ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ಕರೆದು ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ಕರೆದು ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ
ಕಲಬುರಗಿ: ನಗರದ ವಿವಿಧ ವಾರ್ಡ್ಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ (ಮೆಂಟೆನನ್ಸ್) ನಿಯಮಾನುಸಾರ ಟೆಂಡರ್ ಕರೆದು ಸ್ಥಳೀಯರಿಗೆ ಹಾಗೂ ಸ್ಥಳೀಯ ಸಫಾಯಿ ಕರ್ಮಚಾರಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಸೇನೆ (ರಿ.) ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ನಗರದ ವಿವಿಧ ವಾರ್ಡ್ಗಳಲ್ಲಿ ಕೆಲವು ಸಾರ್ವಜನಿಕ ಶೌಚಾಲಯಗಳು ಕಳೆದ ೧೦ರಿಂದ ೨೦ ವರ್ಷಗಳಿಂದ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ನಿರ್ವಹಿಸಲಾಗುತ್ತಿದೆ. ಇದರಿಂದ ಅರ್ಹ ಸ್ಥಳೀಯರಿಗೆ ಹಾಗೂ ಸ್ವಚ್ಛತಾ ಕಾರ್ಯವನ್ನೇ ಜೀವನಾಧಾರವಾಗಿಸಿಕೊಂಡಿರುವ ಸಫಾಯಿ ಕರ್ಮಚಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.
ರಾರಿ ತಂಗುದಾಣ (ವಾರ್ಡ್ ೬), ಕೆಎಂಎಫ್ ಹುಮನಾಬಾದ್ ರಸ್ತೆ (ವಾರ್ಡ್ ೪), ಗಂಜ್ ಬಸ್ ನಿಲ್ದಾಣ (ವಾರ್ಡ್ ೧೧), ಭೋವಿ ಗಲ್ಲಿ (ವಾರ್ಡ್ ೨೨), ಹುಮನಾಬಾದ್ ಬೇಸ್ ಅಯ್ಯರವಾಡಿ (ವಾರ್ಡ್ ೨೩), ಕಾಮತ್ ಹೋಟೆಲ್ ಹಿಂಭಾಗ (ವಾರ್ಡ್ ೨೪), ಮಹಾರಾಜ ಹೋಟೆಲ್ ಹಾಗೂ ತಹಸೀಲ್ ಕಚೇರಿ (ವಾರ್ಡ್ ೩೫), ಪಬ್ಲಿಕ್ ಗಾರ್ಡನ್ ಮೇನ್ ಗೇಟ್ ಹಾಗೂ ಜಗತ್ ಸರ್ಕಲ್ (ವಾರ್ಡ್ ೩೬), ಸಿಐಬಿ ಕಾಲೋನಿ (ಕೇಂದ್ರ ಬಸ್ ನಿಲ್ದಾಣ), ಕಣ್ಣಿ ಮಾರ್ಕೆಟ್ ಕ್ರಾಸ್ (ವಾರ್ಡ್ ೪೩), ಜಿಲ್ಲಾ ಕೋರ್ಟ್-ಇಂದಿರಾ ನಗರ (ವಾರ್ಡ್ ೪೫), ಪಂಚಶೀಲ ನಗರ (ವಾರ್ಡ್ ೫೦), ಎಚ್.ಕೆ. ಸ್ಕೂಲ್ ಅಯ್ಯರವಾಡಿ, ಚೇತನ ಸ್ಕೂಲ್ ಸಮೀಪ, ಬೋರಾಬಾಯಿ ನಗರ ಹಾಗೂ ಆಶ್ರಯ ಕಾಲೋನಿಯಲ್ಲಿರುವ ಶೌಚಾಲಯಗಳು ಸೇರಿದಂತೆ ಹಲವು ಕಡೆಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯದೆ ನಿರ್ವಹಣೆ ಮುಂದುವರಿದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಟೆಂಡರ್ ಮೂಲಕ ನಿರ್ವಹಣೆಯ ಶುಲ್ಕ, ತೆರಿಗೆ ಹಾಗೂ ಇತರ ವಿವರಗಳು ಪಾರದರ್ಶಕವಾಗಿ ಸಾರ್ವಜನಿಕರಿಗೆ ತಿಳಿಯಲಿವೆ. ಆದ್ದರಿಂದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ನಿಯಮಾನುಸಾರ ಟೆಂಡರ್ ಕರೆದು, ಸ್ಥಳೀಯ ಅರ್ಹರಿಗೆ ಅವಕಾಶ ನೀಡಬೇಕು. ಈಗಾಗಲೇ ಟೆಂಡರ್ ಆಗಿರುವ ಸುಮಾರು ಏಳು ಶೌಚಾಲಯಗಳ ಮಾದರಿಯಲ್ಲಿ ಉಳಿದ ಶೌಚಾಲಯಗಳಿಗೂ ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಸೇನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯಾಳಕರ್, ಸೇನೆಯ ಜಿಲ್ಲಾಧ್ಯಕ್ಷ ಭಜರಂಗಿಸಿAಗ್ ಠಾಕೋರ, ಮುಖಂಡ ರೋಹಿತ ಪಾಟೀಲ ಇದ್ದರು.

