ಬಡವರ ಆರೋಗ್ಯ ಸೇವೆಗೆ ನಮ್ಮ ಕ್ಲಿನಿಕ್ ಉದ್ಘಾಟನೆ

ಬಡವರ ಆರೋಗ್ಯ ಸೇವೆಗೆ ನಮ್ಮ ಕ್ಲಿನಿಕ್ ಉದ್ಘಾಟನೆ

ಬಡವರ ಆರೋಗ್ಯ ಸೇವೆಗೆ ನಮ್ಮ ಕ್ಲಿನಿಕ್ ಉದ್ಘಾಟನೆ

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹೊಸದಾಗಿ ಸ್ಥಾಪಿಸಲಾದ ನಮ್ಮ ಕ್ಲಿನಿಕ್ ಅನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮಾನ್ಯ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರು ಹಾಗೂ ಜಿಲ್ಲೆಯ ವಿವಿಧ ತಾಲೂಕು ಮತ್ತು ಹಳ್ಳಿಗಳಿಂದ ಬರುವ ಪ್ರಯಾಣಿಕರು, ಜೊತೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ಲಿನಿಕ್ ಸ್ಥಾಪಿಸಲಾಗಿದೆ ಎಂದು ಹೇಳಿದರು. ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ೨೦ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನಗರದಲ್ಲೇ ೧೪ ಕ್ಲಿನಿಕ್‌ಗಳು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುತ್ತಿರುವುದಾಗಿ ಮಾಹಿತಿ ನೀಡಿದರು.

ಇದೇ ವೇಳೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್ ಮಾತನಾಡಿ, ಇದು ಉತ್ತಮ ಯೋಜನೆಯಾಗಿದ್ದು ಬಡವರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು. ಬಸ್ ನಿಲ್ದಾಣದಲ್ಲಿ ಪ್ರತಿ ಗಂಟೆಗೆ ಧ್ವನಿವರ್ಧಕದ ಮೂಲಕ ಈ ಸೇವೆಯ ಬಗ್ಗೆ ಮಾಹಿತಿ ನೀಡುವಂತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ ಅವರು ಮಾತನಾಡಿ, ೨೦೨೩ರಿಂದ ಕಲಬುರಗಿ ಜಿಲ್ಲೆಯಲ್ಲಿ ಸುಮಾರು ೪ ಲಕ್ಷಕ್ಕಿಂತ ಹೆಚ್ಚು ಹೊರರೋಗಿಗಳಿಗೆ ಸೇವೆ ನೀಡಲಾಗಿದ್ದು, ೫೫ ಸಾವಿರಕ್ಕೂ ಹೆಚ್ಚು ಲ್ಯಾಬ್ ಪರೀಕ್ಷೆಗಳು ನಡೆಸಲಾಗಿದೆ ಎಂದು ತಿಳಿಸಿದರು. ಸುಮಾರು ೪೦೦೦ ಯೋಗ ಶಿಬಿರಗಳನ್ನು ಆಯೋಜಿಸಿ ೫೦ ಸಾವಿರಕ್ಕೂ ಹೆಚ್ಚು ಜನರಿಗೆ ಯೋಗಾಭ್ಯಾಸ ಮಾಡಿಸಲಾಗಿದ್ದು, ೬೫೦ ಆರೋಗ್ಯ ಶಿಬಿರಗಳ ಮೂಲಕ ೨೫ ಸಾವಿರಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು. ಹೆಲ್ತ್ ಕ್ಯಾಲೆಂಡರ್ ಪ್ರಕಾರ ೧೬೦೦ ಆರೋಗ್ಯ ಕಾರ್ಯಕ್ರಮಗಳನ್ನು ಆಚರಿಸಲಾಗಿದ್ದು, ಸುಮಾರು ೪೮ ಸಾವಿರ ಜನರು ಪಾಲ್ಗೊಂಡಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಆರ್‌ಸಿಎಚ್ ಅಧಿಕಾರಿ ಡಾ. ಸಿದ್ದು ಪಾಟೀಲ್ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲಕುಮಾರ್ ಚಂದರಗಿ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಂದ್ರಕಾಂತ್ ನರಿಬೋಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಕೇಶ್ ಕಾಂಬಳೆ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ, ನಗರ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀಕಾಂತ್ ಸ್ವಾಮಿ, ಆಡಳಿತ ವೈದ್ಯಾಧಿಕಾರಿ ಡಾ. ಬಾಬುರಾವ ಚವಾಣ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.