ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಲಬುರಗಿ ವಿದ್ಯಾರ್ಥಿಗಳ ಅಮೋಘ ಸಾಧನೆ

ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಲಬುರಗಿ ವಿದ್ಯಾರ್ಥಿಗಳ ಅಮೋಘ ಸಾಧನೆ

 ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಲಬುರಗಿ ವಿದ್ಯಾರ್ಥಿಗಳ ಅಮೋಘ ಸಾಧನೆ

36 ವಿದ್ಯಾರ್ಥಿಗಳಿಂದ 66 ಪದಕಗಳ ಸ್ಥಾನಗಳ ಗೆಲುವು

ಕಲಬುರಗಿ: ಮೈಸೂರಿನಲ್ಲಿ ನವೆಂಬರ್ 15ರಂದು ನಡೆದ ಮೈಸೂರ್ ಕಪ್ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಲಬುರಗಿಯ ಕಲರಿ-ಎನ್-ರ್ಯೂ ಅಕಾಡೆಮಿ ಆಫ್ ಇಂಡಿಯನ್ ಕರಾಟೆಯ 36 ವಿದ್ಯಾರ್ಥಿಗಳು ಕಟಾ ಮತ್ತು ಕುಮಿತೆ ವಿಭಾಗಗಳಲ್ಲಿ ಒಟ್ಟು 66 ಸ್ಥಾನಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಲಬುರಗಿ ಜಿಲ್ಲಾ ಮುಖ್ಯ ಕರಾಟೆ ತರಬೇತುದಾರ ಕಿಯೋಶಿ ರಾಜವರ್ಧನ್ ಜಿ. ಚೌಹಾಣ್ ಅವರ ನೇತೃತ್ವದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಟಾ ವಿಭಾಗದಲ್ಲಿ 12 ವಿದ್ಯಾರ್ಥಿಗಳು ಪ್ರಥಮ, 16 ವಿದ್ಯಾರ್ಥಿಗಳು ದ್ವಿತೀಯ ಹಾಗೂ 8 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. ಕುಮಿತೆ ವಿಭಾಗದಲ್ಲಿ 6 ವಿದ್ಯಾರ್ಥಿಗಳು ಪ್ರಥಮ, 12 ವಿದ್ಯಾರ್ಥಿಗಳು ದ್ವಿತೀಯ ಹಾಗೂ 10 ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ. ಹಿರಿಯ ಕರಾಟೆ ಮಾಸ್ಟರ್ ಕಟಾ ವಿಭಾಗದಲ್ಲಿ ಪ್ರತಾಪ್ ಸಿಂಗ್ ದ್ವಿತೀಯ ಹಾಗೂ ಶ್ರೀಕಾಂತ್ ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಅಕಾಡೆಮಿಯ ತರಬೇತುದಾರರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಚಾಂಪಿಯನ್‌ಶಿಪ್‌ನ್ನು ಯಶಸ್ವಿಯಾಗಿ ಆಯೋಜಿಸಿದ ಕಿಯೋಶಿ ಕೆ.ಪಿ. ಜೋಶ್ ಹಾಗೂ ಸೆನ್ಸಾಯಿ ನಾಗಾಭರಣ ಅವರಿಗೆ ಅಕಾಡೆಮಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.

ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಮತ್ತು ನಿರಂತರ ತರಬೇತಿಯೇ ಈ ಸಾಧನೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿಯೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡುವ ವಿಶ್ವಾಸವನ್ನು ತರಬೇತುದಾರರು ವ್ಯಕ್ತಪಡಿಸಿದ್ದಾರೆ.