ಪದವೀಧರರು–ಶಿಕ್ಷಕರ ಮತಹಕ್ಕು ನಿರ್ಬಂಧ: ಸಂವಿಧಾನದ ಅನುಚ್ಛೇದ 171(3) ತಿದ್ದುಪಡಿ ಅಗತ್ಯ – ಹೋರಾಟ ಸಮಿತಿ ಆಗ್ರಹ

ಪದವೀಧರರು–ಶಿಕ್ಷಕರ ಮತಹಕ್ಕು ನಿರ್ಬಂಧ: ಸಂವಿಧಾನದ ಅನುಚ್ಛೇದ 171(3) ತಿದ್ದುಪಡಿ ಅಗತ್ಯ – ಹೋರಾಟ ಸಮಿತಿ ಆಗ್ರಹ

ಪದವೀಧರರು–ಶಿಕ್ಷಕರ ಮತಹಕ್ಕು ನಿರ್ಬಂಧ: ಸಂವಿಧಾನದ ಅನುಚ್ಛೇದ 171(3) ತಿದ್ದುಪಡಿ ಅಗತ್ಯ – ಹೋರಾಟ ಸಮಿತಿ ಆಗ್ರಹ

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯ ಅಸ್ಮಿತೆಯೇ ಮತದಾನದ ಹಕ್ಕು ಎಂಬುದನ್ನು ಒತ್ತಿ ಹೇಳುತ್ತಾ, ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಮತದಾನದ ಹಕ್ಕಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು “ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ” ಆಗ್ರಹಿಸಿದೆ.

ಸಮಿತಿಯ ಪ್ರತಿನಿಧಿ ಜೆ.ಎಸ್. ವಿನೋದಕುಮಾರ (ಅಡ್ವೊಕೇಟ್) ಮಾತನಾಡಿ, ಪ್ರಸ್ತುತ ವ್ಯವಸ್ಥೆಯಲ್ಲಿ ಪದವಿ ಪಡೆದವರು ಮೂರು ವರ್ಷಗಳ ನಂತರ ಮಾತ್ರ ಮತದಾನದ ಹಕ್ಕು ಪಡೆಯುವುದು ಅನ್ಯಾಯಕರ ಎಂದು ತಿಳಿಸಿದ್ದಾರೆ. ಇಂದಿನ ಯುವಕರು 21ನೇ ವಯಸ್ಸಿನಲ್ಲೇ UPSC, KPSC ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವ ಸಂದರ್ಭದಲ್ಲೂ, ಅವರಿಗೆ ಮತದಾನದ ಹಕ್ಕು ನಿರಾಕರಿಸುವುದು ವೈಚಾರಿಕ ವಿರೋಧಾಭಾಸ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನೂ ಶಿಕ್ಷಕರ ಕ್ಷೇತ್ರದಲ್ಲಿ, ಮೂರು ವರ್ಷಗಳ ಬೋಧನಾ ಅನುಭವವಿಲ್ಲದವರಿಗೆ ಮತದಾನದ ಹಕ್ಕಿಲ್ಲ ಎಂಬ ನಿಯಮವೂ ಅನೇಕ ಶಿಕ್ಷಕರನ್ನು ಚುನಾವಣಾ ಪ್ರಕ್ರಿಯೆಯಿಂದ ದೂರ ಮಾಡುತ್ತಿದೆ. ಟಿ.ಇ.ಟಿ ಉತ್ತೀರ್ಣರಾದ ಲಕ್ಷಾಂತರ ಅಭ್ಯರ್ಥಿಗಳು ನೇಮಕಾತಿಯ ಕೊರತೆಯಿಂದ ಮತಹಕ್ಕು ಕಳೆದುಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸಮಿತಿ, ಪ್ರಸ್ತುತ ಸಂವಿಧಾನದ ವ್ಯವಸ್ಥೆಯಡಿಯಲ್ಲಿ ಇರುವ ಅನುಚ್ಛೇದ 171(3) ವೈಜ್ಞಾನಿಕವಾಗಿಲ್ಲ ಎಂದು ಟೀಕಿಸಿ, ವಿದಾನ ಪರಿಷತ್ತಿನ ಚುನಾವಣಾ ವಿಧಾನವನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದೆ.

        “ನನ್ನ ಮತ – ನನ್ನ ಧ್ವನಿ”: ಆದರೆ ಎಲ್ಲರಿಗೂ ಸಮಾನ ಹಕ್ಕೇ?”

ಪ್ರಜಾಪ್ರಭುತ್ವದ ಮೂಲ ಆತ್ಮವೇ ಮತದಾನದ ಹಕ್ಕು. “ನನ್ನ ಮತ – ನನ್ನ ಧ್ವನಿ” ಎಂಬ ಘೋಷಣೆ ಕೇವಲ ನುಡಿಯಲ್ಲ, ಅದು ನಾಗರಿಕರ ಅಸ್ತಿತ್ವದ ಪ್ರತೀಕ. ಆದರೆ ಈ ಹಕ್ಕು ಎಲ್ಲರಿಗೂ ಸಮಾನವಾಗಿ ಲಭ್ಯವಿದೆಯೇ ಎಂಬ ಪ್ರಶ್ನೆ ಇಂದು ಗಂಭೀರ ಚರ್ಚೆಗೆ ಗ್ರಾಸವಾಗಿದೆ.

ಸಂವಿಧಾನದ ಅನುಚ್ಛೇದ 171(3) ಪ್ರಕಾರ, ಪದವೀಧರರು ಮೂರು ವರ್ಷಗಳ ನಂತರ ಮಾತ್ರ ಮತದಾನದ ಹಕ್ಕು ಪಡೆಯುತ್ತಾರೆ. ಇಂದಿನ ಕಾಲಘಟ್ಟದಲ್ಲಿ, ಯುವಕರು ಅತಿ ಕಿರಿಯ ವಯಸ್ಸಿನಲ್ಲೇ ಉನ್ನತ ಶಿಕ್ಷಣ ಪಡೆದು, ದೇಶದ ಪ್ರಮುಖ ಆಡಳಿತ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಅಂತಹ ಸಾಮರ್ಥ್ಯವಿರುವವರನ್ನು ಮತದಾನದ ಹಕ್ಕಿನಿಂದ ದೂರ ಇಡುವುದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ.

ಇನ್ನೊಂದೆಡೆ, ಶಿಕ್ಷಕರ ಕ್ಷೇತ್ರದಲ್ಲಿಯೂ ಇದೇ ರೀತಿಯ ಅನ್ಯಾಯ ಕಾಣಿಸುತ್ತದೆ. ಮೂರು ವರ್ಷಗಳ ಬೋಧನಾ ಅನುಭವವಿಲ್ಲದಿದ್ದರೆ ಮತದಾನದ ಹಕ್ಕು ಸಿಗುವುದಿಲ್ಲ. ಆದರೆ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸಿದಾಗ, ಅರ್ಹರಾದ ಶಿಕ್ಷಕರು ಅನುಭವವನ್ನು ಹೇಗೆ ಪಡೆಯುತ್ತಾರೆ? ಟಿ.ಇ.ಟಿ ಪಾಸಾದ ಲಕ್ಷಾಂತರ ಅಭ್ಯರ್ಥಿಗಳು ಕೆಲಸವಿಲ್ಲದೆ ಉಳಿದು, ಮತದಾನದ ಹಕ್ಕನ್ನೂ ಕಳೆದುಕೊಳ್ಳುತ್ತಿದ್ದಾರೆ.

ಇದೇ ಸಮಯದಲ್ಲಿ, ಸ್ಥಳೀಯ ಸಂಸ್ಥೆಗಳ ಮೂಲಕ ಆಯ್ಕೆಯಾಗುವ ಸದಸ್ಯರು, ಕನಿಷ್ಠ ವಿದ್ಯಾರ್ಹತೆ ಇಲ್ಲದಿದ್ದರೂ, ವಿದಾನ ಪರಿಷತ್ತಿನ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಇದರಿಂದ ಪ್ರತಿನಿಧಿತ್ವದ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ.

ಈ ಹಿನ್ನೆಲೆಯಲ್ಲಿ, ಅನುಚ್ಛೇದ 171(3) ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ತಿದ್ದುಪಡಿ ಆಗುವುದು ಅಗತ್ಯವಾಗಿದೆ. ಪ್ರಜಾಪ್ರಭುತ್ವವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಬೇಕು ಎಂಬುದು ಅದರ ಮೂಲ ತತ್ವ. ಆದ್ದರಿಂದ, ಪದವೀಧರರು ಮತ್ತು ಶಿಕ್ಷಕರಿಗೆ ಸಮಾನ ಹಾಗೂ ತಕ್ಷಣದ ಮತದಾನದ ಹಕ್ಕು ನೀಡುವುದು ಕಾಲದ ಅಗತ್ಯವಾಗಿದೆ.

ಪ್ರಜಾಪ್ರಭುತ್ವವನ್ನು ಬಲಪಡಿಸಲು, ಪ್ರತಿಯೊಬ್ಬ ನಾಗರಿಕನ ಧ್ವನಿಗೂ ಸಮಾನ ಮೌಲ್ಯ ಸಿಗಬೇಕು. ಈ ದಿಕ್ಕಿನಲ್ಲಿ ನಡೆಯುತ್ತಿರುವ ಹೋರಾಟಗಳು, ಸಂವಿಧಾನದ ಆತ್ಮವನ್ನು ಇನ್ನಷ್ಟು ಜೀವಂತವಾಗಿಸಲು ನೆರವಾಗಲಿ ಎಂಬುದು ನಮ್ಮ ಆಶಯ.

– ನಿಮ್ಮ ನ್ಯಾಯ ಮಿತ್ರ ವಿನೋದ ಕುಮಾರ್ ಜೆನವೇರಿ