ಸಂತ ಕನಕದಾಸರ ಲೋಕಬಂಧು ಋಷಿವ್ಯಕ್ತಿತ್ವ' ವನ್ನು ನಾಡಿನಾದ್ಯಂತ ಪಸರಿಸುವುದೇ ಕನಕದಾಸ ಸಾಹಿತ್ಯ ದತ್ತಿನಿಧಿಯ ಉದ್ದೇಶ' --ಮುಕ್ಕಣ್ಣ ಕರಿಗಾರ
ಸಂತ ಕನಕದಾಸರ ಲೋಕಬಂಧು ಋಷಿವ್ಯಕ್ತಿತ್ವ' ವನ್ನು ನಾಡಿನಾದ್ಯಂತ ಪಸರಿಸುವುದೇ ಕನಕದಾಸ ಸಾಹಿತ್ಯ ದತ್ತಿನಿಧಿಯ ಉದ್ದೇಶ' --ಮುಕ್ಕಣ್ಣ ಕರಿಗಾರ
ಹಾವೇರಿ :ಸಂತ ಕನಕದಾಸರು ಆರೋಗ್ಯವಂತ ಸಮಾಜವನ್ನು ಕಟ್ಟುವ ಉದ್ದೇಶದಿಂದ ಭಗವತ್ ತತ್ತ್ವವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದರು.ಬಸವಣ್ಣನವರ ನಂತರ ನಾಡು ಕಂಡ ಪ್ರಖರ ವೈಚಾರಿಕತೆಯ ಬೆಳಕು ಕನಕದಾಸರು.ಕನಕದಾಸರದ್ದು ನಿಂತ ನೀರಿನ ವ್ಯಕ್ತಿತ್ವವಲ್ಲ ; ಸದಾ ಪ್ರವಹಿಸುತ್ತ ತನ್ನಲ್ಲಿ ಮಿಂದವರ ಮೈ ಮನಗಳಿಗಂಟಿದ ಕೊಳೆ,ಕಶ್ಮಲವನ್ನು ತೊಳೆದು ಸ್ವಚ್ಛಗೊಳಿಸುವ ತೀರ್ಥವ್ಯಕ್ತಿತ್ವ.ಆದ್ದರಿಂದ ಕನಕದಾಸರು ತೀರ್ಥರೂಪರು.ಎಲ್ಲಿಯೂ ನಿಲ್ಲದೆ, ಯಾವ ಮತ ಧರ್ಮದ ಹಂಗು ಅಭಿಮಾನಗಳಿಗೆ ಕಟ್ಟು ಬೀಳದೆ ಹೈಮಾಚಲೋಪಮರಾಗಿ ಬೆಳೆದು ನಿಂತ ಸಿದ್ಧರು ,ಸಂತರು ಕನಕದಾಸರು' ಎಂದು ಕನಕದಾಸರ ಮೇರು ವ್ಯಕ್ತಿತ್ವವನ್ನು ಬಣ್ಣಿಸಿದರು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು.
ಅವರಿಂದು ಹಾವೇರಿ ಜಿಲ್ಲೆಯ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕನಕಾಂಗಳದಲ್ಲಿ ನಡೆದ ಶಿವೈಕ್ಯ ಶರಣೆ ಮಲ್ಲಮ್ಮ ನಾಗಪ್ಪ ಕರಿಗಾರ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಮೊದಲ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು.ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಮಾತನಾಡಿದ ಕರಿಗಾರರು ' ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತು ನಾವು ಕನಕದಾಸರ ಸಾಹಿತ್ಯದಲ್ಲಿ ಮಹಿಳಾಪರ ನಿಲುವುಗಳು ಇಲ್ಲ ಎಂದು ಆಕ್ಷೇಪಿಸುವುದು,ಕನಕದಾಸರು ಮಹಿಳಾ ವಿರೋಧಿಗಳು ಎಂದು ಆರೋಪಿಸುವುದು ಸಂಕುಚಿತತೆಯಾಗುತ್ತದೆ.ಕನಕದಾಸರು ಸ್ತ್ರೀ ಪರ ನಿಲುವುಗಳುಳ್ಳ,ಸ್ತ್ರೀಯರ ತಾಯ್ತನವನ್ನು ಗೌರವಿಸಿ,ಭಾರತೀಯ ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಎತ್ತಿಹಿಡಿದವರು.ನಮ್ಮ ಕೆಲವು ಮಹಿಳಾ ಸಾಹಿತಿಗಳು ಆಕ್ಷೇಪಿಸುವಂತೆ ಜಾತಿ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸಿದ ಕನಕದಾಸರು ಮಹಿಳೆಯರನ್ನು ಕೀಳಾಗಿ ಕಂಡವರು,ಸ್ತ್ರೀ ಸ್ವಾತಂತ್ರ್ಯದ ಪರವಾಗಿ ಒಲವಿಲ್ಲದವರು ಎಂಬುದು ಸರಿಯಲ್ಲ.ಭಾರತದ ಇತಿಹಾಸವನ್ನು ಅವಲೋಕಿಸಿದರೆ ತಳಸಮುದಾಯಗಳು ವೇದ ಕಾಲದಿಂದಲೂ ಜಾತಿ ತಾರತಮ್ಯವನ್ನು ಎದುರಿಸುತ್ತ,ಪ್ರತಿಭಟಿಸುತ್ತಲೇ ಬಂದಿವೆ.ಗೃಹಸ್ಥಜೀವನದ ಸುಖ ಸಂಸಾರದ ಸೂತ್ರದಂತೆ ಬದುಕುತ್ತಿದ್ದ ದಾಂಪತ್ಯ ಜೀವನದಲ್ಲಿ ಪತಿ ಪತ್ನಿಯರು ಪರಸ್ಪರ ಅರ್ಥೈಸಿಕೊಂಡು ನಡೆಯಬೇಕು,ಹೆಣ್ಣಿಗೆ ಪರಪುರುಷರ ಸಂಗ ತರವಲ್ಲ,ಗಂಡಸು ಪರ ಸ್ತ್ರೀಯರ ಸಂಗಕ್ಕೆಳಸಬಾರದು ಎನ್ನುವ ಸಾಮಾಜಿಕ ಚಿಂತನೆ ಕನಕದಾಸರ ಕಾವ್ಯ ಕೀರ್ತನೆಗಳಲ್ಲಿ ಇದೆ. ಕವಿಯು ಕಾಲಮಾನದ ಶಿಶು ಎಂಬಂತೆ ಕನಕದಾಸರು ಬಾಳಿ ಬದುಕಿದ ಹದಿನೈದು ಹದಿನಾರನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯ,ಮಹಿಳಾ ವಿಮೋಚನೆಯಂತಹ ಸಂಗತಿಗಳು ಜ್ವಲಂತ ವಿಷಯಗಳಾಗಿರಲಿಲ್ಲ.ವಿಜಯನಗರದ ಅರಸರ ದಣ್ಣಾಯಕ ಅಂದರೆ ಸೇನಾ ಮುಖ್ಯಸ್ಥರಾಗಿ ದಂಡ ಹಿಡಿದಿದ್ದ ಕನಕದಾಸರು ಪ್ರಭುಸಮ್ಮಿತ ಧರ್ಮದಂಡವನ್ನು ಹಿಡಿದು,ನಡೆದವರು.ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ ಬುಕ್ಕರು ಶೈವ ಧರ್ಮೀಯರಾಗಿದ್ದರೂ ಕೃಷ್ಣದೇವರಾಯನ ಕಾಲಕ್ಕೆ ವೈಷ್ಣವ ಮತವು ರಾಜಧರ್ಮವಾಗಿತ್ತು.ಒಂದು ಕಡೆ ರಾಮಾನುಜರ ಶ್ರೀ ವೈಷ್ಣವ ಮತ ಮತ್ತೊಂದು ಕಡೆ ಮಧ್ವರ ಮಾಧ್ವಮತ ಈ ಎರಡು ಮತಗಳ ಪ್ರಭಾವ ಅಂದಿನ ಸಮಾಜದಲ್ಲಿ ಪ್ರಭಾವಶಲಿಯಾಗಿತ್ತು.ವ್ಯಾಸರಾಯರ ವ್ಯಾಸಕೂಟ,ದಾಸಕೂಟಗಳೆಂಬ ಕೂಟದ್ವಯಗಳ ನಡುವೆ ಕನಕದಾಸರೊಬ್ಬರೇ ತಳಸಮುದಾಯದ,ಕುರುಬರ ಕುಲದಿಂದ ಬಂದವರಾಗಿದ್ದರಿಂದ ಅವರು ಜಾತಿಯ,ಕುಲದ ಪ್ರಶ್ನೆಯನ್ನು ಮೇಲಿಂದ ಮೇಲೆ ಎದುರಿಸಲೇಬೇಕಾಯಿತು,ನೋವು ಅಪಮಾನಗಳನ್ನು ಅನುಭವಿಸಬೇಕಾಯಿತು. ಈ ಕಾರಣದಿಂದ ಕನಕದಾಸರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದಷ್ಟು ಪ್ರಬಲವಾಗಿ ಸ್ತ್ರೀಸ್ವಾತಂತ್ರ್ಯದ ಬಗ್ಗೆ ಮಾತನಾಡಲಿಲ್ಲ.ಅಲ್ಲದೆ ರಾಮಾನುಜ- ಮಾಧ್ವಮತ ಪರಂಪರೆಗಳ ಆಚಾರ್ಯ ಪರಂಪರೆಯು ಪ್ರತಿಷ್ಠಾಪಿಸಿದ್ದ ಪುರುಷಪ್ರಧಾನ ವ್ಯವಸ್ಥೆಯನ್ನು ಕನಕದಾಸರು ಪ್ರಶ್ನಿಸುವಂತೆಯೂ ಇರಲಿಲ್ಲ.ಮೋಹನ ತರಂಗಿಣಿಯಲ್ಲಿ ಬರುವ ಅತಿಕಾಮ ಎನ್ನುವಂತಿರುವ ಸ್ತ್ರೀಯರ ಕುಚಗಳ,ಅಂಗಾಂಗಳ ವರ್ಣನೆಯು ಒಬ್ಬಕವಿಯಾಗಿ ಕನಕದಾಸರು ಅಷ್ಟಾದಶವರ್ಣನೆಗಳ ಕಟ್ಟು ಪಾಡಿಗೆ ಸಿಕ್ಕು ರಚಿಸಿದ ಶೃಂಗಾರರಸಪ್ರದೀಪ್ತಭಾವವೇ ಹೊರತು ಕನಕದಾಸರ ಸಂತ ವ್ಯಕ್ತಿತ್ವದ ಕುಂದಲ್ಲ.ಕನಕದಾಸರ ನಾಲ್ಕಾರು ಕೀರ್ತನೆಗಳನ್ನಷ್ಟೇ ಓದಿ ಕನಕದಾಸರ ವ್ಯಕ್ತಿತ್ವದ ಕುಂದು ಕೊರತೆಗಳನ್ನು ಅರಸುವ ಬದಲು ಕನಕದಾಸರ ಸಮಗ್ರ ಸಾಹಿತ್ಯವನ್ನು ಓದಿ,ಅವರ ಸಂತ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬೇಕು' ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕವಿ ಹನುಮಂತ ಸೋಮನ ಕಟ್ಟಿಯವರು ಮುಕ್ಕಣ್ಣ ಕರಿಗಾರ ಅವರು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಯುಕ್ತರಾಗಿ ಬಂದ ಬಳಿಕ ನಿದ್ರಾವಸ್ಥೆಯಲ್ಲಿದ್ದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಎದ್ದು ಮಾತನಾಡುತ್ತಿರುವ,ಜಂಗಮಶಕ್ತಿ ಕೇಂದ್ರವಾಗಿರುವುದು ಕನಕದಾಸರ ಭಕ್ತರು, ಅನುಯಾಯಿಗಳು, ಅಭಿಮಾನಿಗಳಲ್ಲಿ ಅತೀವ ಸಂತಸವನ್ನು ಉಂಟು ಮಾಡಿದೆ' ಎಂದರು.ಮತ್ತೋರ್ವ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣ ಖಾನಾಪುರ ಅವರು ' ಮುಕ್ಕಣ್ಣ ಕರಿಗಾರ ಅವರು ಪ್ರಾರಂಭಿಸಿದ ಕನಕದಾಸ ಸಾಹಿತ್ಯ ದತ್ತಿನಿಧಿ' ಯೋಜನೆಯು ಅತ್ಯುತ್ತಮ ಕನಕಸೇವೆಯಾಗಿದ್ದು ಇದನ್ನು ಎಲ್ಲರೂ ಬೆಂಬಲಿಸುವ ಅಗತ್ಯವಿದೆ' ಎಂದರು.
"ಕನಕದಾಸರ ಸಾಹಿತ್ಯದಲ್ಲಿ ಸ್ತ್ರೀಪರ ನಿಲುವುಗಳು " ವಿಷಯದ ಕುರಿತು ಉಪನ್ಯಾಸ ನೀಡಿದ ಹಾವೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾಕ್ಟರ್ ಪುಷ್ಪಾವತಿ ಶೆಲವಡಿ ಮಠ ಅವರು " ಕನಕದಾಸರು ಪ್ರಗತಿಪರ ಚಿಂತಕರಾಗಿದ್ದಂತೆಯೇ ಮಹಿಳಾಪರ ನಿಲುವುಗಳನ್ನು ಹೊಂದಿದ್ದ ಸಮಾಜ ಸುಧಾರಕರು ಆಗಿದ್ದರು.ಪ್ರಸ್ತುತ ಕಾಲಘಟ್ಟದಲ್ಲಿ ನಿಂತು ವಿಚಾರಿಸಿದರೆ ಕನಕದಾಸರ ಮಹಿಳಾ ಪರ ನಿಲುವಿನಲ್ಲಿ ಪ್ರಶ್ನೆಗಳು ಏಳಬಹುದು,ಕನಕದಾಸರ ಸ್ತ್ರೀಪರ ನಿಲುವಿನಲ್ಲಿ ದ್ವಂದ್ವಗಳನ್ನು ಗುರುತಿಸಬಹುದು. ಆದರೆ ಕನಕದಾಸರ ಸಮಗ್ರ ಸಾಹಿತ್ಯವನ್ನು ಓದಿದಾಗ ಕನಕದಾಸರು ಸ್ತ್ರೀಯರನ್ನು ಕೀಳಾಗಿಯೇನು ಕಂಡಿಲ್ಲ ಬದಲಿಗೆ ಸ್ತ್ರೀಪರ ಗೌರವಯುತ ಭಾವನೆಗಳನ್ನು ಉಳ್ಳವರಾಗಿದ್ದರು ಎಂದು ಖಚಿತಪಡುತ್ತದೆ' ಎಂದು ಅಭಿಪ್ರಾಯಿಸಿದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಲೆಕ್ಕಾಧೀಕ್ಷಕ ಸಿ ಬಿ ಸಪ್ಪಿನ್ ಮಾತನಾಡಿ ' ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಪ್ರಾರಂಭಿಸಿದ ದತ್ತಿ ಉಪನ್ಯಾಸ ಮಾಲಿಕೆಯು ನಾಡಿನಾದ್ಯಂತ ಹರಡಿ ಕನಕದಾಸರ ಸತ್ತ್ವಯುತ ವಿಚಾರಗಳು ಪ್ರಚಾರವಾಗಬೇಕಿದೆ' ಎಂದರು.ಪ್ರಾಧಿಕಾರದ ಸಂಶೋಧಕ ಡಾಕ್ಟರ್ ಜಗನ್ನಾಥ ಗೇನಣ್ಣನವರ್ ಕಾರ್ಯಕ್ರಮ ನಿರ್ವಹಣೆ ಮಾಡಿದರೆ ಅಶೋಕ ಗಾಜಿ ಅತಿಥಿಗಳ ಪರಿಚಯ ಮಾಡಿದರು.ಪ್ರಾಧಿಕಾರದ ಸಿಬ್ಬಂದಿ ಸಂಗಯ್ಯ ಈಳಿಗೇರ್ ಪ್ರಾರ್ಥಿಸಿದರೆ ವಿಜಯ್ ಬ್ಯಾಡಗಿ ದತ್ತಿ ಉಪನ್ಯಾಸ ದಾಖಲೀಕರಣ ಮಾಡಿದರು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಯವರು ಮತ್ತು ಕನಕದಾಸರ ಅನುಯಾಯಿಗಳು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
