ಕೆ.ಪಿ.ಎಂ.ಇ. ಕಂದುಕೊರತೆ ಅಹವಾಲು ಸ್ವೀಕಾರ ಸಭೆ: ಕಾಯ್ದೆ ಉಲ್ಲಂಘಿಸಿದ 136 ಜನರಿಗೆ 45.80 ಲಕ್ಷ ರೂ. ದಂಡ

ಕೆ.ಪಿ.ಎಂ.ಇ. ಕಂದುಕೊರತೆ ಅಹವಾಲು ಸ್ವೀಕಾರ ಸಭೆ:  ಕಾಯ್ದೆ ಉಲ್ಲಂಘಿಸಿದ 136 ಜನರಿಗೆ 45.80 ಲಕ್ಷ ರೂ. ದಂಡ

ಕೆ.ಪಿ.ಎಂ.ಇ. ಕಂದುಕೊರತೆ ಅಹವಾಲು ಸ್ವೀಕಾರ ಸಭೆ:

ಕಾಯ್ದೆ ಉಲ್ಲಂಘಿಸಿದ 136 ಜನರಿಗೆ 45.80 ಲಕ್ಷ ರೂ. ದಂಡ

ಕಲಬುರಗಿ,ಮಾ.29(ಕಲ್ಯಾಣ ಕಹಳೆ ವಾರ್ತೆ) ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007ರ ಉಲ್ಲಂಘನೆ ಆರೋಪದ ಮೇರೆಗೆ ಜಿಲ್ಲೆಯಲ್ಲಿ ವಿದ್ಯಾರ್ಹತೆ ಇಲ್ಲದ ಮತ್ತು ಅಡ್ಡ ಅಭ್ಯಾಸ ಹೊಂದಿದ್ದ 136 ಜನರಿಗೆ 45.80 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾಧಿಕಾರಿ ಬಿ. ತರನ್ನುಮ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆ.ಪಿ.ಎಮ್.ಇ ಕಾಯ್ದೆ ಅಡಿಯ ಕುಂದು ಕೊರತೆ ಅಹವಾಲು ಪ್ರಾಧಿಕಾರ ಮತ್ತು ತಾಯಿ ಮರಣ ಮತ್ತು ಶಿಶು ಮರಣ ಕುರಿತು ಆಡಿಟ್ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾಲ-ಕಾಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಯ್ದೆ ಉಲ್ಲಂಘನೆ ಮೇರೆಗೆ ಇಲಾಖಾವಾರು ದಾಖಲಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆ, ಕ್ಲಿನಿಕ್, ಮಾಲಿಕರು, ವ್ಯಸ್ಥಾಪಕರಿಗೆ ದಂಡ ವಿಧಿಸಿ ಆದೇಶಿಸಿದ್ದಾರೆ.

ಇನ್ನು ಜಿಲ್ಲೆಯ ಸಹಾಯಕ ಆಯುಕ್ತರು, ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಆಯುಷ್ ಅಧಿಕಾರಿಗಳು, ಆರಕ್ಷಕ ನಿರೀಕ್ಷಕರೆಲ್ಲರು ಸೇರಿ ನಿರಂತರ ನಕಲಿ ವೈದ್ಯರ ಆಸ್ಪತ್ರೆ, ಕ್ಲಿನಿಕ್ ಮೇಲೆ ದಾಳಿ ಮಾಡುವಂತೆ ಸೂಚಿಸಿದರು.

ಇನ್ನು ಈ ಹಿಂದೆ ನಡೆದ ಸಭೆಯಲ್ಲಿ ವಿಧಿಸಿದ ದಂಡದ ಮೊತ್ತವನ್ನು ಇದೂವರೆಗೆ ಜಮೆ ಮಾಡದ ನಕಲಿ, ವಿದ್ಯಾಹರ್ತೆ ಇಲ್ಲದ ಮತ್ತು ಕೆ.ಪಿ.ಎಂ.ಇ ಕಾಯ್ದೆ ಉಲ್ಲಂಘನೆ ಮಾಡಿರುವ ಆಸ್ಪತ್ರೆ, ಕ್ಲಿನಿಕ್, ಮಾಲೀಕರು, ವ್ಯಸ್ಥಾಪಕರ ವಿರುದ್ದ ಕೆ.ಎಲ್.ಆರ್. ಕಾಯ್ದೆಯಡಿ ಆಸ್ತಿ ಜಪ್ತಿ ಮಾಡಿ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರಿಗೆ ಡಿ.ಸಿ. ಸೂಚನೆ ನೀಡಿದರು.

ಸಭೆಯಲ್ಲಿ ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು ಒಟ್ಟು 182 ಆಸ್ಪತ್ರೆಗಳ ಮೇಲೆ ದಾಳಿ ಮಾಡಿದ್ದು, ಈ ಪೈಕಿ ಕೇವಲ 46 ಜನರು ಮಾತ್ರ ದಂಡ ಪಾವತಿಸಿದ್ದು, ಇನ್ನುಳಿದ 136 ಜನರು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆ ಮುಂದಿಟ್ಟರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಆರ್.ಸಿ.ಎಚ್.ಓ ಡಾ.ಸಿದ್ರಾಮ ಪಾಟೀಲ‌, ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞೆ ಡಾ. ಅಸ್ನಾ ರುಕಿಯಾ ರಬಾ ಸೇರಿದಂತೆ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಮತ್ತು ವಿಭಾಗೀಯ ಸಂಚಾಲಕರು, ವಿವಿಧ ಆಸ್ಪತ್ರೆಯ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು, ಇನ್ನಿತರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.