ತಳವಾರ ಎಸ್ ಟಿ ಸಮಿತಿಯಿಂದ ಮೀಸಲಾತಿಗಾಗಿ ಹೋರಾಟ ಹಾಗೂ ಪಾದಯಾತ್ರೆ ಆರಂಭ

ತಳವಾರ ಎಸ್ ಟಿ ಸಮಿತಿಯಿಂದ ಮೀಸಲಾತಿಗಾಗಿ ಹೋರಾಟ ಹಾಗೂ ಪಾದಯಾತ್ರೆ ಆರಂಭ

ತಳವಾರ ಎಸ್ ಟಿ ಸಮಿತಿಯಿಂದ ಮೀಸಲಾತಿಗಾಗಿ ಹೋರಾಟ ಹಾಗೂ ಪಾದಯಾತ್ರೆ ಆರಂಭ 

ಸ್ಥಳ: ಯಡ್ರಾಮಿ ತಾಲ್ಲೂಕು, ಕಣಮೇಶ್ವರ ಗ್ರಾಮ

ಕರ್ನಾಟಕ ರಾಜ್ಯ ತಳವಾರ ಸಮಾಜ ಎಸ್ ಟಿ ಹೋರಾಟ ಸಮಿತಿಯ ವತಿಯಿಂದ, ತಳವಾರ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡುವಂತೆ ಆಗ್ರಹಿಸಿ, ಯಡ್ರಾಮಿ ತಾಲ್ಲೂಕಿನ ಕೊನೆಯ ಗ್ರಾಮವಾದ ಕಣಮೇಶ್ವರದಿಂದ ಪಾದಯಾತ್ರೆ ಆರಂಭಿಸಲಾಯಿತು.

ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ತಳವಾರ ಎಸ್ ಟಿ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಡಾ. ಸರ್ದಾರ್ ರಾಯಪ್ಪ ಅವರು, ಹಿಂದಿನ ಬಿಜೆಪಿ ಸರ್ಕಾರ ತಳವಾರ ಮತ್ತು ಪರಿವಾರದ ಜಾತಿಗಳನ್ನು ಎಸ್ ಟಿ ಪಟ್ಟಿಗೆ ಸೇರಿಸಿ ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಣೆಗೆ ಅವಕಾಶ ಮಾಡಿಕೊಟ್ಟಿತ್ತು ಎಂದು ಸ್ಮರಿಸಿದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ತಳವಾರ ಸಮುದಾಯದವರಿಗೆ ಎಸ್ ಟಿ ಪ್ರಮಾಣ ಪತ್ರ ನೀಡಲು ನಾನಾ ತೊಂದರೆಗಳನ್ನು ಸೃಷ್ಟಿಸುತ್ತಿದ್ದು, ಸರಳ ವಿಧಾನದಲ್ಲಿ ಪ್ರಮಾಣಪತ್ರ ವಿತರಣೆಯಾಗಬೇಕೆಂದು ಒತ್ತಾಯಿಸಿದರು. ಬೇಡಿಕೆ ಈಡೇರುವ ತನಕ ಹೋರಾಟವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಈ ಪಾದಯಾತ್ರೆಯಲ್ಲಿ ಸಮಾಜದ ಪ್ರಮುಖ ಮುಖಂಡರಾದ ರೇವಣಸಿದ್ಧಪ್ಪಗೌಡ ಕಮಾನಮನಿ, ವಸಂತರಾಯ ನರಿಬೋಳ, ಬಾಪುಗೌಡ ಮಾಲಿಪಾಟೀಲ, ಭಗವಂತರಾಯ ಬೆಣ್ಣೂರ, ಸಿದ್ದನಗೌಡ ಮಾವನೂರ, ಅಶೋಕ ಕಂಕಿ, ಹಳ್ಳೆಪ್ಪ ನಾಟಿಕಾರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.

ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆಗೆ ಮಹಿಳೆಯರು ಸಹಕಾರ ನೀಡುತ್ತಿದ್ದು, ರೊಟ್ಟಿ ಮತ್ತು ಶೇಂಗಾಹಿಂಡಿ ವಿತರಿಸುತ್ತಿದ್ದಾರೆ. ತಳವಾರ ಸಮಾಜದಿಂದ ಹೋರಾಟಗಾರರಿಗೆ ಉತ್ತಮ ಬೆಂಬಲ ಸಿಗುತ್ತಿದ್ದು, ಈ ಹೋರಾಟ ನಮ್ಮ ಹಕ್ಕುಗಳ ಸಾಧನೆಯವರೆಗೆ ಮುಂದುವರಿಯುತ್ತದೆ ಎಂದು ಹೋರಾಟಗಾರರು ಹೂಕಾರ ಹಾಕಿದರು.

ವರದಿ: ಜೆಟ್ಟೆಪ್ಪ ಎಸ ಪೂಜಾರಿ