ಶಿಕ್ಷಣ ಸಾರ್ವತ್ರಿಕ ಶಕ್ತಿಯ ಮೂಲ ಅಸ್ತ್ರ: ಡಾ. ಮೋನಪ್ಪ ಎಲ್. ಸುತಾರ

ಶಿಕ್ಷಣ ಸಾರ್ವತ್ರಿಕ ಶಕ್ತಿಯ ಮೂಲ ಅಸ್ತ್ರ: ಡಾ. ಮೋನಪ್ಪ ಎಲ್. ಸುತಾರ

ಶಿಕ್ಷಣ ಸಾರ್ವತ್ರಿಕ ಶಕ್ತಿಯ ಮೂಲ ಅಸ್ತ್ರ: ಡಾ. ಮೋನಪ್ಪ ಎಲ್. ಸುತಾರ

ಆಳಂದ: ಉನ್ನತ ಶಿಕ್ಷಣವು ಸಮಾಜದ ಪ್ರತಿಯೊಬ್ಬರಿಗೂ ಸುಲಭವಾಗಿ ದೊರೆಯುವಂತಾಗಬೇಕು. ಅಕ್ಷರ ಜ್ಞಾನವು ಮನುಷ್ಯನಿಗೆ ಆತ್ಮವಿಶ್ವಾಸ, ವಿವೇಕ ಹಾಗೂ ಸಾರ್ವತ್ರಿಕ ಶಕ್ತಿಯನ್ನು ನೀಡಬಲ್ಲ ಪ್ರಬಲ ಅಸ್ತ್ರವಾಗಿದೆ. ಈ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಂಬುದ್ಧ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಮೋನಪ್ಪ ಎಲ್. ಸುತಾರ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯದಲ್ಲಿರುವ ಸಮತಾ ಲೋಕ ಶಿಕ್ಷಣ ಸಮಿತಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ವಿವೇಕ ವರ್ಧಿನಿ ಚಿಣ್ಣರ ಶಾಲೆಗಳ ತಾಲೂಕಿನ ವಿವಿಧ 38 ಶಾಲೆಗಳ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಶಿಕ್ಷಕರು ತಮ್ಮ ಎದುರು ಕುಳಿತ ಪ್ರತಿಯೊಬ್ಬ ಮಗುವನ್ನೂ ಮಾತೃತ್ವದ ಭಾವನೆಯಿಂದ ಕಾಣಬೇಕು. ಮಕ್ಕಳಲ್ಲಿರುವ ಪ್ರತಿಭೆ, ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದಾಗ ಮಾತ್ರ ಶಿಕ್ಷಣದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ” ಎಂದು ಅವರು ಹೇಳಿದರು.

ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶಾಸಕ ಬಿ.ಆರ್. ಪಾಟೀಲ ಅವರ ಸಾರ್ಥಕ ಪ್ರಯತ್ನಗಳು ಮಹತ್ವದ ಕೊಡುಗೆ ನೀಡಿವೆ. ಹೊಸದಾಗಿ ಸರ್ಕಾರಿ ಶಾಲೆಗಳು ಹಾಗೂ ಕಾಲೇಜುಗಳನ್ನು ಮಂಜೂರು ಮಾಡಿಸುವ ಮೂಲಕ ಅವರು ಶಿಕ್ಷಣದ ಮೇಲಿನ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ ಎಂದು ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಹೇಳಿದರು.

ಹಿರಿಯ ಶಿಕ್ಷಕ ಜೈನುದ್ದೀನ್ ಮುಜಾರ ಮಾತನಾಡಿ, ಬದಲಾಗುತ್ತಿರುವ ಶೈಕ್ಷಣಿಕ ಪರಿಸರದಲ್ಲಿ ಶಿಕ್ಷಕರ ಮುಂದಿರುವ ಸವಾಲುಗಳು, ಮಕ್ಕಳ ಕಲಿಕೆಯಲ್ಲಿನ ಬದಲಾವಣೆಗಳು ಹಾಗೂ ಶಿಕ್ಷಕರ ಜವಾಬ್ದಾರಿಗಳ ಕುರಿತು ವಿಚಾರ ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಮಾತನಾಡಿ, “ತಾಲೂಕಿನ ಯಾವುದೇ ಮನೆಯ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಆರ್ಥಿಕ ಹಾಗೂ ಭೌಗೋಳಿಕ ಅಡಚಣೆಗಳ ನಡುವೆಯೂ ಮನೆಯಲ್ಲಿಯೇ ಕುಳಿತು ಉನ್ನತ ಶಿಕ್ಷಣ ಪಡೆಯಲು ಸಂಬುದ್ಧ ಅಧ್ಯಯನ ಕೇಂದ್ರವು ಅಗತ್ಯ ಶೈಕ್ಷಣಿಕ ಆಧಾರ ಒದಗಿಸಲಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಆಶಿಸಿದರು.

ಪತ್ರಕರ್ತ ಡಿ.ಎಂ. ಪಾಟೀಲ, ಸಾವಿತ್ರಿ ಸೇರಿದಂತೆ ವಿವಿಧ ಮುಖಂಡರು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಯೋಜಕ ಮಾಣಿಕ ಕಾಳಜೆ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.