ದುರಾಡಳಿತಕ್ಕೆ ಸೋಲು, ಜನಸಾಮಾನ್ಯನಿಗೆ ಗೆಲುವು: ಶಾಸಕ ಪ್ರಭು ಚವ್ಹಾಣ
ದುರಾಡಳಿತಕ್ಕೆ ಸೋಲು, ಜನಸಾಮಾನ್ಯನಿಗೆ ಗೆಲುವು: ಶಾಸಕ ಪ್ರಭು ಚವ್ಹಾಣ
ಪಂಚರಾಜ್ಯಗಳ ಚುನಾವಣೆಗಳು ದುರಾಡಳಿತಕ್ಕೆ ಸೋಲು, ಜನಸಾಮಾನ್ಯನಿಗೆ ಗೆಲುವು ಎಂಬ ಸ್ಪಷ್ಟ ಸಂದೇಶವನ್ನು ನೀಡಿವೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ, ಪರಿಣಾಮಕಾರಿ ಆಡಳಿತ ಮತ್ತು ಜನಪರ ಯೋಜನೆಗಳಿಗೆ ಸಿಕ್ಕ ಗೆಲುವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಂಘಟನಾ ಶಕ್ತಿ, ರಾಜಕೀಯ ಕಾರ್ಯಯೋಜನೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರ ಸಮರ್ಪಿತ ಕೆಲಸವು ಮಹತ್ತರ ಪಾತ್ರವಹಿಸಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ದುರಾಡಳಿತ, ಭ್ರಷ್ಟಾಚಾರ ಹಾಗೂ ಕಾನೂನು ಸುವ್ಯವಸ್ಥೆಯ ಹದಗೆಟ್ಟ ಪರಿಸ್ಥಿತಿಯಿಂದ ಜನತೆ ಬಹಳಷ್ಟು ಬೇಸರ ಹೊಂದಿದ್ದರು. ಅವರು ಜನತೆಗೆ ಕನಿಷ್ಟ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಕೂಡ ವಿಫಲರಾಗಿದ್ದರು. ಆಡಳಿತದಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿತ್ತು.
ಅಭಿವೃದ್ಧಿಗಿಂತ ಅನಾವಶ್ಯಕ ವಿಷಯಗಳತ್ತ ಹೆಚ್ಚಿನ ಗಮನ ಹರಿಸಿರುವುದಕ್ಕೆ ಜನರಲ್ಲಿ ಅಸಮಾಧಾನ ಹೆಚ್ಚಾಗಿತ್ತು. ವಿಶೇಷವಾಗಿ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಹಾಗೂ ಮತ್ತಿತರೆ ಪಕ್ಷಗಳಿಗೆ ಮಹಿಳಾ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದಿದ್ದಾರೆ.
ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿಕೊಂಡಿದ್ದರಿಂದ ಜನತೆ ಮೂರನೇ ಅವಧಿಗೆ ಭರ್ಜರಿ ಗೆಲುವು ನೀಡಿದ್ದಾರೆ. ಎಲ್ಲ ಕಡೆ ಬಿಜೆಪಿ ಉತ್ತಮ ಸ್ಥಿತಿಯಲ್ಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಒಳಗೊಂಡು ದೇಶದಿಂದ ಕಾಂಗ್ರೆಸ್ ನಿರ್ಮೂಲನೆಯಾಗಲಿದೆ ಎಂದು ಹೇಳಿದ್ದಾರೆ. ಎಲ್ಲ ಮತದಾರರು, ಪಕ್ಷದ ಕಾರ್ಯಕರ್ತರು ಹಾಗೂ ನಾಯಕತ್ವಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
