1047ನೇ ಸದ್ಗುರು ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಸಮಾರೋಪ ಸಭೆ: ಉಳಿದ ಹಣದಲ್ಲಿ ದಾಸಿಮಯ್ಯ ಮೂರ್ತಿ ಸ್ಥಾಪನೆಗೆ ನಿರ್ಣಯ

1047ನೇ ಸದ್ಗುರು ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಸಮಾರೋಪ ಸಭೆ: ಉಳಿದ ಹಣದಲ್ಲಿ ದಾಸಿಮಯ್ಯ ಮೂರ್ತಿ ಸ್ಥಾಪನೆಗೆ ನಿರ್ಣಯ

1047ನೇ ಸದ್ಗುರು ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಸಮಾರೋಪ ಸಭೆ: ಉಳಿದ ಹಣದಲ್ಲಿ ದಾಸಿಮಯ್ಯ ಮೂರ್ತಿ ಸ್ಥಾಪನೆಗೆ ನಿರ್ಣಯ

ಕಲಬುರಗಿ:1047ನೇ ಸದ್ಗುರು ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಸಮಾರೋಪ ಸಭೆ ದಿ. 5-4-2026 ರಂದು ಸಂಜೆ 6 ಗಂಟೆಗೆ ಉತ್ಸವ ಸಮಿತಿಯ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಜಯಂತಿ ಕಾರ್ಯಕ್ರಮದ ಲೆಕ್ಕಪತ್ರ ಮಂಡನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನೇಕಾರ ಸಮುದಾಯದ ಸಂಘಟನೆಗಳನ್ನು ಇನ್ನಷ್ಟು ಬಲಪಡಿಸುವ ಕುರಿತು ಚರ್ಚಿಸಲಾಯಿತು.

ನಿವೃತ್ತ ಕೈಮಗ್ಗ ಜವಳಿ ಇಲಾಖೆಯ ಅಧಿಕಾರಿ ಹಾಗೂ ನಿಕಟ ಪೂರ್ವ ಗುಲ್ಬರ್ಗಾ ಹಟಗಾರ ಸಮಾಜದ ಅಧ್ಯಕ್ಷರಾದ ಶ್ರೀ ಚನ್ನಮಲ್ಲಪ್ಪ ನಿಂಬೆಣಿ, ಮಾತನಾಡಿ, ಸಮಿತಿ ರಚನೆಯಾದ ಬಳಿಕ ಕೇವಲ ಮೂರು ದಿನಗಳಲ್ಲಿ ಸಭೆ ಸೇರಿ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಜಯಂತಿ ಆಚರಣೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಇದೇ ಉತ್ಸಾಹ ನೇಕಾರ ಸಮುದಾಯದ ಎಲ್ಲಾ ಸಮಾಜಗಳಲ್ಲಿ ಮೂಡಿದರೆ ರಾಷ್ಟ್ರ ಮಟ್ಟವಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಉತ್ಸವ ಸಮಿತಿಯ ಕಾರ್ಯದರ್ಶಿ ಕುಶಾಲ ಯಡವಳ್ಳಿ ಸಭೆಗೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.  ಖಜಾಂಚಿ ಸತೀಶ ಜಮಖಂಡಿ ಲೆಕ್ಕಪತ್ರ ವಿವರಗಳನ್ನು ಮಂಡಿಸಿ, ಸಮಿತಿ ಕೇವಲ ಎಂಟು ದಿನಗಳಲ್ಲಿ 37 ಜನರನ್ನು ಭೇಟಿ ಮಾಡಿ ಸುಮಾರು 5 ಲಕ್ಷ 7 ಸಾವಿರ ರೂಪಾಯಿ ದೇಣಿಗೆ ಸಂಗ್ರಹಿಸಿದೆ ಎಂದು ತಿಳಿಸಿದರು. ಅದ್ಧೂರಿ ಕಾರ್ಯಕ್ರಮಕ್ಕೆ 3 ಲಕ್ಷ 57 ಸಾವಿರ ರೂಪಾಯಿ ವೆಚ್ಚವಾಗಿದ್ದು, ಸುಮಾರು 1 ಲಕ್ಷ 50 ಸಾವಿರ ರೂಪಾಯಿ ಉಳಿತಾಯವಾಗಿದೆ ಎಂದು ವಿವರಿಸಿದರು.

 ಉಪಾಧ್ಯಕ್ಷ ಪ್ರಕಾಶ ಯಂಕಂಚಿ, ಮಾತನಾಡಿ, ಕಾರ್ಯಕ್ರಮದ ಕಾರ್ಯಯೋಜನೆ ಸ್ವಲ್ಪ ಮುಂಚೆಯೇ ರೂಪಿಸಿದ್ದರೆ ಕನಿಷ್ಠ 11 ಲಕ್ಷ ರೂಪಾಯಿ ಸಂಗ್ರಹಿಸುವ ಅವಕಾಶ ಇತ್ತು ಎಂದು ಹೇಳಿದರು. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೈಚಾರಿಕತೆ ಮತ್ತು ಸಂಘಟನೆಯೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ನೇಕಾರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಸಂಗಾ ಮಾತನಾಡಿ, ಕೇವಲ ಮೂರು ವರ್ಷಗಳಲ್ಲೇ ಜಯಂತಿ ಆಚರಣೆಯಿಂದ ರಾಜ್ಯ ಮಟ್ಟದಲ್ಲಿ ನೇಕಾರ ಸಮುದಾಯದ ಛಾಪು ಮೂಡಿದೆ. ಎಲ್ಲಾ ಒಳಪಂಗಡಗಳ ಸಹಕಾರ ದೊರೆತರೆ ರಾಷ್ಟ್ರಮಟ್ಟದಲ್ಲಿ ಕಲಬುರಗಿ ನೇಕಾರರ ಶಕ್ತಿಯನ್ನು ಪ್ರದರ್ಶಿಸಿ ನಮ್ಮ ಸ್ಥಾನವನ್ನು ಪಡೆಯಬಹುದು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉತ್ಸವ ಸಮಿತಿಯ ಅಧ್ಯಕ್ಷ ಶಾಂತಕುಮಾರ ಯಳಸಂಗಿ, ತಮ್ಮ ಚಿಕ್ಕ ವಯಸ್ಸಿನಲ್ಲೇ ಈ ಹೊಣೆಗಾರಿಕೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಕಾರ್ಯಕ್ರಮ ಯಶಸ್ವಿಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪ್ರಚಾರ ಸಮಿತಿಯ ಅಧ್ಯಕ್ಷ ನ್ಯಾಯವಾದಿ ವಿನೋದಕುಮಾರ ಜೆನವೇರಿ ಮಾತನಾಡಿ, ನೇಕಾರ ಸಮುದಾಯದ ಏಕತೆ ಮತ್ತು ಸಂಘಟನೆಯಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ. ಎಲ್ಲರೂ ಏಕೋಭಾವದಿಂದ ಕಾರ್ಯನಿರ್ವಹಿಸಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕೋರಿದರು.

ಸಭೆಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ 2026ರ ಉತ್ಸವ ಸಮಿತಿಯಲ್ಲಿ ಉಳಿದಿರುವ ಹಣದಲ್ಲಿ ಸದ್ಗುರು ದಾಸಿಮಯ್ಯನವರ ಮೂರ್ತಿ ನಿರ್ಮಿಸಿ, ಕಲಬುರಗಿ ಮಹಾನಗರದ ಪ್ರಮುಖ ಸ್ಥಳದಲ್ಲಿ ಸ್ಥಾಪಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.