕ್ಷದ ಯುವ ಕಾರ್ಯಕರ್ತರು ಇದ್ದರು.

