ಅಂಬೇಡ್ಕರ್ ಆದರ್ಶ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಿ: ಮಿಥುನ ಪಾಟೀಲ್ ಕರೆ

ಅಂಬೇಡ್ಕರ್ ಆದರ್ಶ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಿ: ಮಿಥುನ ಪಾಟೀಲ್ ಕರೆ

ಅಂಬೇಡ್ಕರ್ ಆದರ್ಶ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಿ: ಮಿಥುನ ಪಾಟೀಲ್ ಕರೆ

ಅಬ್ಬಿಗೇರಿ ಗ್ರಾಮದಲ್ಲಿ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರ 6.8 ಅಡಿ ಎತ್ತರದ ಭವ್ಯ ಮೂರ್ತಿ ಅನಾವರಣ

ರೋಣ ಜೂನ್ 9: ಸಮಾಜದಲ್ಲಿದ್ದ ಅಂಧಕಾರ, ಅಸಮಾನತೆ ಹಾಗೂ ಜಾತಿಯ ಪಿಡುಗನ್ನು ಹೋಗಲಾಡಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಅಪ್ರತಿಮ ಶ್ರಮ ವಹಿಸಿದ್ದಾರೆ. ಯುವಜನತೆ ಅವರ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮಿಥುನ ಪಾಟೀಲ್ ಅವರು ಕರೆ ನೀಡಿದರು.

ತಾಲೂಕಿನ ಅಬ್ಬಿಗೇರಿ ಗ್ರಾಮದ ಸರಕಾರಿ ಬಾಲಕರ ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವಜ್ಞಾನಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 6.8 ಅಡಿ ಎತ್ತರದ ಭವ್ಯ ಮೂರ್ತಿಯ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಬಾಬಾಸಾಹೇಬರ ಹೋರಾಟದ ದಿನಗಳನ್ನು ಸ್ಮರಿಸಿದ ಮಿಥುನ ಪಾಟೀಲ್, ಹಿಂದಿನ ಕಾಲದಲ್ಲಿ ಅನೇಕ ಕಷ್ಟ, ನಿಂದನೆ ಹಾಗೂ ಅವಮಾನಗಳನ್ನು ಸಹಿಸಿಕೊಂಡು ಶಿಕ್ಷಣ ಪಡೆದ ಅಂಬೇಡ್ಕರ್ ಅವರ ಕೀರ್ತಿ ಇಡೀ ಸಮಾಜಕ್ಕೆ ಮಾರ್ಗದರ್ಶನವಾಗಿದೆ. ಜ್ಞಾನದ ಪಂಡಿತರಾಗಿದ್ದ ಅವರು ದೇಶಕ್ಕೆ ನೀಡಿದ ಸಂವಿಧಾನವು ನಾವೆಲ್ಲರೂ ಸರಿ ಸಮಾನರಾಗಿ, ಗೌರವದಿಂದ ಬದುಕಬೇಕೆನ್ನುವ ಉದಾತ್ತ ಸಂದೇಶವನ್ನು ಸಾರುತ್ತದೆ. ಇದೇ ಸಂದೇಶವೇ ಇಂದಿನ ಯುವ ಪೀಳಿಗೆಗೆ ದಿಕ್ಸೂಚಿಯಾಗಬೇಕು ಎಂದರು.

ಮುಂದುವರಿದು ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳಿಗೆ ಕೇವಲ ಆಸ್ತಿ ಮಾಡುವುದಕ್ಕಿಂತ ಹೆಚ್ಚಾಗಿ ಉತ್ತಮ ಶಿಕ್ಷಣವನ್ನು ಕೊಡಿಸಬೇಕು. ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಹಾಗೂ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆ ಮೂಲಕ ಬಾಬಾಸಾಹೇಬರ ಕನಸನ್ನು ನನಸು ಮಾಡಬೇಕು" ಎಂದು ತಿಳಿಸಿದರು.

ದಿವ್ಯ ಸಾನಿಧ್ಯ ಹಾಗೂ ಮುಖಂಡರ ಉಪಸ್ಥಿತಿ:

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ ಜಿಲ್ಲೆ ಕಪ್ಪತ್ಗುಡ್ಡ ಸಂಸ್ಥಾನಮಠ ದೋಣಿಯ ಪರಮ ಪೂಜ್ಯಶ್ರೀ ಮನಿಪ್ರ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಅಬ್ಬಿಗೇರಿಯ ಯಲ್ಲಾಲಿಂಗೇಶ್ವರ ಮಠದ ಪರಮ ಪೂಜ್ಯ ಶ್ರೀ ಬಸವರಾಜ ಶರಣರು ವಹಿಸಿ ಆಶೀರ್ವಚನ ನೀಡಿದರು.

ವೇದಿಕೆಯ ಮೇಲೆ ಪ್ರಮುಖ ಮುಖಂಡರಾದ ಹನುಮಂತಪ್ಪ ದಸ್ವಾಲ, ಬಸವರಾಜ ತಳವಾರ, ಎಸ್. ಎನ್. ಬಳ್ಳಾರಿ, ವೀರಪ್ಪ ತಗ್ಗಿನಮನಿ, ಸಂಜಯ್ ದೊಡಮನಿ, ಸೇರಿದಂತೆ ಗದಗ ಮತ್ತು ರೋಣ ತಾಲೂಕಿನ ದಲಿತ ಪರ ಸಂಘಟನೆಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಬ್ಬಿಗೇರಿ ಗ್ರಾಮದ ಸದ್ಭಕ್ತರು, ಗುರುಹಿರಿಯರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ