ಎಚ್‌ಕೆಇ ಸೊಸೈಟಿ ಸದಸ್ಯತ್ವದಲ್ಲಿ ಕುಟುಂಬ ಸದಸ್ಯತ್ವಕ್ಕೆ ಅವಕಾಶ ನೀಡಬೇಡಿ: ಪ್ರೊ. ಶಿವರಾಜ್ ಪಾಟೀಲ್

ಎಚ್‌ಕೆಇ ಸೊಸೈಟಿ ಸದಸ್ಯತ್ವದಲ್ಲಿ ಕುಟುಂಬ ಸದಸ್ಯತ್ವಕ್ಕೆ ಅವಕಾಶ ನೀಡಬೇಡಿ: ಪ್ರೊ. ಶಿವರಾಜ್ ಪಾಟೀಲ್

ಎಚ್‌ಕೆಇ ಸೊಸೈಟಿ ಸದಸ್ಯತ್ವದಲ್ಲಿ ಕುಟುಂಬ ಸದಸ್ಯತ್ವಕ್ಕೆ ಅವಕಾಶ ನೀಡಬೇಡಿ: ಪ್ರೊ. ಶಿವರಾಜ್ ಪಾಟೀಲ್

 ನಮೋಶಿಯವರೇ, ಮತ್ತೊಮ್ಮೆ ಜನರಿಗೆ ನಕರಾ ಮಾಡಬೇಡಿ; ಜನರ ತಾಳ್ಮೆ ಪರೀಕ್ಷಿಸಬೇಡಿ ಶಿವರಾಜ ಪಾಟೀಲ 

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ ಸೊಸೈಟಿ) ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿಯವರು ಮತ್ತೊಮ್ಮೆ ಸದಸ್ಯತ್ವ ವಿಚಾರದಲ್ಲಿ ಜನರಿಗೆ ಅನ್ಯಾಯ ಮಾಡಬಾರದು ಎಂದು ಚಿಂತಕ ಪ್ರೊ. ಶಿವರಾಜ್ ಪಾಟೀಲ್ ಆಗ್ರಹಿಸಿದ್ದಾರೆ.

ಪತ್ರಿಕೆ ಹೇಳಿಕೆ ನೀಡಿ, ಸುಮಾರು ಹತ್ತು ವರ್ಷಗಳ ಹಿಂದೆ ಆರಂಭವಾದ ಸೊಸೈಟಿಯ ಸದಸ್ಯತ್ವ ಅಭಿಯಾನದಲ್ಲಿ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿ ಡಿಡಿ ಹಾಗೂ ಅರ್ಜಿ ಶುಲ್ಕ ಪಾವತಿಸಿದ್ದರು. ಆದರೆ, ಅರ್ಜಿ ಸಲ್ಲಿಸಿದವರಿಗೆ ಸದಸ್ಯತ್ವದ ಕುರಿತು ಸೂಕ್ತ ಉತ್ತರ ನೀಡದೆ ನಿರ್ಲಕ್ಷಿಸಲಾಗಿದೆ. ನಂತರ ನ್ಯಾಯಾಲಯದ ಮೂಲಕವೂ ಸದಸ್ಯತ್ವ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಅಲ್ಲದೆ, ಸೊಸೈಟಿಯ ಸದಸ್ಯರ ಕುಟುಂಬದವರಿಗೆ ಒನ್ ಪ್ಲಸ್ ಒನ್ ಮಾದರಿಯಲ್ಲಿ ಸದಸ್ಯತ್ವ ನೀಡುವ ಮೂಲಕ ಸಾಮಾನ್ಯ ಜನರ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.

ಎಚ್‌ಕೆಇ ಸೊಸೈಟಿ ಯಾರೊಬ್ಬರ ಪಿತ್ರಾರ್ಜಿತ ಆಸ್ತಿಯಲ್ಲ. ರೈತರ ಬೆವರಿನಿಂದ, ಸರ್ಕಾರದ ನೆರವಿನಿಂದ ಈ ಭಾಗದ ಬಡ ಹಾಗೂ ಗ್ರಾಮೀಣ ಮಕ್ಕಳ ಶಿಕ್ಷಣದ ಭವಿಷ್ಯ ರೂಪಿಸಲು ಸ್ಥಾಪನೆಯಾದ ಸಾರ್ವಜನಿಕ ಸಂಸ್ಥೆಯಾಗಿದೆ. ಮಹದೇವಪ್ಪ ರಾಂಪುರೆ ಅವರ ದೂರದೃಷ್ಟಿ, ತ್ಯಾಗ ಮತ್ತು ಸೇವಾ ಮನೋಭಾವದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಹಿಂದಿನ ಆಡಳಿತಗಾರ ಕೆ. ನಾಗರಾಜ್ ರಾವ್ ಅವರು ಸಂಸ್ಥೆಯನ್ನು ಜನರ ಕೈಗೆ ಮರಳಿಸುವ ಉದ್ದೇಶದಿಂದ ಹೊಸ ಸದಸ್ಯತ್ವಕ್ಕೆ ಅವಕಾಶ ಕಲ್ಪಿಸಿದ್ದರು ಎಂದು ಸ್ಮರಿಸಿದರು.

ಆದರೆ, ಕಳೆದ ನಾಲ್ಕು ದಶಕಗಳಿಂದ ಬೆರಳೆಣಿಕೆಯ ಕುಟುಂಬಗಳ ಸದಸ್ಯರ ಹಿಡಿತದಲ್ಲಿ ಸಂಸ್ಥೆ ಉಳಿದಿರುವುದು ವಿಷಾದನೀಯ. ಸಂಸ್ಥೆಯ ಆಡಳಿತದಲ್ಲಿ ಸಾಮಾನ್ಯ ಸದಸ್ಯರಿಗೆ ಸಮಾನ ಅವಕಾಶ ದೊರೆಯಬೇಕು. ಸದಸ್ಯತ್ವವನ್ನು ಕುಟುಂಬದವರಿಗೆ ಸೀಮಿತಗೊಳಿಸುವ ಬದಲು ಅರ್ಹತೆ ಮತ್ತು ಪಾರದರ್ಶಕತೆಯ ಆಧಾರದ ಮೇಲೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಬಾರಿಯೂ ಸದಸ್ಯರ ಪತ್ನಿ, ಮಕ್ಕಳು ಹಾಗೂ ಕುಟುಂಬದವರಿಗೆ ಮಾತ್ರ ಸದಸ್ಯತ್ವ ಕಲ್ಪಿಸುವ ಪ್ರಯತ್ನ ನಡೆದರೆ ಕಲ್ಯಾಣ ಕರ್ನಾಟಕದ ಜನತೆ ಅದನ್ನು ಸಹಿಸುವುದಿಲ್ಲ. ಇದರಿಂದ ಜನಾಕ್ರೋಶ ಹೆಚ್ಚಾಗಿ ಸಂಸ್ಥೆಯ ಆಡಳಿತದ ವಿರುದ್ಧ ಪ್ರತಿಭಟನೆಗಳು ನಡೆಯುವ ಸಾಧ್ಯತೆಯಿದೆ. ಪರಿಸ್ಥಿತಿ ಕೈಮೀರುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.

ನಮೋಶಿಯವರು ಮುಕ್ತ ಮನಸ್ಸಿನಿಂದ ಎಲ್ಲ ವರ್ಗದ ಜನರಿಗೆ ಸದಸ್ಯತ್ವ ನೀಡುವ ಮೂಲಕ ಸಂಸ್ಥೆಯ ಅಭಿವೃದ್ಧಿ, ಆಡಳಿತ ಸುಧಾರಣೆ ಹಾಗೂ ಪ್ರಜಾಸತ್ತಾತ್ಮಕ ಬದಲಾವಣೆಗೆ ಮುನ್ನುಡಿ ಬರೆಯಬೇಕು. ಈ ಭಾಗದ ಜನರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರೊ. ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.