ಹಿಂದೂ ಸಮಾವೇಶ ಮಾಡುವವರೆ ಈ ನೆಲದ ಮೊದಲ ಭಯೋತ್ಪಾದಕರು - ಕೆ.ನೀಲಾ
ಹಿಂದೂ ಸಮಾವೇಶ ಮಾಡುವವರೆ ಈ ನೆಲದ ಮೊದಲ ಭಯೋತ್ಪಾದಕರು - ಕೆ.ನೀಲಾ
ಶಹಪುರ : ಅಂದು ಕಲ್ಯಾಣದಲ್ಲಿ ಹರಳಯ್ಯ ಮತ್ತು ಮಧುವರಸರ ಮಕ್ಕಳಿಗೆ ಅಂತರ್ಜಾತಿ ವಿವಾಹ ಏರ್ಪಡಿಸಿದ ಸಲುವಾಗಿ ಈ ಕ್ರಾಂತಿಕಾರಿ ಹೆಜ್ಜೆಯನ್ನು ಸಹಿಸದ ಹಿಂದೂವಾದಿಗಳೆ ಈ ನೆಲದ ಮೊದಲ ಭಯೋತ್ಪಾದಕರು ಎಂದು ಕಲ್ಬುರ್ಗಿಯ ಪ್ರಗತಿಪರ ಚಿಂತಕಿ ಕೆ.ನೀಲಾ ಹೇಳಿದರು.
ಶಹಪೂರ ನಗರದ ಸಿಪಿಎಸ್ ಶಾಲಾ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಕಲ್ಯಾಣ ಕರ್ನಾಟಕ ಬಸವಪರ ಸಂಘಟನೆ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟಗಳ ಸಹಯೋಗದಲ್ಲಿ ಆಯೋಜಿಸಿದ ಬಸವಾದಿ ಶರಣರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವ ಭೇದ ಭಾವ ಇಲ್ಲದೆ ಇಡೀ ಜಗತ್ತಿಗೆ ಸರ್ವಸಮಾನತೆಯ ಸಂದೇಶ ಕೊಟ್ಟ ಬಸವಾದಿ ಶರಣರ ತತ್ವಗಳಿಗೆ ಧಕ್ಕೆ ಬಂದಾಗ ನಾವು ಸುಮ್ಮನಿರದೇ ಪ್ರತಿಭಟಿಸಬೇಕು ಇಂತಹ ಸಂದರ್ಭಗಳು ಉದ್ಭವಿಸಿದಾಗ ಸರಕಾರ ಜವಾಬ್ದಾರಿಯಿಂದ ಹಾಗೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಖಾರವಾಗಿ ನುಡಿದರು
ಕಲಬುರ್ಗಿಯ ಜಾಗತಿಕ ಲಿಂಗಾಯತ ಮಹಾಸಭಾದ ಆರ್. ಜಿ.ಶೆಟಗಾರ ಮಾತನಾಡಿ ಕೋಮು ಸೌಹಾರ್ದತೆ ಕದಡಿ ಹಾಗೂ ಪ್ರಚೋದನಕಾರಿ ಭಾಷಣ ನೀಡುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗಳಿಗೆ ಗಡಿಪಾರು ಮಾಡಬೇಕೆಂದು ಈ ಸಂದರ್ಭದಲ್ಲಿ ಸರಕಾರಕ್ಕೆ ಮನವಿ ಮಾಡಿಕೊಂಡರು.
ಪ್ರಗತಿಪರ ಚಿಂತಕಿ ಮಹಿಳಾ ಹೋರಾಟಗಾರರು ಹಾಗೂ ತತ್ವಪದಕಾರರಾದ ಡಾ: ಮೀನಾಕ್ಷಿ ಬಾಳಿ ಮಾತನಾಡಿ ಸಮಾಜದಲ್ಲಿ ಜಾತಿವಾದ ಹಾಗೂ ಕೋಮುವಾದ ಸೃಷ್ಟಿಸಿ ಮತ್ತಷ್ಟು ಬೆಂಕಿ ಹಚ್ಚುವ ಕೆಲಸ ಮಾಡುವುದೇ ಈ ಹಿಂದೂ ಸಮಾವೇಶದ ಮೂಲ ಉದ್ದೇಶವಾಗಿದೆ,ಹಿಂದೂ ಸಮಾವೇಶಕ್ಕೆ ಮೆರಗು ತರಲು ಬಸವಣ್ಣನವರ ಹೆಸರು ಬಳಕೆ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ನುಡಿದರು.
ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀಗಳಾದ ಜ್ಞಾನಪ್ರಕಾಶ ಸ್ವಾಮೀಜಿಗಳು ಮಾತನಾಡಿ ಬಸವಾದಿ ಶರಣರ ತತ್ವಗಳು ಮತ್ತು ವಚನಗಳನ್ನು ತಿರುಚುವ ಪ್ರಯತ್ನ ಕೋಮುವಾದಿಗಳು ಬಹುದಿನಗಳಿಂದ ಒಳ ಸಂಚು ರೂಪಿಸುತ್ತ ಬಂದಿದ್ದಾರೆ.ನಮ್ಮದು ಬೆವರಿನ ಸಂಸ್ಕೃತಿ,ಶ್ರಮದ ಸಂಸ್ಕೃತಿ,ದುಡಿವ ಸಂಸ್ಕೃತಿ,ಶರಣತತ್ವದ ಬಗ್ಗೆ ಮಾತನಾಡಲಿಕ್ಕೆ ಯಾವ ನೈತಿಕತೆಯು ಇಲ್ಲ ಎಂದು,ಹಿಂದೂ ಸಮಾವೇಶದ ವಿರುದ್ಧ ಕಿಡಿಕಾರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಆರ್.ಕೆ.ಹುಡಗಿ ಮಾತನಾಡಿ ಕನ್ನೆರಿ ಸ್ವಾಮಿ ನಮ್ಮ ಮನೆಗೆ ಬಂದರೆ ಕರ್ಮ ಸಿದ್ದಾಂತ ಬಿಟ್ಟು,ಕಾಯಕ ಸಿದ್ಧಾಂತ ಒಪ್ಪಿಕೊಂಡು ಬಸವಾದಿ ಶರಣರ ವಚನ ಸಾಹಿತ್ಯ ಹೇಗೆ ಅರ್ಥೈಸಿಕೊಳ್ಳಬೇಕು ಹಾಗೂ ಯಾವ ರೀತಿ ಕೃಷಿ ಮಾಡಬೇಕು ಎಂಬುದರ ಬಗ್ಗೆ ಒಂದು ತಿಂಗಳಗಳ ಕಾಲ ಅನ್ನ ನೀರು ಹಾಕಿ ಪಾಠ ಮಾಡುವೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಬಸವಾದಿ ಶರಣರನ್ನ ಒಪ್ಪಿಕೊಂಡಿರುವ ವಿವಿಧ ಮಠಾಧೀಶರು,ಗಿರಪ್ಪಗೌಡ ಬಾಣತಿಹಾಳ,ಆರ್,ಚನ್ನಬಸ್ಸು, ಸಿದ್ದಲಿಂಗಣ್ಣ ಆನೆಗುಂದಿ, ತಿಮ್ಮಯ್ಯ ಪುರ್ಲೆ,ಸಿದ್ದರಾಮ ಹೊನಕಲ್,ಶಿವಣ್ಣ ಇಜೇರಿ, ನೀಲಕಂಠ ಬಡಿಗೇರ,ಶ್ರೀಶೈಲ ಹೊಸಮನಿ,ಸೇರಿದಂತೆ ಸಾವಿರಾರು ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು,
