ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದಿಂದ “ಅಮೃತ ಹಸ್ತದ ಮಣ್ಣಿನ ಗಣೇಶ” ಶಿಬಿರ ಯಶಸ್ವಿ

ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದಿಂದ “ಅಮೃತ ಹಸ್ತದ ಮಣ್ಣಿನ ಗಣೇಶ” ಶಿಬಿರ ಯಶಸ್ವಿ

ಮಣ್ಣಿನ ಗಣೇಶದ ಮೂಲಕ 120 ಹಳ್ಳಿಗಳಿಗೆ ಪರಿಸರದ ಸಂದೇಶ

ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದಿಂದ “ಅಮೃತ ಹಸ್ತದ ಮಣ್ಣಿನ ಗಣೇಶ” ಶಿಬಿರ ಯಶಸ್ವಿ

ದೇವರಹಿಪ್ಪರಗಿ: ಮೂಲ ಕಲೆ–ಭಕ್ತಿ–ಪರಿಸರ ಎಂಬ ಆಶಯದೊಂದಿಗೆ ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ), ವಿಜಯಪುರ ಹಾಗೂ ಬಸವ ಹಸಿರು ಬಳಗ (ರಿ), ದೇವರಹಿಪ್ಪರಗಿ ಜಂಟಿಯಾಗಿ ಯಾಳವಾರ ಗ್ರಾಮದಲ್ಲಿ ಆಯೋಜಿಸಿದ್ದ “ಅಮೃತ ಹಸ್ತದ ಮಣ್ಣಿನ ಗಣೇಶ” 8 ದಿನಗಳ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕಾ ಕಲಾ ಶಿಬಿರ ಯಶಸ್ವಿಯಾಗಿ ಸಮಾರೋಪಗೊಂಡಿತು.

ಮಣ್ಣಿನ ಸಾಂಪ್ರದಾಯಿಕ ಮೂರ್ತಿಕಲೆಯನ್ನು ಉಳಿಸಿ ಬೆಳೆಸುವುದು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಯುವ ಕಲಾವಿದರಿಗೆ ಮಣ್ಣಿನ ಮೂರ್ತಿಕಲೆಯ ಕುರಿತು ಪ್ರಾಯೋಗಿಕ ತರಬೇತಿ ನೀಡುವುದು ಮತ್ತು ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು.

ಶಿಬಿರದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅನುಭವಿ ಕಲಾವಿದರಾದ *ಶ್ಯಾನಪ್ಪ ನಾಯಕ, ಕೆಂಚಪ್ಪ ಬಡಿಗೇರ, ಯೇಸುರಾಜ, ನಾಗಯ್ಯ ವಸ್ತ್ರದ, ಉಮೇಶ ಪೋಳ, ನಾರಾಯಣ ಪಡಿಯಪ್ಪನವರ, ಮೌನೇಶ್ವರ, ವೆಂಕಟೇಶ ಕುಲಕರ್ಣಿ, ಅಶೋಕ ಕುಂಟೋಜಿ ಕಲಾ ಶಿಕ್ಷಕಿಯಾದ ಲಕ್ಷ್ಮಿ ಬಿರಾದಾರ, ಶಿವನಗೌಡ ಬಿರಾದಾರ, ಹಾಗೂ ಪ್ರದೀಪ ಗಣಿಮಠ ಅವರು ತರಬೇತುದಾರರಾಗಿ ಭಾಗವಹಿಸಿ, ಮಣ್ಣಿನ ಸಿದ್ಧತೆ, ಮೂರ್ತಿಯ ಮೂಲ ರಚನೆ, ಅಂಗಾಂಗಗಳ ಪ್ರಮಾಣಬದ್ಧ ವಿನ್ಯಾಸ, ಮುಖದ ರಚನೆ, ಮುಖಭಾವ, ಸೂಕ್ಷ್ಮ ಕೆತ್ತನೆ ಹಾಗೂ ಅಲಂಕಾರದ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಯುವ ಕಲಾವಿದರು ಹಾಗೂ ಬಸವ ಭಕ್ತರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಲಾವಿದರ ಮಾರ್ಗದರ್ಶನದಲ್ಲಿ ಸ್ವತಃ ಮಣ್ಣಿನ ಗಣೇಶ ಮೂರ್ತಿಗಳನ್ನು ನಿರ್ಮಿಸುವ ಅನುಭವ ಪಡೆದರು. ಬಸವ ಭಕ್ತರ ಪಾವನ ಹಸ್ತಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ನಿರ್ಮಿಸುವ ಮೂಲಕ ಭಕ್ತಿ ಮತ್ತು ಪರಿಸರ ಸಂರಕ್ಷಣೆಯನ್ನು ಒಂದಾಗಿ ಬೆಸೆಯುವ ಪ್ರಯತ್ನ ಮಾಡಲಾಯಿತು.

ಶಿಬಿರದ ಸಂದರ್ಭದಲ್ಲಿ ಶಾಲಾ ಮಕ್ಕಳು ಭೇಟಿ ನೀಡಿ ಕಲಾವಿದರು ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ನೇರವಾಗಿ ವೀಕ್ಷಿಸಿದರು. ಮಣ್ಣಿನ ಸಿದ್ಧತೆಯಿಂದ ಮೂರ್ತಿಯ ಅಂತಿಮ ರೂಪದವರೆಗೆ ನಡೆಯುವ ಪ್ರಕ್ರಿಯೆಯನ್ನು ಕುತೂಹಲದಿಂದ ಗಮನಿಸಿದ ಮಕ್ಕಳು, ಮಣ್ಣಿನ ಸಾಂಪ್ರದಾಯಿಕ ಕಲೆ, ಸೃಜನಶೀಲತೆ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಅರಿವು ಪಡೆದರು.

"ಭಗವಂತ ಮಾಡಿದ ನಿಸರ್ಗವನ್ನು ಹಾಳುಮಾಡದೇ, ನಿಸರ್ಗದ ಕುರಿತು ಕಾಳಜಿ ತೋರಿಸುವ ಮನಸ್ಸುಗಳನ್ನು ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗ ಮಾಡುತ್ತಿದೆ” ಎಂದು ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ಗುರು ಗಂಗಾಧರೇಶ್ವರ ಹಿರೇಮಠ, ಕರಿಬಂಟನಾಳ ಹೇಳಿದರು.

“ಗ್ರಾಮೀಣ ಪ್ರದೇಶದಲ್ಲಿ ಮಾತ್ರ ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕೃತಿ, ಭಕ್ತಿ, ಸೌಹಾರ್ದತೆ, ಸಹಬಾಳ್ವೆ ನೋಡಲು ಸಿಗುತ್ತವೆ. ಇಂದು ಕಲುಷಿತ ಸಮಾಜವನ್ನು ಸ್ವಸ್ಥ ಸಮಾಜವನ್ನಾಗಿ ಮಾಡುವದು ಅಗತ್ಯವಾಗಿದೆ. ಅದು ಯುವಕರ ಕೈಯಲ್ಲಿದೆ. ಪರಿಸರವು ಉಳಿಯಬೇಕು, ಸಮಾಜವು ಉಳಿಯಬೇಕು, ಕಲೆಯ ಜೊತೆಗೆ ಭಕ್ತಿಯೂ ಅರಳಬೇಕು. ಈ ದಿಸೆಯಲ್ಲಿ ಕಾರ್ಯ ಕೈಗೊಂಡ ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದ ಕಾರ್ಯ ಶ್ಲಾಘನೀಯ” ಎಂದು ವಿಜಯಪುರ ಕಲಾ ಮಂದಿರದ ನಿವೃತ್ತ ಪ್ರಾಚಾರ್ಯರು ಹಾಗೂ ಖ್ಯಾತ ಕಲಾವಿದರಾದ ಶ್ರೀ ಪಿ.ಎಸ್. ಕಡೆಮನಿ ಹೇಳಿದರು.

“ಸೃಷ್ಟಿಕರ್ತ ನೀಡಿರುವ ಶಕ್ತಿ, ಜ್ಞಾನ, ಸೃಜನಶೀಲತೆಯನ್ನು ಸಮುದಾಯದ ಸದುಪಯೋಗಕ್ಕೆ ಬಳಸಬೇಕು. ಮಾಡುವ ಸೇವೆಯನ್ನು ನಿಷ್ಠೆಯಿಂದ, ಆತ್ಮಸಾಕ್ಷಿಯಾಗಿ ಮಾಡಬೇಕು. 

ಸೃಷ್ಟಿಕರ್ತ ನೀಡಿರುವ ಸಮಯ ಪ್ರಕೃತಿಗೆ ದ್ವನಿ ಆಗಬೇಕು, ಕಲೆಯಲ್ಲಿ ಶಿಲೆ ಕಾಣಬೇಕು, ಶಿಲೆಯಲ್ಲಿ ಬೆಲೆ ತಾನಾಗಿಯೇ ಬರುತ್ತದೆ. ಯಾಳವಾರ ಗ್ರಾಮ ಕಲೆಯ ತವರಾಗಬೇಕು. ದೃಶ್ಯಬಿಂಬ ಕಲಾ ಪ್ರತಿಷ್ಠಾನ ಮತ್ತು ಬಸವ ಹಸಿರು ಬಳಗ ನಮ್ಮ ದೋಣಿ ಸಾಲಿನ ಜೋಳದ ತೆನೆಗಳಿಗೆ ಹೋಲಿಸಿ, ತೆನೆಯ ಕಾಳು ತಿಂದ ನೀವೆಲ್ಲ ಮುತ್ತು ರತ್ನಗಳಾಗಬೇಕು”ಎಂದು ಹಿರಿಯ ಕಲಾವಿದ ಶ್ರೀ ಎಸ್.ಟಿ. ಕೆಂಭಾವಿ ಪ್ರೋತ್ಸಾಹದ ನುಡಿಗಳನ್ನಾಡಿದರು.

ಈ ಶಿಬಿರದಲ್ಲಿ ನಿರ್ಮಾಣವಾಗಿರುವ 120 ಮಣ್ಣಿನ ಗಣೇಶನ ಜೊತೆಗೆ ಪ್ರತಿ ಹಳ್ಳಿಗೂ ಒಂದೊಂದು ತುಳಸಿ ಸಸಿಯನ್ನು ವಿತರಣೆ ಮಾಡುತ್ತೇವೆ. ಮಣ್ಣಿನ ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡದೇ, ಮನೆಯಲ್ಲಿಯೇ ಒಂದು ಮಡಿಕೆಯಲ್ಲಿ ನೀರಿನಲ್ಲಿ ಸುಲಭವಾಗಿ ಕರಗಿಸಿ, ಅದೇ ಮಣ್ಣಿನಲ್ಲಿ ತುಳಸಿ ನೆಟ್ಟು ಭಕ್ತಿಯಿಂದ ಪ್ರತಿದಿನ ಪೂಜಿಸಿದರೆ ಆ ವಿಘ್ನೇಶ್ವರನ ಆಶೀರ್ವಾದ ಪ್ರತಿದಿನ ನಮಗೆ ಸಿಗುತ್ತದೆ. ನಮ್ಮ ಮನಸ್ಸು ಮತ್ತು ಪರಿಸರವೂ ಶುದ್ಧವಾಗಿರುತ್ತದೆ ಎಂದು ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಣಕನಾಳ ಹೇಳಿದರು.

ಆದ್ಯಾತ್ಮ, ಪರಿಸರ ಮತ್ತು ಕಲೆಯ ಕುರಿತು ಸವಿಸ್ತಾರವಾಗಿ ಮಾರುತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಎಮ್. ಬಿ. ಮಡಿವಾಳರ ಮಾತನಾಡಿ ಮಕ್ಕಳ ಏಕಾಗ್ರತೆಯ ಒಂದು ಚಟುವಟಿಕೆಯನ್ನು ಮಾಡಿದರು.

“ವಿಜಯಪುರ ಜಿಲ್ಲೆ ಪಂಚನದಿಗಳ ನಾಡಾಗಿದ್ದರೂ ಬರಗಾಲ ಜಿಲ್ಲೆಯಾಗಿದೆ. ವಿಜಯಪುರ ಜಿಲ್ಲೆ ಹಚ್ಚ ಹಸಿರಿನಿಂದ ಕಂಗೊಳಿಸಬೇಕೆಂದರೆ ಭೀಮನಗೌಡ ಗುಣಕನಾಳರಂತಹ ಮುಂದಾಳತ್ವದ ವ್ಯಕ್ತಿಗಳಿಗೆ ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದ ಬೆಂಬಲಿಗರಾದ ಕಲಾವಿದರು, ಪರಿಸರ ಪ್ರೇಮಿಗಳು ಮತ್ತು ಬಸವ ಭಕ್ತರ ಒಗ್ಗಟ್ಟು ಇನ್ನಷ್ಟು ಹೆಚ್ಚಾಗಬೇಕು” ಎಂದು ಬಸವ ಹಸಿರು ಬಳಗದ ಗೌರವಾಧ್ಯಕ್ಷ ಶ್ರೀ ಎಸ್.ಎಸ್. ಗಡೆದ್ ಹೇಳಿದರು.

8 ದಿನಗಳ ಕಾಲ ನಡೆದ ಶಿಬಿರವು ಕಲಾವಿದರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಯುವ ಕಲಾವಿದರು, ಬಸವ ಭಕ್ತರು ಹಾಗೂ ಪರಿಸರಾಸಕ್ತರ ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಸಮಾರೋಪಗೊಂಡಿತು. ಶಿಬಿರದಲ್ಲಿ ತಯಾರಿಸಲಾದ 120 ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮುಂದಿನ ಒಂದು ವಾರದ ಬಳಿಕ ಹಂತ ಹಂತವಾಗಿ 120 ಹಳ್ಳಿಗಳಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದರೊಂದಿಗೆ ಪ್ರತಿ ಹಳ್ಳಿಗೂ ತುಳಸಿ ಸಸಿಯನ್ನು ವಿತರಿಸುವ ಯೋಜನೆಯೂ ಇದೆ.

ತರಬೇತಿ ನೀಡಿದ ಕಲಾವಿದರನ್ನು ದೃಶ್ಯಬಿಂಬ ಕಲಾ ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಕೇಮಶೆಟ್ಟಿ, ಕಾರ್ಯದರ್ಶಿ ಶಿವನಗೌಡ ಬಿರಾದಾರ ಹಾಗೂ ಎಲ್ಲ ಪದಾಧಿಕಾರಿಗಳು ಗೌರವಿಸಿ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಕಲಾವಿದರು, ಶಿಬಿರಾರ್ಥಿಗಳು, ಬಸವ ಹಸಿರು ಬಳಗದ ಪದಾಧಿಕಾರಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಆಯೋಜಕರ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

“ಮಣ್ಣಿನ ಕಲೆ ಉಳಿಸೋಣ–ಪರಿಸರ ಕಾಪಾಡೋಣ–ಭಕ್ತಿಯೊಂದಿಗೆ ಗಣೇಶೋತ್ಸವ ಆಚರಿಸೋಣ”ಎಂಬ ಆಶಯದೊಂದಿಗೆ ಆರಂಭಗೊಂಡ “ಅಮೃತ ಹಸ್ತದ ಮಣ್ಣಿನ ಗಣೇಶ” ಶಿಬಿರವು ಕಲೆ, ಭಕ್ತಿ ಮತ್ತು ಪರಿಸರ ಸಂರಕ್ಷಣೆಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಸಾರ್ಥಕ ಪ್ರಯತ್ನವಾಗಿ ಮೂಡಿಬಂದಿದೆ.

ಶ್ರೀ ಎಚ್.ಪಿ. ಕರಡಿ ಸ್ವಾಗತಿಸಿದರು. ಶ್ರೀ ಬಿ.ವಾಯ್. ಬಂಟನೂರ ನಿರೂಪಿಸಿದರು.