ಮಹಿಳಾ ಸಬಲೀಕರಣದಲ್ಲಿ ಕಲಬುರಗಿ ಮಹಿಳೆಯರು ಮುಂಚೂಣಿ : ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಕಲಬುರಗಿ:ಮಹಿಳಾ ಸಬಲೀಕರಣದ ಪ್ರಕ್ರಿಯೆಯಲ್ಲಿ ಕಲಬುರಗಿ ಜಿಲ್ಲೆಯ ಮಹಿಳೆಯರು ಮುಂಚೂಣಿಯಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಹೇಳಿದರು.
ನಗರದ ವಿದ್ಯಾನಗರದಲ್ಲಿರುವ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಹಾಗೂ ವಿದ್ಯಾನಗರ ವೆಲ್‌ಫೇರ್ ಸೋಸೈಟಿ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ ೨ ರಂದು ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ, ಉಪನ್ಯಾಸ ಹಾಗೂ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿದರು . .
ಮಾತನಾಡಿ, ಮಹಿಳಾ ಸಬಲೀಕರಣವೆಂದರೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹಾಗೂ ಹಕ್ಕುಗಳನ್ನು ಒದಗಿಸುವ ಪ್ರಕ್ರಿಯೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿಯೂ ಅನೇಕ ಮಹಿಳಾ ಸಂಘಟನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರನ್ನು ಸಂಘಟಿಸಿ ಸಬಲೀಕರಣದ ದಾರಿಗೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ವಾರಕ್ಕೆ ಎರಡು-ಮೂರು ಮಹಿಳಾ ಸಂಘಟನೆಗಳು ಮಹಿಳಾ ಸಬಲೀಕರಣ ಕುರಿತ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿರುವುದು ಜಿಲ್ಲೆಯ ಮಹಿಳೆಯರ ಜಾಗೃತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಯಾಗಿ ಇಡೀ ಜಿಲ್ಲೆಯ ಆಡಳಿತವನ್ನು ಮಹಿಳೆಯೇ ನಿರ್ವಹಿಸುತ್ತಿರುವುದು ಮಹಿಳಾ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದ ಅವರು, ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಉಪನ್ಯಾಸ ನೀಡಿದ ಡಾ. ಶಿವಲೀಲಾ ಚಟ್ನಳ್ಳಿ ಅವರು, ೧೨ನೇ ಶತಮಾನದಲ್ಲಿ ಬದುಕಿದ ಅಕ್ಕಮಹಾದೇವಿಯವರು ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟ ಸಂಕಷ್ಟಗಳ ಅನುಭವದ ಮೂಲಕ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಅಕ್ಕನ ವಚನಗಳ ವಿಶ್ಲೇಷಣೆ ಮೂಲಕ ಅವರ ಜೀವನ ಚರಿತ್ರೆಯನ್ನು ವಿವರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಕದಳಿ ಆಸ್ಪತ್ರೆಯ ನಿರ್ದೇಶಕಿ ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಮಾತನಾಡಿ ,ಅಕ್ಕಮಹಾದೇವಿಯವರು ೧೨ನೇ ಶತಮಾನದಲ್ಲಿಯೇ ಕವಿಯಾಗಿ ಸಮಸ್ತ ಮಹಿಳಾ ಲೋಕಕ್ಕೆ ಆದರ್ಶವಾಗಿದ್ದರು ಎಂದರು.
ಉಮೇಶ ಶೆಟ್ಟಿ ಅವರು ಅಕ್ಕನ ವಚನಗಳನ್ನು ಹಾಡಿ ಮನರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಅಧ್ಯಕ್ಷೆ ರತ್ನಮ್ಮ ನಿಂಬೂರ ಅವರು, ಸಂಸ್ಥೆಯ ೧೧ನೇ ವಾರ್ಷಿಕೋತ್ಸವದ ಅಂಗವಾಗಿ ಕಳೆದ ಅವಧಿಯಲ್ಲಿ ಕೈಗೊಂಡ ೧೧ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ವಿವಿಧ ಬಡಾವಣೆಗಳ ಮಹಿಳಾ ಸಂಘಟನೆಗಳ ಮುಖ್ಯಸ್ಥರಾದ ಭಾರತಿ ಬಿರಾದಾರ (ಪ್ರಗತಿ ಕಾಲೋನಿ), ಲಕ್ಷ್ಮಿ ಕುಂಬಾರ (ಬಡೆಪೂರ ಕಾಲೋನಿ), ಶೈಲಾಜ ವಾಲಿ, ಅನುರಾಧ ಕುಮಾರಸ್ವಾಮಿ (ಜಯನಗರ), ಕಮಲಾಬಾಯಿ ಗೌಡತಿ (ಸ್ವಸ್ತಿಕ ನಗರ) ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಜಯಶ್ರೀ ಪಾಟೀಲ, ಶಿವರಾಜ ಅಂಡಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರೇಖಾ ಅಂಡಗಿ ಪ್ರಾರ್ಥಿಸಿದರು. ಸುರೇಖಾ ಯಾದಗಿರ ಸ್ವಾಗತಿಸಿದರು. ತಾರಾ ಪಾಟೀಲ ವಂದಿಸಿದರು. ಡಾ. ಅನುರೀತಾ ಹಿಂದೊಡ್ಡಿ, ದೇವಿಕಾ ತಂಬಾಕೆ, ಮಧು ಹಿಂದೊಡ್ಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.
