ಬೀದರದಲ್ಲಿ ಮೇ 23-24ರಂದು ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣತಾಯಿ ದ್ವಿತೀಯ ಸ್ಮರಣೋತ್ಸವ ‘ಬಸವೋತ್ಸವ’
ಬೀದರದಲ್ಲಿ ಮೇ 23-24ರಂದು ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣತಾಯಿ ದ್ವಿತೀಯ ಸ್ಮರಣೋತ್ಸವ ‘ಬಸವೋತ್ಸವ’
ಬೀದರ, ಏ.29: ವಿಶ್ವಗುರು ಬಸವಣ್ಣನವರ ತತ್ತ್ವ ಪ್ರಸಾರಕ್ಕೆ ನಾಲ್ಕು ದಶಕಗಳ ಕಾಲ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಮಹಾಚೇತನ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವವನ್ನು ‘ಬಸವೋತ್ಸವ’ ಎಂಬ ಹೆಸರಿನಲ್ಲಿ ಮೇ 23 ಮತ್ತು 24ರಂದು ಬೀದರದ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಬಸವತತ್ತ್ವವನ್ನು ಜನಮನದಲ್ಲಿ ಬಿತ್ತಿಬೆಳೆಸುವ ನಿಟ್ಟಿನಲ್ಲಿ ವಾರದ ಅನುಭವ ಮಂಟಪ, ಮಾಸಿಕ ಬಸವಜ್ಯೋತಿ, ಶರಣ ಸಂಗಮ, ಸಾಮೂಹಿಕ ವಚನಪಾರಾಯಣ, ವಚನ ವಿಜಯೋತ್ಸವ ಸೇರಿದಂತೆ ಅನೇಕ ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣತಾಯಿ ಅವರು ಅಪೂರ್ವ ಸೇವೆ ಸಲ್ಲಿಸಿದ್ದರು. ದೇಶ-ವಿದೇಶಗಳಲ್ಲಿ ಪ್ರವಚನಗಳ ಮೂಲಕ ಬಸವತತ್ತ್ವದ ಮಾನವೀಯ ಮೌಲ್ಯಗಳನ್ನು ಸಾರಿದ ಅವರು ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠ, ನೀಲಮ್ಮನ ಬಳಗ ಹಾಗೂ ಲಿಂಗಾಯತ ಸೇವಾದಳ ಸಂಸ್ಥೆಗಳ ಸ್ಥಾಪನೆಯ ಮೂಲಕ ಶರಣ ಸಂಸ್ಕೃತಿಗೆ ಹೊಸ ಚೈತನ್ಯ ತುಂಬಿದರು.
ವಚನಗಳಿಗೆ ಪರಮೋಚ್ಚ ಗೌರವ ಸಲ್ಲಿಸುವ ನಿಟ್ಟಿನಲ್ಲಿ ವಚನಗಳಿಗೆ ಪಟ್ಟಗಟ್ಟುವ ಪರಂಪರೆ, ದಿನನಿತ್ಯ ಐದು ವಚನಗಳ ಓದು, ಬಸವಭಾರತಿ ಸಂಸ್ಕಾರ ಶಿಬಿರ, ಶಿವಯೋಗ ಸಾಧಕರ ಕೂಟ, ಬಸವ ಸಂಪದ ಪ್ರಕಾಶನ ಮುಂತಾದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿ, ಬಸವಧರ್ಮದ ಪ್ರಚಾರಕ್ಕೆ ಅಕ್ಕನವರು ಅನನ್ಯ ಕೊಡುಗೆ ನೀಡಿದರು. ‘ಗುರುವಚನ’ ಧರ್ಮಗ್ರಂಥ ಹಾಗೂ ‘ಗುರುವಚನ ಪರುಷಕಟ್ಟೆ’ ಸ್ಥಾಪನೆ ಅವರ ವಿಶೇಷ ಸಾಧನೆಯಾಗಿದೆ.
ಪೂಜ್ಯಶ್ರೀ ಮ.ನಿ.ಪ್ರ. ಪ್ರಭುದೇವ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಎರಡು ದಿನಗಳ ಬಸವೋತ್ಸವದಲ್ಲಿ ಸಾವಿರಾರು ಶರಣ-ಶರಣೆಯರು ಭಾಗವಹಿಸಲಿದ್ದಾರೆ.
ಮೇ 23ರ ಕಾರ್ಯಕ್ರಮಗಳು:
ಬೆಳಿಗ್ಗೆ 7:30ಕ್ಕೆ ಸಾಮೂಹಿಕ ವಚನಪಾರಾಯಣ,
10:00ಕ್ಕೆ ಉದ್ಘಾಟನಾ ಸಮಾರಂಭ,
ಸಂಜೆ 5:00ಕ್ಕೆ ಅಕ್ಕನವರ ಸ್ಮರಣೋತ್ಸವ ಅನುಭಾವ.
ಮೇ 24ರ ಕಾರ್ಯಕ್ರಮಗಳು:
ಬೆಳಿಗ್ಗೆ 8:30ಕ್ಕೆ ಶಿವನಗರ ಉತ್ತರದ ಶಿವಮಂದಿರದಿಂದ ಬಸವಗಿರಿಯವರೆಗೆ ವಚನ ವಿಜಯೋತ್ಸವ ಮೆರವಣಿಗೆ,
11:00ಕ್ಕೆ ಬಸವೋತ್ಸವ ಅನುಭಾವ ಹಾಗೂ 770 ಸಮವಸ್ತ್ರಧಾರಿ ಶರಣ-ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಪಠಣ,
ಸಂಜೆ 4:30ಕ್ಕೆ ಸಮಾರೋಪ ಸಮಾರಂಭ.
ಬಸವೋತ್ಸವ ಸ್ವಾಗತ ಸಮಿತಿಯವರು ಬಸವತತ್ತ್ವದ ಈ ಮಹಾ ಸಂಭ್ರಮದಲ್ಲಿ ಭಕ್ತರು, ಶರಣರು ಹಾಗೂ ಸಾರ್ವಜನಿಕರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
