ಸಂಭಾಜಿಯವರ ತ್ಯಾಗ, ಸಾಹಸ, ದೇಶಭಕ್ತಿ ಎಲ್ಲರಿಗೂ ಪ್ರೇರಣೆ: ಶಾಸಕ ಪ್ರಭು ಚವ್ಹಾಣ

ಸಂಭಾಜಿಯವರ ತ್ಯಾಗ, ಸಾಹಸ, ದೇಶಭಕ್ತಿ ಎಲ್ಲರಿಗೂ ಪ್ರೇರಣೆ: ಶಾಸಕ ಪ್ರಭು ಚವ್ಹಾಣ

ಔರಾದನಲ್ಲಿ ಸಂಭಾಜಿ ಮಹಾರಾಜರ ಜಯಂತಿ ಆಚರಣೆ

ಸಂಭಾಜಿಯವರ ತ್ಯಾಗ, ಸಾಹಸ, ದೇಶಭಕ್ತಿ ಎಲ್ಲರಿಗೂ ಪ್ರೇರಣೆ: ಶಾಸಕ ಪ್ರಭು ಚವ್ಹಾಣ

ಶೌರ್ಯ, ತ್ಯಾಗ ಹಾಗೂ ರಾಷ್ಟ್ರಾಭಿಮಾನದ ಪ್ರತೀಕವಾಗಿರುವ ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿಯನ್ನು ಔರಾದನಲ್ಲಿ ಮೇ.14ರಂದು ಭಕ್ತಿಭಾವದಿಂದ ಆಚರಿಸಲಾಯಿತು. ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸಂಭಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವ ಮೂಲಕ ಗೌರವ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಸಂಭಾಜಿಯವರು ತಂದೆಯಂತೆ ಶೌರ್ಯ, ಪರಾಕ್ರಮ, ರಾಷ್ಟ್ರಭಕ್ತಿ ಹಾಗೂ ಧರ್ಮರಕ್ಷಣೆಗೆ ಹೆಸರುವಾಗಿದ್ದರು. ಬಾಲ್ಯದಲ್ಲಿಯೇ ಯುದ್ಧ ಕಲೆ, ಆಡಳಿತ ಹಾಗೂ ರಾಜತಾಂತ್ರಿಕತೆಯ ಕುರಿತು ಪ್ರಾವೀಣ್ಯತೆ ಹೊಂದಿದ್ದರು. ತಂದೆಯ ಆದರ್ಶಗಳನ್ನು ಅನುಸರಿಸಿ ಮರಾಠಾ ಸಾಮ್ರಾಜ್ಯವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಮೊಘಲ ಅರಸರ ವಿರುದ್ಧ ನಿರಂತರ ಹೋರಾಟ ನಡೆಸಿ ಸ್ವರಾಜ್ಯ ಹಾಗೂ ಧರ್ಮರಕ್ಷಣೆಗೆ ತಮ್ಮ ಜೀವನವನ್ನೇ ಅರ್ಪಿಸಿದರು. ಸಂಕಷ್ಟ, ಹಿಂಸೆ ಹಾಗೂ ಒತ್ತಡಗಳ ನಡುವೆಯೂ ಧರ್ಮ, ನಾಡು ಮತ್ತು ಸ್ವಾಭಿಮಾನವನ್ನು ಬಿಟ್ಟುಕೊಡುವುದಿಲ್ಲ. ಅವರ ತ್ಯಾಗ, ಸಾಹಸ ಮತ್ತು ಅಪ್ರತಿಮ ದೇಶಭಕ್ತಿ ಕೋಟ್ಯಾಂತರ ಜನರಿಗೆ ಪ್ರೇರಣೆಯಾಗಿದೆ. ದೇಶ ಕಂಡ ಅಪರೂಪದ ಮಹಾರಾಜರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಅವರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಶಾಸಕರು ಸಂಭಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮರಾಠಾ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಸಮಾಜ ಬಾಂಧವರು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಕಾಮಗಾರಿಯನ್ನು ಸುಂದರ, ಸುಸಜ್ಜಿತವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಅಂದಾಜು ಪಟ್ಟಿಯಲ್ಲಿರುವಂತೆ ಎಲ್ಲ ಕೆಲಸಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಕಳಪೆ ಕಂಡುಬAದರೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲವೆಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ ಮಾತನಾಡಿ, ಔರಾದನಲ್ಲಿ ಸುಂದರ ಮರಾಠಾ ಭವನ ನಿರ್ಮಾಣವಾಗಬೇಕೆಂಬುದು ಬಹಳಷ್ಟು ದಿನಗಳ ಬೇಡಿಕೆಯಾಗಿದೆ. ಎಲ್ಲರ ಆಶಯದಂತೆ ಶಾಸಕರು ಅಗತ್ಯ ಅನುದಾನ ಮಂಜೂರು ಮಾಡಿಸಿ, 2023ರಲ್ಲಿ ಯೋಜನೆಗೆ ಅದ್ದೂರಿಯಾಗಿ ಭೂಮಿಪೂಜೆ ನೆರವೇರಿಸಿದ್ದರು. ಸಮರ್ಪಕ ಅನುದಾನ ಲಭ್ಯವಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಇದೀಗ ಕಾಮಗಾರಿ ಆರಂಭಗೊAಡಿದೆ. ಸಮಾಜದ ಜನತೆಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಶಾಸಕರು ತಮ್ಮ ಸ್ವಂತ ಮಾಲೀಕತ್ವದ ಜಮೀನಿನಲ್ಲಿ ಒಂದು ಏಕರೆ ಜಮೀನನ್ನು ದೇಣಿಗೆಯಾಗಿ ನೀಡಿದ್ದಾರೆ. ಅಲ್ಲಿಯೇ ಸುಂದರವಾದ ಮರಾಠಾ ಭವನ ನಿರ್ಮಾಣವಾಗುತ್ತಿದೆ. ಇದು ಸಮಾಜದ ಎಲ್ಲರಿಗೂ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ಪ್ರವೀಣ ಕಾರಬಾರಿ, ವೆಂಕಟರಾವ ನೆಳಗೆ, ಕಮಲಾಕರ ಗುರೂಜಿ, ಕೇರಬಾ ಪವಾರ, ಚೇತನ ಕಪ್ಪಿಕೇರೆ, ಸಂಜೀವಕುಮಾರ ಜಾಧವ, ಮಾಧವ ಮಾಳಕಾರಿ, ಕೇಶವ ಪವಾರ, ರಾಮರಾವ ಪಾಟೀಲ, ರಾಮರಾವ ಜಾಧವ, ಶಿವರಾಜ ಜುಲಾಂಡೆ, ಸೂರ್ಯಕಾಂತ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ವಕೀಲ ಶಿವರಾಜ ಅಲ್ಮಾಜೆ, ರಾಜೇಂದ್ರ ಜಾಧವ, ಭರತ ಕದಂ, ಪ್ರಕಾಶ ಬರ್ದಾಪೂರೆ, ರಂಜಿತ ಶಿಂಧೆ ಸೇರಿದಂತೆ ಮರಾಠಾ ಸಮಾಜದ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇದೇ ವೇಳೆ ಶಾಸಕರು ಮರಾಠಾ ಭವನದ ಸ್ಥಳ ಪರಿಶೀಲನೆ ನಡೆಸಿದರು.