ಶಿವಾಜಿ ಮಹಾರಾಜರು ಶೌರ್ಯ, ಸಾಹಸ, ದೇಶಭಕ್ತಿಯ ಸಂಕೇತ: ಶಾಸಕ ಪ್ರಭು ಚವ್ಹಾಣ
ಹೊಳಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ
ಶಿವಾಜಿ ಮಹಾರಾಜರು ಶೌರ್ಯ, ಸಾಹಸ, ದೇಶಭಕ್ತಿಯ ಸಂಕೇತ: ಶಾಸಕ ಪ್ರಭು ಚವ್ಹಾಣ
ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ನ.19 ರಂದು ಕಮಲನಗರ ತಾಲ್ಲೂಕಿನ ಹೊಳಸಮುದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ಶೌರ್ಯ, ಸಾಹಸ, ಪರಾಕ್ರಮ ಹಾಗೂ ದೂರದೃಷ್ಟಿಯ ಆಡಳಿತದ ಮೂಲಕ ಸ್ವರಾಜ್ಯ ಸ್ಥಾಪನೆಗೆ ಶ್ರಮಿಸಿದ ಮಹಾನ್ ರಾಷ್ಟ್ರಪುರುಷರು. ಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಪ್ರಜಾಹಿತಕ್ಕೆ ಆದ್ಯತೆ ನೀಡಿದ ಅವರ ಆಡಳಿತ ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಶಿವಾಜಿ ಮಹಾರಾಜರು ದೇಶಭಕ್ತಿ, ಸ್ವಾಭಿಮಾನ ಮತ್ತು ಸ್ವರಾಜ್ಯದ ಸಂಕಲ್ಪಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ಮಾತೃಭೂಮಿಯ ರಕ್ಷಣೆ, ಧರ್ಮ ಮತ್ತು ಸಂಸ್ಕೃತಿಯ ಉಳಿವು ಹಾಗೂ ಜನರ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ವೀರರು. ಅವರ ಅಪ್ರತಿಮ ಸಾಹಸ, ತ್ಯಾಗ, ಶೌರ್ಯ ಮತ್ತು ರಾಷ್ಟ್ರಪ್ರೇಮ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿಯ ಕಿಚ್ಚು ಹೊತ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಶಿವಾಜಿ ಮಹಾರಾಜರು ಮಹಿಳೆಯರು, ರೈತರು, ಬಡವರ ಹಿತ ಚಿಂತಕರು ಹಾಗೆಯೇ ಒಗ್ಗಟ್ಟು ಮತ್ತು ಸಂಘಟಿತ ಶಕ್ತಿಯ ಸಂಕೇತವೂ ಆಗಿದ್ದಾರೆ. ಸಮಾಜದಲ್ಲಿ ಒಗ್ಗಟ್ಟು, ಸಹೋದರತ್ವ ಮತ್ತು ಪರಸ್ಪರ ಸಹಕಾರವಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವಜನತೆ ದೇಶದ ಏಕತೆ, ಸಮಗ್ರತೆ ಮತ್ತು ಗೌರವವನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.
ಹೋಳಸಮುದ್ರ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ನಿರಂತರವಾಗಿ ಸಹಕರಿಸುತ್ತಿದ್ದು, ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಗ್ರಾಮದ ಅಭಿವೃದ್ಧಿ ಒಂದಿಬ್ಬರ ಜವಾಬ್ದಾರಿಯಲ್ಲ; ಅದು ಸಮಸ್ತ ಗ್ರಾಮಸ್ಥರ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಗ್ರಾಮಸ್ಥರೆಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ, ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು. ಗ್ರಾಮದ ಪ್ರಗತಿಗೆ ನನ್ನ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲರಾವ ಪಾಟೀಲ, ಏಕನಾಥ ಮಹಾರಾಜ ಹಂಡೆ, ದಾದಾ ಮಹಾರಾಜ ನಗರಕರ್, ಪದ್ಮಾಕರ ಪಾಟೀಲ, ಬಾಬುರಾವ ಕಾರಭಾರಿ, ಪ್ರಕಾಶ ಪಾಟೀಲ, ಶಿವಾಜಿರಾವ ಪಾಟೀಲ ಮುಂಗನಾಳ, ಉಷಾತಾಯಿ ಪಾಟೀಲ, ಅನೀಲ ವಾಡೀಕರ್, ಅನೀಲ ಭೂಸಾರೆ, ಪ್ರವೀಣ ಕಾರಬಾರಿ, ಭರತ ಕದಂ, ರಾಹುಲ ಪಾಟೀಲ, ಪಾಂಡುರಂಗ ಪಾಟೀಲ, ವಿಷ್ಣು ನುದನೂರೆ, ಮಾರುತಿ ಅಳಂದೆ, ರಾಮ್ ಕದಂ, ಅನೀಲ ಶಿಂಧೆ, ವಿಜಯಕುಮಾರ ನುದನೂರೆ, ಸಂದೀಪ ತೇಲಗಾಂವಕರ್, ಅಮಿತಕುಮಾರ ಕುಲಕರ್ಣಿ, ಬಾಳಾಸಾಬ್ ಪಾಟುದೆ ಸೇರಿದಂತೆ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು, ಯುವಕರು ಹಾಗೂ ಶಿವಾಜಿ ಮಹಾರಾಜರ ಅಭಿಮಾನಿಗಳು ಉಪಸ್ಥಿತರಿದ್ದರು.

