ಸಂಸ್ಕೃತ ಸೇವೆಗೆ ರಾಷ್ಟ್ರೀಯ ಗೌರವ: ಆಚಾರ್ಯ ವೀರನಾರಾಯಣ ಪಾಂಡುರಂಗಿ ಅವರಿಗೆ " ಮಹಾಕವಿ ಕಾಳಿದಾಸ ಸಂಸ್ಕೃತವ್ರತಿ ರಾಷ್ಟ್ರೀಯ ಯುವ ಪ್ರಶಸ್ತಿ"

ಸಂಸ್ಕೃತ ಸೇವೆಗೆ ರಾಷ್ಟ್ರೀಯ ಗೌರವ: ಆಚಾರ್ಯ ವೀರನಾರಾಯಣ ಪಾಂಡುರಂಗಿ ಅವರಿಗೆ " ಮಹಾಕವಿ ಕಾಳಿದಾಸ ಸಂಸ್ಕೃತವ್ರತಿ ರಾಷ್ಟ್ರೀಯ ಯುವ ಪ್ರಶಸ್ತಿ"

ಸಂಸ್ಕೃತ ಸೇವೆಗೆ ರಾಷ್ಟ್ರೀಯ ಗೌರವ: ಆಚಾರ್ಯ ವೀರನಾರಾಯಣ ಪಾಂಡುರಂಗಿ ಅವರಿಗೆ " ಮಹಾಕವಿ ಕಾಳಿದಾಸ ಸಂಸ್ಕೃತವ್ರತಿ ರಾಷ್ಟ್ರೀಯ ಯುವ ಪ್ರಶಸ್ತಿ" 

ಬೆಂಗಳೂರು, ಜುಲೈ 15: ಸಂಸ್ಕೃತ ಭಾಷೆ, ವೇದ-ಶಾಸ್ತ್ರ ಹಾಗೂ ಭಾರತೀಯ ಜ್ಞಾನಪರಂಪರೆಯ ಪ್ರಸಾರಕ್ಕೆ ಸಲ್ಲಿಸಿದ ಅಪೂರ್ವ ಸೇವೆಯನ್ನು ಪರಿಗಣಿಸಿ ಖ್ಯಾತ ಸಂಸ್ಕೃತ ವಿದ್ವಾಂಸ ಆಚಾರ್ಯ ಡಾ. ವೀರನಾರಾಯಣ ಪಾಂಡುರಂಗಿ ಅವರಿಗೆ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ (KKSU), ರಾಮಟೇಕ್, ಮಹಾರಾಷ್ಟ್ರ ವತಿಯಿಂದ ಪ್ರತಿಷ್ಠಿತ "ಮಹಾಕವಿ ಕಾಳಿದಾಸ ಸಂಸ್ಕೃತವ್ರತಿ ರಾಷ್ಟ್ರೀಯ ಯುವ ಪ್ರಶಸ್ತಿ"ಯನ್ನು ಜುಲೈ 15ರಂದು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಮಹಾಕವಿ ಕಾಳಿದಾಸ ದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರದಾನಗೊಂಡಿತು.

ಈ ಪ್ರಶಸ್ತಿಯು ಸಂಸ್ಕೃತ ಭಾಷೆ, ಸಾಹಿತ್ಯ, ಜ್ಯೋತಿಷ್ಯ, ಭಾರತೀಯ ತತ್ವಶಾಸ್ತ್ರ ಹಾಗೂ ಭಾರತೀಯ ಜ್ಞಾನಪರಂಪರೆಯ ಸಂರಕ್ಷಣೆ, ಸಂವರ್ಧನೆ ಮತ್ತು ಪ್ರಸಾರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ವಿದ್ವಾಂಸರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ನೀಡಲಾಗುತ್ತದೆ. ಈ ಬಾರಿ ದೇಶದ ವಿವಿಧ ಭಾಗಗಳ ಹನ್ನೆರಡು ಮಂದಿ ಹಿರಿಯ ಮತ್ತು ಯುವ ಸಂಸ್ಕೃತ ವಿದ್ವಾಂಸರನ್ನು ಹಲವು ವಿಭಾಗಗಳಲ್ಲಿ ಸನ್ಮಾನಿಸಲಾಯಿತು.

ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕರಾಗಿರುವ ಆಚಾರ್ಯ ಡಾ. ವೀರನಾರಾಯಣ ಪಾಂಡುರಂಗಿ ಅವರು ವೇದಾಂತ, ದ್ವೈತ ತತ್ವಶಾಸ್ತ್ರ, ಸಂಸ್ಕೃತ ಸಾಹಿತ್ಯ ಮತ್ತು ಭಾರತೀಯ ಜ್ಞಾನಪರಂಪರೆಯ ಅಧ್ಯಯನ ಹಾಗೂ ಅಧ್ಯಾಪನದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಸಂಶೋಧನಾ ಕೃತಿಗಳು, ಗ್ರಂಥಸಂಪಾದನೆ, ಉಪನ್ಯಾಸಗಳು ಹಾಗೂ ವಿದ್ಯಾರ್ಥಿಗಳಲ್ಲಿ ಸಂಸ್ಕೃತಾಭಿಮಾನ ಬೆಳೆಸುವ ಕಾರ್ಯ ದೇಶಾದ್ಯಂತ ಮೆಚ್ಚುಗೆ ಪಡೆದಿವೆ. ಅವರು ವಿವಿಧ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮೂಲಕ ಸಂಸ್ಕೃತ ಶಿಕ್ಷಣದ ವಿಸ್ತರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪ್ರಭಾರ ಕುಲಪತಿ ಡಾ.ಅತುಲ್ ಎನ್ ವೈದ್ಯ ರವರು ಭಾರತೀಯ ಸಂಸ್ಕೃತಿಯ ಮೂಲಾಧಾರವಾದ ಸಂಸ್ಕೃತ ಭಾಷೆಯ ಪುನರುಜ್ಜೀವನಕ್ಕೆ ಇಂತಹ ವಿದ್ವಾಂಸರ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಯುವ ಪೀಳಿಗೆಯಲ್ಲಿ ಸಂಸ್ಕೃತ ಅಧ್ಯಯನದ ಆಸಕ್ತಿ ಹೆಚ್ಚಿಸಲು ಡಾ. ಪಾಂಡುರಂಗಿ ಅವರಂತಹ ವಿದ್ವಾಂಸರ ಮಾರ್ಗದರ್ಶನ ಪ್ರೇರಣಾದಾಯಕವಾಗಿದೆ ಎಂದು ಶ್ಲಾಘಿಸಿದರು.

ಪ್ರಶಸ್ತಿಯೊಂದಿಗೆ ₹25,000 ನಗದು, ಪ್ರಶಸ್ತಿ ಫಲಕ, ಗೌರವಪತ್ರ, ಶಾಲು ಹಾಗೂ ಶ್ರೀಫಲ ನೀಡಿ ಗೌರವಿಸಲಾಯಿತು.

ಈ ರಾಷ್ಟ್ರೀಯ ಗೌರವಕ್ಕೆ ಶಿಕ್ಷಣತಜ್ಞರು, ಸಂಸ್ಕೃತ ವಿದ್ವಾಂಸರು, ಶಿಷ್ಯವೃಂದ ಹಾಗೂ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಸಂಘಟನೆಗಳು ಅಭಿನಂದನೆ ಸಲ್ಲಿಸಿದ್ದು, ಇದು ಕರ್ನಾಟಕಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.