ಸಿದ್ದು ಬಜೆಟ್ ಜನ ವಿರೋಧಿ ಬಜೆಟ್: ಡಾ. ಉಮೇಶ್ ಜಾಧವ್

ಸಿದ್ದು ಬಜೆಟ್ ಜನ ವಿರೋಧಿ  ಬಜೆಟ್: ಡಾ. ಉಮೇಶ್ ಜಾಧವ್

ಸಿದ್ದು ಬಜೆಟ್ ಜನ ವಿರೋಧಿ ಬಜೆಟ್: ಡಾ. ಉಮೇಶ್ ಜಾಧವ್

ಕಲಬುರಗಿ : ಕಾಂಗ್ರೆಸ್ ಸರ್ಕಾರದ 2026- 27ನೇ ಸಾಲಿನ ಬಜೆಟ್ ಏಳು ಕೋಟಿ ಕನ್ನಡಿಗರ ಮೇಲೆ ಸಾಲದ ಹೊರೆಯನ್ನು ಹೊರಿಸಿದ ಜನ ವಿರೋಧಿ ಬಜೆಟ್ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 

    ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 17ನೇ ಬಾರಿಗೆ ಬಜೆಟ್ ಮಂಡಿಸುವುದಾಗಿ ಹೆಮ್ಮೆಯಿಂದ ಬೀಗುತ್ತಿದ್ದು ಆದರೆ ಬಜೆಟ್ ಘೋಷಣೆಯಲ್ಲಿ ಜನಪರವಾದ ಯೋಜನೆಗಳಿಲ್ಲದೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಮೇಲೆ ತೆರಿಗೆ ಭಾರವನ್ನು ಹೊರಿಸಿದ ಸಾಲದ ಹೊರೆಯ ಬಜೆಟ್ ಇದಾಗಿದೆ. ಗ್ಯಾರೆಂಟಿ ಯೋಜನೆಗಳನ್ನು ಮುಂದುವರಿಸುವುದಕ್ಕಾಗಿ ಹಣಕಾಸು ಸಚಿವರಾದ ಮುಖ್ಯಮಂತ್ರಿಗಳು ತೀವ್ರ ಕಸರತ್ತು ನಡೆಸಿರುವುದು ಬಜೆಟ್ ನಲ್ಲಿ ತಿಳಿದು ಬರುತ್ತದೆ. ಶಕ್ತಿ ಯೋಜನೆಗೆ 5,300 ಕೋಟಿ ಗೃಹಲಕ್ಷ್ಮಿ ಯೋಜನೆಗೆ 8,600 ಕೋಟಿ, ಅನ್ನಭಾಗ್ಯ ಯೋಜನೆಗೆ 6,200 ಕೋಟಿ, ಗೃಹಜ್ಯೋತಿ ಯೋಜನೆಗೆ 10,578 ಕೋಟಿ ಬೊಕ್ಕಸದಿಂದ ವ್ಯಯವಾಗುತ್ತಿದೆ. ಇದಕ್ಕಾಗಿ 8 ಲಕ್ಷದ 24,000 ಕೋಟಿ ರೂ .ಸಾಲ ಎತ್ತುವಳಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇಶದಲ್ಲಿ ಅತಿ ಹೆಚ್ಚು ಸಾಲ ಎತ್ತಿದ ಎರಡನೇ ಮುಖ್ಯಮಂತ್ರಿ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ. ಮೊದಲನೇ ಸ್ಥಾನದಲ್ಲಿ ಛತ್ತೀಸ್ ಗಢ ರಾಜ್ಯವಿದೆ. ಛತ್ತಿಸ್ ಗಢ ಸಾಲದ ಪ್ರಮಾಣ ಶೇ.150ರಷ್ಟಿದ್ದರೆ ಕರ್ನಾಟಕ ಶೇ .125 ರಷ್ಟು ಹೊಂದಿದೆ.ಸಾಲದ ಭಾರವನ್ನು ಹೊರಲು ಸರಕಾರ ಹೆಣಗಾಡುತ್ತಿದೆ. ಗ್ಯಾರಂಟಿ ಯೋಜನೆಯಿಂದ ಪ್ರತಿಯೊಬ್ಬ ಕನ್ನಡಿಗನ ಮೇಲೆ ಸಾಲದ ಹೊರೆಹಾಕಿ ಕಾಂಗ್ರೆಸ್ ಜನತೆಗೆ ಕೆಟ್ಟ ಆಡಳಿತ ನೀಡಿರುವುದು ದುರದೃಷ್ಟಕರ. 2026 - 27 ನೇ ಸಾಲಿನಲ್ಲಿ 4.48 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದು ಬಡಜನರ ಕೈಗೆ ಖಾಲಿ ಚೊಂಬು ನೀಡಿದಂತಾಗಿದೆ. ಸಾಲದ ಹೊರೆಯನ್ನು ತುಂಬಲು ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ಸಾರಿಗೆ, ಮುದ್ರಾಂಕ ಶುಲ್ಕ, ಮದ್ಯ ಮುಂತಾದವುಗಳಿಗೆ ತೆರಿಗೆ ಹೆಚ್ಚಿಸಿ ಜನಸಾಮಾನ್ಯರ ಕಿಸೆಗೆ ಕತ್ತರಿ ಹಾಕುವ ಬಜೆಟ್ ಇದಾಗಿದೆ ಎಂದು ದೂರಿದರು.

   ಉತ್ತರ ಕರ್ನಾಟಕಕ್ಕೆ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಉದ್ಯೋಗ, ನೀರಾವರಿ, ಕೃಷಿಗೆ ಸಂಬಂಧಿಸಿದಂತೆ ವಿಶೇಷ ಯೋಜನೆಗಳಿಲ್ಲದೆ ಮುಖ್ಯಮಂತ್ರಿಗಳು ನಿಷ್ಪ್ರಯೋಜಕ ಬಜೆಟ್ ಮಂಡಿಸಿ ಈ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ. ಸರಕಾರ ನೇಮಿಸಿದ ಗೋವಿಂದ ರಾವ್ ಸಮಿತಿ ವರದಿಯಂತೆ ರಾಜ್ಯದ 59 ತಾಲೂಕುಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ತಾಲೂಕುಗಳ ಬಗ್ಗೆ ಸ್ಪಷ್ಟವಾಗಿ ವರದಿ ಕಲಿಕೆಯಾಗಿದ್ದರೂ ಈ ಬಜೆಟ್ ನಲ್ಲಿ ಯಾವುದೇ ವಿಶೇಷ ಪ್ರಸ್ತಾಪ ಅಥವಾ ಯೋಜನೆಗಳನ್ನು ಪ್ರಕಟಿಸದೆ ಕಲ್ಯಾಣ ಕರ್ನಾಟಕ ಭಾಗವನ್ನು ಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕೇಂದ್ರದ ಪಿಎಂ ಮಿತ್ರ ಯೋಜನೆಯಡಿಯಲ್ಲಿ ಚಾಲನೆ ನೀಡಿದ ಕಲಬುರಗಿಯ ಜವಳಿ ಪಾರ್ಕ್ ಗೆ 390 ಕೋಟಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕಾಗಿದ್ದರೂ ಈ ಬಜೆಟ್ ನಲ್ಲಿ ಕನಿಷ್ಠ ಮೊತ್ತ ಘೋಷಣೆ ಮಾಡಿರುವುದು ಯೋಜನೆಯನ್ನು ರಾಜ್ಯ ಸರಕಾರ ನಿರ್ಲಕ್ಷಿಸಿದ್ದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು. ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಕಳೆದ ಅಕ್ಟೋಬರ್ ನಿಂದ ಸ್ಥಗಿತಗೊಂಡಿದ್ದರೂ ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡದಿರುವುದು ಖಂಡನೀಯ. ಒಟ್ಟಿನಲ್ಲಿ ಈ ಬಜೆಟ್ ಜನಸಾಮಾನ್ಯರ ಹಾಲಿಗೆ ಅತ್ಯಂತ ದುರದೃಷ್ಟಕರ ಜನವಿರೋಧಿ ಬಜೆಟ್ ಎಂದು ಡಾ. ಉಮೇಶ್ ಜಾಧವ್ ಹೇಳಿದರು.