ಮರೆಯಲಾಗದ ಮೌನ
ಮರೆಯಲಾಗದ ಮೌನ
ಬೆಳದಿಂಗಳ ರಾತ್ರಿಯಲ್ಲಿ ಒಂಟಿಯಾಗಿ ಕುಳಿತಾಗ,
ನಿನ್ನ ನೆನಪುಗಳು ಹಕ್ಕಿಗಳಾಗಿ ಮೈಮರೆತು ಹಾರಿದವು,
ನಾವು ಜೊತೆಯಾಗಿ ನಡೆದ ಹಾದಿಯ ಧೂಳಿನ ಕಣಗಳು,
ಇಂದಿಗೂ ನನ್ನ ಕಾಲಿಗೆ ಅಂಟಿಕೊಂಡಿವೆ, ಮರೆಯಲಾಗದ ಕಲೆಗಳಾಗಿ.
ನೀನು ಬರೆದ ಆ ಮೊದಲ ಪತ್ರದ ಶಾಯಿ ಇನ್ನೂ ಹಸಿರಾಗಿದೆ,
ಆದರೆ ನಿನ್ನ ಮನಸ್ಸಿನ ಅಕ್ಷರಗಳು ಬದಲಾಗಿವೆ.
ನಮ್ಮ ಮಾತುಗಳ ನಡುವೆ ಈಗ ಬರಿ ಮೌನವೇ ತುಂಬಿದೆ,
ಆ ಮೌನಕ್ಕೆ ಕಿವಿಯಾಗಿ, ಪ್ರತಿಧ್ವನಿಗಾಗಿ ಕಾಯುತ್ತಿದ್ದೇನೆ.
ನಮ್ಮ ಪ್ರೀತಿ ಒಂದು ಸುಂದರ ಕನಸಾಗಿತ್ತು,
ಬೆಳಗಾಗುತ್ತಲೇ ಮಾಯವಾದ ದೃಶ್ಯವಾಗಿತ್ತು.
ನನ್ನ ಕನಸುಗಳ ಅರಮನೆಯಲ್ಲಿ ನೀನು ರಾಣಿಯಾಗಿದ್ದೆ,
ಆದರೆ ವಾಸ್ತವದ ಬಾಗಿಲು ತೆರೆದಾಗ,
ಅಲ್ಲಿ ನಿನ್ನ ನೆರಳು ಮಾತ್ರ ಉಳಿದಿತ್ತು.
ನನ್ನೀ ಒಂಟಿತನಕ್ಕೆ ಸಾಕ್ಷಿ ಈ ಮಬ್ಬಾದ ತಾರೆಗಳು,
ನಿನ್ನ ಕಣ್ಣುಗಳ ಮಿಂಚು ಇಂದಿಗೂ ಅವುಗಳಲ್ಲಿ ಕಾಣುತ್ತದೆ.
ನನ್ನ ಹೃದಯದ ಗಾಯಗಳಿಗೆ ಮದ್ದು ಅರೆಯುವವಳೂ ನೀನೇ,
ಆದರೆ ಗಾಯ ಮಾಡಿದವರೂ ನೀನೇ ಎಂಬ ಸತ್ಯ,
ಪ್ರತಿಕ್ಷಣವೂ ನನ್ನನ್ನು ಕಾಡುತ್ತಲೇ ಇದೆ.
ಕಾಲ ಬದಲಾಗಿದೆ, ಋತುಗಳು ಉರುಳಿವೆ,
ಬಾಡಿದ ಹೂವುಗಳು ಉದುರಿ ಹೊಸ ಚಿಗುರು ಬಂದಿದೆ.
ಆದರೆ ನನ್ನ ಮನದ ಮರದಲ್ಲಿ ನಿನ್ನ ನೆನಪಿನ ಬಳ್ಳಿ,
ಇಂದಿಗೂ ಹಸಿರಾಗಿಯೇ ಇದೆ, ಬಾಡದಂತೆ ಉಳಿದಿದೆ.
ಬೇರ್ಪಡೆಯೆಂಬುದು ಸಾವು ಎಂದುಕೊಂಡಿದ್ದೆ,
ಆದರೆ ಈಗ ಅರ್ಥವಾಗುತ್ತಿದೆ, ಅದೊಂದು ಬಗೆಯ ಬದುಕು.
ನಿನ್ನಿಲ್ಲದ ಈ ಬದುಕಿನಲ್ಲಿ, ನಿನ್ನನ್ನೇ ನೆನೆಯುತ್ತಾ,
ನನ್ನ ಅಸ್ತಿತ್ವವನ್ನೇ ನಾನು ಮರೆಯುತ್ತಿದ್ದೇನೆ.
ನೀನು ಹೋಗುವಾಗ ಏನನ್ನೂ ಹೇಳಲಿಲ್ಲ,
ಕೇವಲ ಒಂದು ನೋಟದ ಮೂಲಕ ಎಲ್ಲವನ್ನೂ ಮುಗಿಸಿದೆ.
ಆ ನೋಟದಲ್ಲಿ ನೋವಿತ್ತು, ಅನಿವಾರ್ಯತೆಯಿತ್ತು,
ಅದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ,
ನನ್ನ ಪ್ರಪಂಚವೇ ಬರಿದಾಗಿತ್ತು.
ಈಗ ನಮ ನಡುವೆ ಇರುವುದು ಸಾವಿರ ಮೈಲಿಗಳ ಅಂತರ,
ಆದರೆ ಆತ್ಮದ ಮಟ್ಟಿಗೆ ನಾವು ಇನ್ನೂ ಹತ್ತಿರ.
ನಿನಗೆ ಬೇರೆಯವರ ಬಾಳಲ್ಲಿ ಸುಖ ಸಿಗಲಿ,
ನನ್ನ ಕಣ್ಣೀರ ಬಾವಿಯಲ್ಲಿ ನಿನ್ನ ನೆನಪುಗಳೇ ಉಸಿರಾಗಲಿ.
-ಜೀವನ್ s
