ಕಲಾವಿದರಿಗೆ ಹೆಚ್ಚಿನ ನೆರವು ನೀಡುವಂತೆ ಸರ್ಕಾರಕ್ಕೆ ಒತ್ತಾಯ: ರಾಚನಗೌಡ ಮುದ್ನಾಳ
ಸುಗಮ ಸಂಗೀತ ಸಂಭ್ರಮೋತ್ಸವಕ್ಕೆ ಚಾಲನೆ – ಕಲಾವಿದರಿಗೆ ಹೆಚ್ಚಿನ ನೆರವು ನೀಡುವಂತೆ ಸರ್ಕಾರಕ್ಕೆ ಒತ್ತಾಯ
ಯಾದಗಿರಿ: ನಗರದ ಶ್ರೀರಾಮಕೃಷ್ಣ ಸ್ವಾಮಿ ವಿವೇಕಾನಂದ ಆಶ್ರಮದಲ್ಲಿ ಅಬ್ಬೆತುಮಕೂರಿನ ಶ್ರೀ ವಿಶ್ವಜ್ಯೋತಿ ಪುಟ್ಟರಾಜ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸುಗಮ ಸಂಗೀತ ಸಂಭ್ರಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡಿನಲ್ಲಿ ಕಲೆ ಮತ್ತು ಸಾಹಿತ್ಯ ಜೀವಂತವಾಗಿರಲು ಕಲಾವಿದರ ಶ್ರಮ ಮಹತ್ತರವಾಗಿದೆ. ಕಲಾವಿದರಿಗೆ ಅಗತ್ಯ ಸೌಲಭ್ಯಗಳು ಹಾಗೂ ಪ್ರೋತ್ಸಾಹ ನೀಡುವಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಕಲೆಯನ್ನು ನಂಬಿ ಬದುಕುತ್ತಿರುವ ಕಲಾವಿದರ ಜೀವನ ಕಷ್ಟಕರವಾಗಿದ್ದು, ಅವರಿಗೆ ಹೆಚ್ಚಿನ ಅನುದಾನ ಹಾಗೂ ನೆರವು ನೀಡಬೇಕೆಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸಿದ್ದರಾಜ ರೆಡ್ಡಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಾಕಷ್ಟು ಆರ್ಥಿಕ ನೆರವು ಅಗತ್ಯವಿದೆ. ಕಲಾವಿದರ ಪರಿಶ್ರಮವನ್ನು ಗೌರವಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಮಾಜ ಸಹಕಾರ ನೀಡಬೇಕೆಂದರು.
ವೀರಭಾರತಿ ಪ್ರತಿಷ್ಠಾನದ ಅಧ್ಯಕ್ಷ ವೈಜನಾಥ ಹಿರೇಮಠ ಮಾತನಾಡಿ, ಸಂಗೀತ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿಯಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಆಶ್ರಮದ ಸಂಚಾಲಕ ಪಿ. ವೇಣುಗೋಪಾಲ್ ಅವರು ಆಧ್ಯಾತ್ಮಿಕ ಸಂದೇಶ ನೀಡಿದರು.
ಶಿಕ್ಷಣ ಕ್ಷೇತ್ರದ ಸಾಧಕ ಶ್ರೀ ಶಂಕರ ಸೋನಾರ ಅವರಿಗೆ ‘ಶಿಕ್ಷಣ ರತ್ನ’, ಡಾ. ಸಿದ್ದರಾಜ ರೆಡ್ಡಿ ಅವರಿಗೆ ‘ಸಮಾಜ ಸೇವಾ ರತ್ನ’, ಪಿ. ವೇಣುಗೋಪಾಲ್ ಅವರಿಗೆ ‘ಆಧ್ಯಾತ್ಮಿಕ ಸೇವಾ ಸಿರಿ’ ಹಾಗೂ ಶ್ರೀಮತಿ ಜ್ಯೋತಿಲತಾ ತಡಿಬಿಡಿಮಠ ಅವರಿಗೆ ‘ಸಮಾಜ ಸೇವಾ ಸಿರಿ’ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.
ಸಂಗೀತ ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ, ಅಣ್ಣಾರಾವ ಶೆಳ್ಳಗಿ, ಪ್ರಶಾಂತ್ ಗೋಲ್ಡ್ ಸ್ಮಿತ್, ಪವಿತ್ರ ವಿಶ್ವನಾಥ್ ರಾಜನಾಳ, ಶರಣಬಸವ ಹೂಗಾರ್, ಚೇತನ್ ಎಸ್. ಬೀದಿಮನಿ ಸೇರಿದಂತೆ ಹಲವಾರು ಕಲಾವಿದರು ಗಾಯನ ಮತ್ತು ವಾದನದ ಮೂಲಕ ರಂಜಿಸಿದರು.
ಸಂಸ್ಥೆಯ ಅಧ್ಯಕ್ಷ ತೋಟಯ್ಯ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲಿಂಗಯ್ಯ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು.
