’ ಶಂಕರ ದೇವನೂರ, ಕಣಜನಹಳ್ಳಿ ನಾಗರಾಜ್, ಯು.ಎನ್.ಗೆ, ಅಲ್ಲಮಪ್ರಭು ಪುರಸ್ಕಾರ ಸಂಗನಾಳಮಠ ಹಾಗೂ ಹರಿಹರ ಶಿವಕುಮಾರ್,

’  ಶಂಕರ ದೇವನೂರ, ಕಣಜನಹಳ್ಳಿ ನಾಗರಾಜ್, ಯು.ಎನ್.ಗೆ, ಅಲ್ಲಮಪ್ರಭು ಪುರಸ್ಕಾರ ಸಂಗನಾಳಮಠ ಹಾಗೂ ಹರಿಹರ ಶಿವಕುಮಾರ್,

ನಾಲ್ವರು ಸಾಧಕರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ಅಲ್ಲಮಪ್ರಭು ಪುರಸ್ಕಾರ’

ಶಂಕರ ದೇವನೂರ, ಕಣಜನಹಳ್ಳಿ ನಾಗರಾಜ್, ಯು.ಎನ್. ಸಂಗನಾಳಮಠ ಹಾಗೂ ಹರಿಹರ ಶಿವಕುಮಾರ್ ಆಯ್ಕೆ

 ಡಿ. 1ರಂದು ಬೆಂಗಳೂರಿನಲ್ಲಿ ಪ್ರದಾನ

ಜಮಖಂಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನಾಡೋಜ ಶಿವಯ್ಯ ಜಗದೀಶ ಗುಡಗುಂಟಿ ಅವರು ಶ್ರೀಪ್ರಭುಲಿಂಗ ಶಿಕ್ಷಣ ಸಂಸ್ಥೆಯ ಮೂಲಕ ಅನುಭಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರತಿವರ್ಷ ಪ್ರದಾನ ಮಾಡುವ ‘ಅಲ್ಲಮಪ್ರಭು ಪುರಸ್ಕಾರ’ಕ್ಕೆ 2026ನೇ ಸಾಲಿನಲ್ಲಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ.

ವಚನ ಸಾಹಿತ್ಯ, ಅಧ್ಯಾತ್ಮ, ಅನುಭಾವ ಮತ್ತು ವೈಚಾರಿಕ ಚಿಂತನೆಯ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಗೆ ವಿಶಿಷ್ಟ ಕೊಡುಗೆ ನೀಡುತ್ತಿರುವ ನಾಲ್ವರು ಸಾಧಕರಾದ ಮೈಸೂರಿನ ಶಂಕರ ದೇವನೂರ, ಚಿತ್ರದುರ್ಗದ ಕಣಜನಹಳ್ಳಿ ನಾಗರಾಜ್, ಶಿವಮೊಗ್ಗದ ಯು.ಎನ್. ಸಂಗನಾಳಮಠ ಹಾಗೂ ಬೆಂಗಳೂರಿನ ಹರಿಹರ ಶಿವಕುಮಾರ್ ಅವರು 2026ನೇ ಸಾಲಿನ ಪ್ರತಿಷ್ಠಿತ ‘ಅಲ್ಲಮಪ್ರಭು ಪುರಸ್ಕಾರ’ ಗೌರವಕ್ಕೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 1, 2026ರ ಮಂಗಳವಾರ ಸಂಜೆ 5.30ಕ್ಕೆ ಬೆಂಗಳೂರಿನ ಗಾಂಧಿಭವನದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಪ್ರಶಸ್ತಿಯು ₹15,000 ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷರಾದ ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುರಸ್ಕೃತರ ಪರಿಚಯ:

ಯು.ಎನ್. ಸಂಗನಾಳಮಠ: 1949ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ ಇವರು ಸರ್ಕಾರಿ ಉಪನ್ಯಾಸಕರಾಗಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಚನ ಸಾಹಿತ್ಯ, ವೈಚಾರಿಕತೆ, ವ್ಯಕ್ತಿಚಿತ್ರ, ಧಾರ್ಮಿಕ ಸಾಹಿತ್ಯ, ಅಂಕಣ ಬರಹ ಹಾಗೂ ಸಂಪಾದನೆ ಸೇರಿದಂತೆ 120ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವಚನ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಶಂಕರ ದೇವನೂರ: 1962ರಲ್ಲಿ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ ಜನಿಸಿದ ಇವರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಅಭಿಯಂತರರಾಗಿ 2020ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಪೂಜ್ಯ ಸಿದ್ಧೇಶ್ವರ ಸ್ವಾಮಿಗಳೊಂದಿಗೆ ನಿಕಟ ಒಡನಾಟ ಹೊಂದಿ ಪ್ರವಚನಗಳಲ್ಲಿ ಪಾಲ್ಗೊಂಡಿದ್ದಾರೆ. ಬಸವಭೂಷಣ, ಬಸವರತ್ನ, ಎಸ್.ಜಿ. ಬಾಳೆಕುಂದ್ರಿ ಹಾಗೂ ಇನ್‌ಸ್ಪೈರ್ಡ್ ಇಂಡಿಯಾ ಫೌಂಡೇಷನ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.

ಕಣಜನಹಳ್ಳಿ ನಾಗರಾಜ್: 1954ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಣಜನಹಳ್ಳಿಯಲ್ಲಿ ಜನಿಸಿದ ಕೆ.ಎನ್. ನಾಗರಾಜ್ ಅವರು ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದು, ಕವಿ ಹಾಗೂ ಅಧ್ಯಾತ್ಮಾಸಕ್ತರೂ ಆಗಿದ್ದಾರೆ. ಶ್ರೀ ವೀರಪ್ಪ ತಾತನವರ ಜೀವನ ಚರಿತ್ರೆ ‘ಬಯಲುಸೀಮೆಯ ಬೆಳಗು’ ಕೃತಿಯನ್ನು 2026ರಲ್ಲಿ ಪ್ರಕಟಿಸಿದ್ದಾರೆ. ಭಗವದ್ಗೀತೆಯನ್ನು ಎರಡು ಸಾಲಿನ ಪದ್ಯಗಳ ರೂಪದಲ್ಲಿ, ‘ಶ್ರೀಕೃಷ್ಣ’ ನಾಮಸ್ಮರಣೆಯೊಂದಿಗೆ ರಚಿಸಿದ್ದಾರೆ.

ಹರಿಹರ ಶಿವಕುಮಾರ್: 1961ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದ ಇವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಲೆಕ್ಕಪತ್ರ ಮತ್ತು ತೆರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ವಚನ ಸಾಹಿತ್ಯದ ಅಧ್ಯಯನದಲ್ಲಿ ಆಸಕ್ತರಾಗಿರುವ ಇವರು ‘ಬಸವಣ್ಣ ಅರುಹಿದ ಅರಿವಿನ ಸಪ್ತಸೂತ್ರಗಳು’, ‘ಶ್ರೀ ಭಗವದ್ಗೀತಾಸಾರ’ ಹಾಗೂ ಅಲ್ಲಮಪ್ರಭುಗಳ ವಿಶಿಷ್ಟ ಪದಗಳ ವಿಶ್ಲೇಷಣೆಯ ‘ಅನನ್ಯ ಅಲ್ಲಮ’ ಕೃತಿಗಳನ್ನು ಪ್ರಕಟಿಸಿದ್ದಾರೆ.