ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅಪಾರ:ಗವಿಸಿದ್ದಪ್ಪ
ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅಪಾರ:ಗವಿಸಿದ್ದಪ್ಪ
ಕಲಬುರಗಿ: ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆ ಇಷ್ಟು ಉತ್ತಂಗ ಸ್ಥಿತಿಗೆ ಏರಲು ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾಗಿದೆ ಎಂದು ಸಾಹಿತಿ ಗವಿಸಿದ್ದಪ್ಪ ಪಾಟೀಲ ಹೇಳಿದರು.
ಕನ್ನಡ ನಾಡು ಲೇಖಕರ ಸಂಘದಿಂದ ಶನಿವಾರ ನಗರದ ಆರಾಧನಾ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮತಿ ಯಶೋದಮ್ಮ ಸಿದ್ದಬಟ್ಟೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾರಿದರು. ಜಾತಿ ಭೇದವಿಲ್ಲ, ಲಿಂಗ ಭೇದವಿಲ್ಲ, ಮೇಲು-ಕೀಳು ಎಂಬ ಭಾವನೆಗಳಿಲ್ಲ. ಮನುಷ್ಯರೆಲ್ಲರೂ ಒಂದೇ. ನಾವು ಭಾರತೀಯರು. ಬೇರೊಂದು ದೇಶದ ಪ್ರಜೆ ಎಂಬ ಅಡೆ ತಡೆ ಇಲ್ಲ. ಎಲ್ಲರು ವಿಶ್ವಮಾನವರು ಎಂದು ಕುವೆಂಪು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ ಎಂದರು.
ಅವರ ಮೊದಲ ಪ್ರೀತಿ, ಮೊದಲ ದೈವ ಕನ್ನಡವೇ ಆಗಿತ್ತು. ಅವರಿಗೆ ಕನ್ನಡವೇ ಉಸಿರಾಗಿತ್ತು ಎಂಬುದನ್ನು ನಾವು ಅವರ ಬರವಣಿಗೆ ಮೂಲಕ ತಿಳಿದುಕೊಳ್ಳಬಹುದು. ರಾಮಾಯಣ ದರ್ಶನ,ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕುವೆಂಪು ಅವರ ಪ್ರಮುಖ ಕಾದಂಬರಿಗಳಾಗಿದ್ದು, ಅವರು ನಮ್ಮ ನಾಡಿನ ಆಸ್ತಿ ಮಾತ್ರವಲ್ಲ, ಇಡೀ ಜಗತ್ತಿನ ಆಸ್ತಿ. ಪ್ರಾಪಂಚಿಕ ಜ್ಞಾನ ತಿಳಿಯಬೇಕೆಂದರೆ ಕನ್ನಡ ಸಾಹಿತ್ಯ ತುಂಬಾ ಮುಖ್ಯ. ವಿಶ್ವಮಾನವರ ಸಂದೇಶವನ್ನು ಪುಸ್ತಕದಲ್ಲಿ ಮಾತ್ರವಲ್ಲ ಅವರ ಜೀವನದಲ್ಲೂ ಕೂಡ ಅಳವಡಿಸಿಕೊಂಡಿದ್ದರು ಎಂದು ಹೇಳಿದರು.
ಆರಾಧನಾ ಕಾಲೇಜಿನ ಪ್ರಾಚರ್ಯರಾದ ಚೇತನಕುಮಾರ ಗಾoಗಜಿ ಮಾತನಾಡಿ, ಜಗತ್ತಿನಲ್ಲಿ ಅತಿ ದೊಡ್ಡ ಅಧ್ಯಯನಶೀಲರು ಕುವೆಂಪು. 9ನೇ ತರಗತಿ ಓದಿ ಮುಗಿಯುವುದರ ಜೊತೆಗೆ ಗ್ರಂಥಾಲಯದ ಅಷ್ಟೂ ಇಂಗ್ಲಿಷ್ ಪುಸ್ತಕಗಳನ್ನು ಓದಿ ಮುಗಿಸಿದ್ದರು ಎಂದರು.
ಕುವೆಂಪು ಅವರು ತಮ್ಮ ಹುಟ್ಟೂರಿನಲ್ಲಿ ಪರಿಸರವನ್ನು ನೋಡಿದ ರೀತಿ ಮತ್ತು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿದ ರೀತಿ ಅವರನ್ನು ಅಷ್ಟು ಎತ್ತರಕ್ಕೆ ತಲುಪಿಸಿತು. 35ನೇ ವಯಸ್ಸಿಗೆ ಅವರು ಬಹುತೇಕ ಕೃತಿಗಳನ್ನು ಬರೆದು ಮುಗಿಸಿದ್ದರು ಎಂದು ಅವರು, 20ನೇ ವಯಸ್ಸಿನಲ್ಲಿ ನಾಡಗೀತೆಯನ್ನು ರಚಿಸಿದ್ದಾರೆ. ನಾಡಗೀತೆಯಿಂದ ಒಂದು ಶಬ್ದವನ್ನು ತೆಗೆಯುವ ಶಕ್ತಿ ಯಾರಲ್ಲಿಯೂ ಇಲ್ಲ. ಗೀತೆಯಲ್ಲಿ ಕೊರತೆ ಇದೆ ಎಂದು ಶಬ್ದ ಸೇರಿಸುವ ಶಕ್ತಿ ಕೂಡ ಯಾರಿಗೂ ಇಲ್ಲ. ಇದು ಕುವೆಂಪು ಅವರ ಜ್ಞಾನದ ಸಂಕೇತವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ವಹಿಸಿದ್ದರು ಕಾರ್ಯಕ್ರಮದಲ್ಲಿ ದತ್ತಿ ದಾಸೋಹಿಗಳಾದ ಡಾ. ಕಾವ್ಯಶ್ರೀ ಮಹಾಗಾoವಕರ್, ಕನ್ನಡ ನಾಡು ಲೇಖಕರ ಸಂಘದ ಸಂಚಾಕರಾದ ಡಾ. ಶರಣಬಸಪ್ಪ ವಡ್ಡನಕೇರಿ, ಕಾಲೇಜಿನ ಉಪನ್ಯಾಸಕರಾದ ಕಾಶಿನಾಥ್ ಪಾಟೀಲ, ಶ್ರೀಶೈಲ್ ನಾಗರಾಳ, ಕಿರಣ್ ಪಾಟೀಲ,ಅರ್ಪಿತಾ ಪಾಟೀಲ, ಮಹದೇವಪ್ಪ ಕುಂಬಾರ, ರೋಹಿಣಿ ಸೂಗೂರು, ಸರೋಜ ಪಾಟೀಲ,ಪ್ರೀತಿ ಸಾಲಕ್ಕಿ,ಭಾರತಿ ಪತ್ತಾರ ಉಪಸ್ಥಿತರಿದ್ದರು. ಸಂಘದ ಸಂಚಾಲಕರದ ಡಾ. ಶರಣಬಸಪ್ಪ ವಡ್ಡನ ಕೇರಿಯವರು ಸ್ವಾಗತಿಸಿ ಪ್ಪ್ರಸ್ತಾವಿಕ ಮಾತುಗಳನ್ನಾಡಿದರು, ಕಾಶಿನಾಥ ಪಾಟೀಲ್ ನಿರೂಪಿಸಿದರೆ ರೇವಣಸಿದ್ದಪ್ಪ ಇವಣಿ ವಂದಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
