ರಾಷ್ಟ್ರಕೂಟರ ವೈಭವ ಸಾರಿದ ೩ನೇ ರಾಷ್ಟ್ರಕೂಟ ಉತ್ಸವ - ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ
ರಾಷ್ಟ್ರಕೂಟರ ವೈಭವ ಸಾರಿದ ೩ನೇ ರಾಷ್ಟ್ರಕೂಟ ಉತ್ಸವ - ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ
ಕಲಬುರಗಿ: ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ೩ನೇ ಬಾರಿಗೆ ರಾಷ್ಟ್ರಕೂಟ ಉತ್ಸವ ಹಾಗೂ ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಗರದ ಕನ್ನಡ ಭವನದಲ್ಲಿ ಭಾನುವಾರ ವಿಜೃಂಭಣೆಯಿAದ ನಡೆಯಿತು.
ಕಾರ್ಯಕ್ರಮಕ್ಕೆ ಮಳಖೇಡದ ಪೂಜ್ಯ ಶ್ರೀ ಷ.ಬ್ರ. ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ನಾಡದೇವತೆ ಭುವನೇಶ್ವರಿದೇವಿ ಅವರ ಭಾವಚಿತ್ರಕ್ಕೆ ಹಿರಿಯ ಹೋರಾಟಗಾರ ಡಾ. ಲಕ್ಷ್ಮಣ ದಸ್ತಿ ಹಾಗೂ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಭಾವಚಿತ್ರಕ್ಕೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಉದ್ಘಾಟಿಸಿ ಮಾತನಾಡಿ ರಾಷ್ಟ್ರಕೂಟ ಸಾಮ್ರಾಜ್ಯವು ವಿಶ್ವದ ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದು, ಚಕ್ರವರ್ತಿ ಅಮೋಘವರ್ಷ ನೃಪತುಂಗರು ಎಲ್ಲ ಕ್ಷೇತ್ರಗಳಲ್ಲೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಮಳಖೇಡದ ವೈಭವವನ್ನು ಉಳಿಸಿ ಬೆಳೆಸಬೇಕು, ಅಲ್ಲಿನ ಕೋಟೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷತೆಯನ್ನು ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ವಹಿಸಿದ್ದರು.
ಪ್ರಾಸ್ತವಿಕವಾಗಿ ಮಾತನಾಡಿದ ಕಲ್ಯಾಣ ನಾಡು ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಅವರು, ಹಂಪೆ, ಬದಾಮಿ, ಬನವಾಸಿ, ಬೇಲೂರಿಗೆ ಸಿಕ್ಕ ಪ್ರಾತಿನಿಧ್ಯ ಮಳಖೇಡಕ್ಕೆ ಸಿಗದೇ ಇರುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಅಭಿಪ್ರಾಯಪಟ್ಟರು. ರಾಜ್ಯ ಸರ್ಕಾರವು ಇತಿಹಾಸ ಕ್ಷೇತ್ರದಲ್ಲೂ ಕಲ್ಯಾಣ ಕರ್ನಾಟಕ ಭಾಗದ ಅರಸರು ಮತ್ತು ಸಾಮ್ರಾಜ್ಯಗಳನ್ನು ಕಡೆಗಣಿಸಿದೆ ಎಂದು ದೂರಿದರು. ವಿಶ್ವದ ನಾಲ್ಕು ಮಹಾ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಸರ್ಕಾರದಿಂದ ಅಗತ್ಯ ಗೌರವ ಸಿಗುತ್ತಿಲ್ಲ ಎಂದು ಹೇಳಿದರು.
ಹೋರಾಟಗಾರ ಡಾ. ಲಕ್ಷ್ಮಣ ದಸ್ತಿ ಮಾತನಾಡಿ, ಸರ್ಕಾರ ಮಾಡಬೇಕಿದ್ದ ಉತ್ಸವವನ್ನು ಸಂಘಟನೆ ನಡೆಸುತ್ತಿರುವುದು ವಿಷಾದಕರ ಸಂಗತಿ ಎಂದರು. ರಾಷ್ಟ್ರಕೂಟರ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ವೇದಿಕೆ ಮೇಲೆ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ಹಾಗೂ ಪ್ರಗತಿಪರ ಚಿಂತಕ ಸುನೀಲ ಕುಲಕರ್ಣಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಕಲ್ಯಾಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಚನ್ನಾರಡ್ಡಿ ಪಾಟೀಲ, ಕೈಗಾರಿಕೆ-ವಾಣಿಜ್ಯ ಕ್ಷೇತ್ರದಲ್ಲಿ ಪ್ರಶಾಂತ ಮಾನಕರ, ಪೊಲೀಸ್ ಕ್ಷೇತ್ರದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಮುದ್ರಣ ಮಾಧ್ಯಮದಲ್ಲಿ ಜಯತೀರ್ಥ ಪಾಟೀಲ ಹಾಗೂ ಭೀಮಾಶಂಕರ ಫಿರೋಜಾಬಾದ್, ದೃಶ್ಯ ಮಾಧ್ಯಮದಲ್ಲಿ ಅನೀಲ ಸ್ವಾಮಿ ಮತ್ತು ಅರುಣ ಕದಂ, ಕ್ರೀಡೆಯಲ್ಲಿ ರಣಜಿ ಆಟಗಾರ ಮಾಧವ ಬಜಾಜ, ಕಾನೂನು ಕ್ಷೇತ್ರದಲ್ಲಿ ಧರ್ಮಣ್ಣ ಕೋಣೆಕರ, ಸಾಹಿತ್ಯದಲ್ಲಿ ಬಿ.ಎಚ್. ನಿರಗುಡಿ, ಶಿಕ್ಷಕರ ಕ್ಷೇತ್ರದಲ್ಲಿ ಡಾ. ಅನೀಲ ಟೆಂಗಳಿ, ಹೋರಾಟಗಾರರ ಕ್ಷೇತ್ರದಲ್ಲಿ ಎಂ.ಎಸ್. ಪಾಟೀಲ ನರಿಬೋಳ ಹಾಗೂ ಹಣಮಂತ ಇಟಗಿ, ಚಿತ್ರಕಲಾ ಕ್ಷೇತ್ರದಲ್ಲಿ ಡಾ. ರೆಹಮಾನ ಪಟೇಲ್, ಸಮಾಜಸೇವೆಯಲ್ಲಿ ಆನಂದ ದೇಶಪಾಂಡೆ, ಕೃಷಿ ಕ್ಷೇತ್ರದಲ್ಲಿ ಲಿಂಗರಾಜ ಪಾಟೀಲ ಹಾಗೂ ಜಾನಪದ ಕ್ಷೇತ್ರದಲ್ಲಿ ರಾಜಶೇಖರ ಹೆಬ್ಬಾಳ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಾಬು ಮದನಕರ ಸೇರಿದಂತೆ ಜೈಭೀಮ ಮಾಳಗೆ, ಅರುಣ ತಾವಡೆ, ದೇವು ದೊರೆ, ಸಿದ್ದಲಿಂಗ ಉಪ್ಪಾರ, ಶ್ರೀಧರ ಪೋದ್ದಾರ, ಲೋಹಿತ ನಿಲುರೆ, ಅಬ್ದುಲ್ ಶೇಖ್, ಶ್ರೀಶೈಲ ಪೂಜಾರಿ, ಪುಟ್ಟು ಸಿರಸಗಿ, ಆಕಾಶ ಭೀಮಳ್ಳಿ, ಪ್ರಶಾಂತ ಗಾಯಕವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವಿಜಯಕುಮಾರ ಕಂಬಾರ ನಡೆಸಿದರು. ನಾಗು ಡೊಂಗರಗಾAವ ಸ್ವಾಗತಿಸಿದರು. ಮಲ್ಲು ದೊರೆ ವಂದನಾರ್ಪಣೆ ಸಲ್ಲಿಸಿದರು.
ಬೇಡಿಕೆಗಳಾದ ಕಲಬುರಗಿ ಜಿಲ್ಲೆಯನ್ನು ರಾಷ್ಟ್ರಕೂಟ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕು. ಇದೇ ರೀತಿಯಾಗಿ ರಾಜ್ಯದ ಇತರೆ ಜಿಲ್ಲೆಗಳ ಮರುನಾಮಕರಣದ ಉದಾಹರಣೆಗಳನ್ನು ಪರಿಗಣಿಸಬೇಕು.
ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ರಾಷ್ಟ್ರಕೂಟ ವಿಶ್ವವಿದ್ಯಾಲಯ ಎಂದು ಹೆಸರಿಟ್ಟು, ರಾಜ್ಯದ ಇತರೆ ವಿಶ್ವವಿದ್ಯಾಲಯಗಳಂತೆ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಗುರುತಿನ ಆಧಾರದ ಮೇಲೆ ಹೆಸರು ನೀಡಬೇಕು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಕೂಟ ಅಧ್ಯಯನ ಪೀಠ ಹಾಗೂ ಚಕ್ರವರ್ತಿ ಅಮೋಘವರ್ಷ ನೃಪತುಂಗ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ, ರಾಷ್ಟ್ರಕೂಟರ ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯದ ಅಧ್ಯಯನಕ್ಕೆ ಉತ್ತೇಜನ ನೀಡಬೇಕು.
ಮಳಖೇಡದ ಸಮಗ್ರ ಅಭಿವೃದ್ಧಿಗಾಗಿ ಮಳಖೇಡ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು.ಮಳಖೇಡ ಕೋಟೆಯ ಅಭಿವೃದ್ಧಿಗಾಗಿ ?೧೦೦ ಕೋಟಿ ಅನುದಾನ ಮಂಜೂರು ಮಾಡಿ, ಕೋಟೆಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಿ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನ, ಬೀದಿ ದೀಪ, ಹೈಮಾಸ್ಟ್ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಜೊತೆಗೆ ಕೋಟೆಗೆ ಕಾವಲುಗಾರರನ್ನು ನೇಮಿಸಿ, ಕವಿರಾಜಮಾರ್ಗ ಕೃತಿಯ ಪ್ರತಿಷ್ಠಾಪನೆ, ವಸ್ತು ಸಂಗ್ರಹಾಲಯ ಸ್ಥಾಪನೆ, ಸ್ನಾನಘಟ್ಟ ನಿರ್ಮಿಸಿ ಕಾಗಿಣಾರತಿ ಆರಂಭ ಹಾಗೂ ಕಾಗಿಣಾ ನದಿ ತೀರದಲ್ಲಿ ಬೋಟಾನಿಕಲ್ ಗಾರ್ಡನ್ ನಿರ್ಮಾಣ ಮಾಡಬೇಕು.
ಮಳಖೇಡ ಕೋಟೆ, ನಾಗಾವಿ ಮತ್ತು ಸನ್ನತಿ ಸ್ಮಾರಕಗಳನ್ನು ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕ್ರಮ ಕೈಗೊಳ್ಳಬೇಕು. ಮೈಸೂರು ದಸರಾ ಮಾದರಿಯಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರದ ವತಿಯಿಂದ ಮಳಖೇಡದಲ್ಲಿ ರಾಷ್ಟ್ರಕೂಟ ಉತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕು. ಪ್ರತಿ ವರ್ಷ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಜಯಂತಿಯನ್ನು ರಾಜ್ಯೋತ್ಸವದಂತೆ ಆಚರಿಸಬೇಕು.
ಕಲಬುರಗಿ ವಿಮಾನ ನಿಲ್ದಾಣಕ್ಕೆ ಚಕ್ರವರ್ತಿ ಅಮೋಘವರ್ಷ ನೃಪತುಂಗ ವಿಮಾನ ನಿಲ್ದಾಣ ಎಂದು ಹೆಸರು ನೀಡಬೇಕು. ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಚಕ್ರವರ್ತಿ ಅಮೋಘವರ್ಷ ನೃಪತುಂಗ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಕಲಬುರಗಿ ನಗರದಲ್ಲಿ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಭವ್ಯ ಮೂರ್ತಿ ಸ್ಥಾಪಿಸಬೇಕು. ಮಳಖೇಡವನ್ನು ಹೊಸ ತಾಲೂಕಾಗಿ ಘೋಷಿಸಿ, ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆರಿಸಬೇಕು.
