ಶಿಕ್ಷಕರ ದಿನವೇ ಶಿಕ್ಷಕರಿಗೆ ಪ್ರಜಾಸೇವೆಯ ಹೊರೆ: ಸರ್ಕಾರದ ಆದೇಶ ಮರುಪರಿಶೀಲಿಸಲು ನಮೋಶಿ ಆಗ್ರಹ
ಶಿಕ್ಷಕರ ದಿನಾಚರಣೆಯಂದೇ ಪ್ರಜಾ ಸೇವಾ ಕಾರ್ಯಕ್ರಮ: ಸರ್ಕಾರದ ಆದೇಶ ಮರುಪರಿಶೀಲಿಸಲಿ
ಶಿಕ್ಷಕರನ್ನು ಬೋಧನೇತರ ಕೆಲಸಗಳಿಂದ ಮುಕ್ತಗೊಳಿಸಿ, ಜನಸೇವಾ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ನಿರ್ವಹಿಸಲಿ: ಶಶೀಲ್ ಜಿ. ನಮೋಶಿ
ಕಲಬುರಗಿ, ಸೆ. 3: ದೇಶದಾದ್ಯಂತ ಶಿಕ್ಷಕರ ಸೇವೆ ಹಾಗೂ ತ್ಯಾಗವನ್ನು ಗೌರವಿಸುವ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರನ್ನು ಪ್ರಜಾ ಸೇವೆಯಂತಹ ಸರ್ಕಾರಿ ಕಾರ್ಯಕ್ರಮದಲ್ಲಿ ತೊಡಗಿಸುವುದು ಎಷ್ಟು ಸಮಂಜಸ? ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಪ್ರಶ್ನಿಸಿದ್ದಾರೆ. ಸೆಪ್ಟೆಂಬರ್ 5ರಿಂದ ಕಾರ್ಯಕ್ರಮ ಆರಂಭಿಸುವಂತೆ ಹೊರಡಿಸಿರುವ ಸರ್ಕಾರದ ಆದೇಶವನ್ನು ತಕ್ಷಣ ಮರುಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಭಾರತದ ಶ್ರೇಷ್ಠ ಶಿಕ್ಷಣತಜ್ಞ, ತತ್ವಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಶಿಕ್ಷಣದ ಮೂಲಕ ಸಮಾಜ ಮತ್ತು ರಾಷ್ಟ್ರದ ಭವಿಷ್ಯ ರೂಪಿಸುವ ಶಿಕ್ಷಕರ ಮಹತ್ವವನ್ನು ಎತ್ತಿಹಿಡಿಯುವುದು ಈ ದಿನದ ಮೂಲ ಆಶಯ.
ಇಂತಹ ರಾಷ್ಟ್ರೀಯ ಮಹತ್ವದ ದಿನದಂದು ಶಿಕ್ಷಕರನ್ನು ಮತ್ತೊಂದು ಸರ್ಕಾರಿ ಕಾರ್ಯಕ್ರಮದ ನಿರ್ವಹಣೆಯಲ್ಲಿ ತೊಡಗಿಸುವುದು ಶಿಕ್ಷಕರ ದಿನಾಚರಣೆಯ ಮೂಲ ಆಶಯವನ್ನೇ ಕಡೆಗಣಿಸಿದಂತಾಗುತ್ತದೆ ಎಂದು ನಮೋಶಿ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಗಸ್ಟ್ 27ರ ಆದೇಶದಂತೆ ಸೆ.5ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಅಭಿಯಾನ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ. ಶಾಲೆಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಕಾರ್ಯಕ್ರಮ ನಡೆಸುವಂತೆ ಸೂಚಿಸಿರುವುದರಿಂದ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
“ಶಿಕ್ಷಕರ ಮುಖ್ಯ ಜವಾಬ್ದಾರಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು. ಈಗಾಗಲೇ ಶಿಕ್ಷಕರು ಬೋಧನೆಯ ಜತೆಗೆ ದಾಖಲೆ ನಿರ್ವಹಣೆ, ಸಮೀಕ್ಷೆಗಳು, ಸಭೆಗಳು ಹಾಗೂ ವಿವಿಧ ಬೋಧನೇತರ ಸರ್ಕಾರಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಯುವಜನ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಜನಸೇವೆಗೆ ಸಂಬಂಧಿಸಿದ ವಿವಿಧ ಇಲಾಖೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸಿಬ್ಬಂದಿ ಇರುವಾಗ, ಇಂತಹ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಶಿಕ್ಷಕರ ಮೇಲೆಯೇ ವಹಿಸುವುದು ಏಕೆ? ಶಿಕ್ಷಕರ ದಿನದಂದೇ ಮತ್ತೊಂದು ಕಾರ್ಯಕ್ರಮದ ಹೊರೆ ಏಕೆ?” ಎಂದು ನಮೋಶಿ ಪ್ರಶ್ನಿಸಿದ್ದಾರೆ.
“ಶಿಕ್ಷಕರ ಸಮಯ ವಿದ್ಯಾರ್ಥಿಗಳಿಗಾಗಿ; ಪ್ರತಿಯೊಂದು ಸರ್ಕಾರಿ ಕಾರ್ಯಕ್ರಮಕ್ಕೂ ಅವರನ್ನು ಬಳಸಿಕೊಳ್ಳುವುದಕ್ಕಾಗಿ ಅಲ್ಲ. ಶಿಕ್ಷಕರ ಮೇಲಿನ ಬೋಧನೇತರ ಒತ್ತಡವನ್ನು ಕಡಿಮೆ ಮಾಡುವುದೇ ಸರ್ಕಾರದ ಆದ್ಯತೆಯಾಗಬೇಕು. ಜನಸೇವೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆಗಳು ಹಾಗೂ ಅವುಗಳ ಸಿಬ್ಬಂದಿಗೆ ವಹಿಸಬೇಕು. ಇದರಿಂದ ಶಿಕ್ಷಕರು ತಮ್ಮ ಮೂಲ ಕರ್ತವ್ಯವಾದ ಬೋಧನೆಗೆ ಸಂಪೂರ್ಣವಾಗಿ ಗಮನ ಹರಿಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಪ್ರಜಾ ಸೇವಾ ಕಾರ್ಯಕ್ರಮದ ಸೆಪ್ಟಂಬರ 5 ರಂದೆ ಆರಂಭಿಸಬೇಕೆಂಬ ಉದ್ದೇಶವಾದರೂ ಏಕೆ?
“ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುವುದರ ಉದ್ದೇಶವೇ ಶಿಕ್ಷಕರ ವೃತ್ತಿಯ ಘನತೆ, ಜ್ಞಾನ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ಗೌರವಿಸುವುದು. ಅದೇ ದಿನ ಶಿಕ್ಷಕರನ್ನು ಮತ್ತೊಂದು ಸರ್ಕಾರಿ ಕಾರ್ಯಕ್ರಮದ ಒತ್ತಡಕ್ಕೆ ಒಳಪಡಿಸುವುದು ಈ ಆಶಯಕ್ಕೆ ವಿರುದ್ಧವಾಗುತ್ತದೆ. ಆದ್ದರಿಂದ ಸರ್ಕಾರ ಯಾವುದೇ ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸದೆ, ಸೆ.5ರಿಂದ ಕಾರ್ಯಕ್ರಮ ಆರಂಭಿಸುವ ತನ್ನ ಆದೇಶವನ್ನು ಕೂಡಲೇ ಮರುಪರಿಶೀಲಿಸಬೇಕು” ಎಂದು ಶಶೀಲ್ ಜಿ. ನಮೋಶಿ ಅವರು ಒತ್ತಾಯಿಸಿದ್ದಾರೆ.

