ಮಕ್ಕಳ ನರ ಮತ್ತು ಅನುವಂಶಿಕ ಕಾಯಿಲೆಗಳಿಗೆ ಆರಂಭಿಕ ರೋಗನಿರ್ಣಯ ಅತ್ಯಗತ್ಯ: ತಜ್ಞರ ಅಭಿಮತ
ಮಕ್ಕಳ ನರ ಮತ್ತು ಅನುವಂಶಿಕ ಕಾಯಿಲೆಗಳಿಗೆ ಆರಂಭಿಕ ರೋಗನಿರ್ಣಯ ಅತ್ಯಗತ್ಯ: ತಜ್ಞರ ಅಭಿಮತ
ರೋಗನಿರೋಧಕ ಶಕ್ತಿಯೇ ಮೆದುಳಿನ ಮೇಲೆ ದಾಳಿ ಮಾಡುವ ಅಪರೂಪದ ಕಾಯಿಲೆಗಳಿಗೂ ಚಿಕಿತ್ಸೆಯಿದೆ
ಕಲಬುರಗಿ: ಮಕ್ಕಳಲ್ಲಿ ಇದ್ದಕ್ಕಿದ್ದಂತೆ ಮೂರ್ಛೆ (ಫಿಟ್ಸ್), ದೃಷ್ಟಿ ಮಂದವಾಗುವುದು, ನಡೆಯಲು ತೊಂದರೆ, ದೈಹಿಕ ದೌರ್ಬಲ್ಯ ಹಾಗೂ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬಾರದು. ಇಂತಹ ಲಕ್ಷಣಗಳು ಮೆದುಳು, ಬೆನ್ನುಹುರಿ ಅಥವಾ ನರಗಳ ಮೇಲೆ ರೋಗನಿರೋಧಕ ವ್ಯವಸ್ಥೆಯ ಅಸಹಜ ಪ್ರತಿಕ್ರಿಯೆಯಿಂದ ಉಂಟಾಗುವ ಕಾಯಿಲೆಗಳ ಸೂಚನೆಯಾಗಿರಬಹುದು. ಆರಂಭದಲ್ಲಿಯೇ ನಿಖರವಾಗಿ ರೋಗನಿರ್ಣಯ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಇಂತಹ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿದೆ ಎಂದು ಸಲಹೆಗಾರ ಮಕ್ಕಳ ನರವಿಜ್ಞಾನಿ ಯಶೋದಾ ಆಸ್ಪತ್ರೆಗಳು, ಹೈಟೆಕ್ ಸಿಟಿ ಡಾ. ಮೊಹಮ್ಮದ್ ಅನಾಸ್ ಹೇಳಿದರು.
ನಗರದ ಯಶೋದಾ ಮೆಡಿಕಲ್ ಸೆಂಟರ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ನರ-ರೋಗನಿರೋಧಕ ಶಾಸ್ತ್ರದ (ಪೀಡಿಯಾಟ್ರಿಕ್ ನ್ಯೂರೋಇಮ್ಯುನಾಲಜಿ) ಕುರಿತು ಅವರು ಮಾತನಾಡಿದರು.
ಆಟೋಇಮ್ಯೂನ್ ಎನ್ಸೆಫಾಲಿಟಿಸ್, ಎಂಒಜಿ ಆಂಟಿಬಾಡಿ ಸಂಬಂಧಿತ ಕಾಯಿಲೆ (MOGAD), ನ್ಯೂರೋಮೈಲಿಟಿಸ್ ಆಪ್ಟಿಕಾ ಸ್ಪೆಕ್ಟ್ರಮ್ ಡಿಸಾರ್ಡರ್ (NMOSD) ಮತ್ತು ಮಕ್ಕಳ ಮಲ್ಟಿಪಲ್ ಸ್ಕ್ಲೆರೋಸಿಸ್ನಂತಹ ಕಾಯಿಲೆಗಳು ಮಕ್ಕಳ ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ. ಇವುಗಳ ಲಕ್ಷಣಗಳು ಸಾಮಾನ್ಯ ನರರೋಗಗಳು, ಮೆದುಳಿನ ಸೋಂಕುಗಳು ಹಾಗೂ ಆನುವಂಶಿಕ ಕಾಯಿಲೆಗಳ ಲಕ್ಷಣಗಳನ್ನೇ ಹೋಲುವುದರಿಂದ ನಿಖರ ರೋಗನಿರ್ಣಯ ಸವಾಲಿನ ಸಂಗತಿಯಾಗಿದೆ. ಆಧುನಿಕ ಎಂಆರ್ಐ, ಪಿಇಟಿ ಸ್ಕ್ಯಾನ್, ಬೆನ್ನುಮೂಳೆಯ ದ್ರವದ ಪರೀಕ್ಷೆ ಹಾಗೂ ನಿರ್ದಿಷ್ಟ ಪ್ರತಿಕಾಯಗಳ ಪರೀಕ್ಷೆಗಳಿಂದ ಕಾಯಿಲೆಗಳನ್ನು ಗುರುತಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾರ್ಟಿಕೊಸ್ಟೆರಾಯ್ಡ್ಸ್, ಐವಿಐಜಿ, ಪ್ಲಾಸ್ಮಾ ವಿನಿಮಯ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳು ಲಭ್ಯವಿವೆ. ತೀವ್ರ ಸ್ವರೂಪದ ಕಾಯಿಲೆಗಳಿಗೆ ರಿಟುಕ್ಸಿಮಾಬ್ ಮತ್ತು ಟೊಸಿಲಿಜುಮಾಬ್ನಂತಹ ಸುಧಾರಿತ ಇಮ್ಯುನೊಥೆರಪಿಗಳನ್ನು ಬಳಸಲಾಗುತ್ತದೆ. ಇಂತಹ ಮಕ್ಕಳಿಗೆ ನರವಿಜ್ಞಾನ ತಜ್ಞರು, ಪ್ರಯೋಗಾಲಯಗಳು, ತೀವ್ರ ನಿಗಾ ಘಟಕ ಹಾಗೂ ಸುಧಾರಿತ ಚಿಕಿತ್ಸಾ ಸೌಲಭ್ಯಗಳಿರುವ ಸಮಗ್ರ ಆಸ್ಪತ್ರೆ ವ್ಯವಸ್ಥೆ ಅಗತ್ಯವಾಗಿದೆ. ಆರಂಭಿಕ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯಿಂದ ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಜೀವನದ ಗುಣಮಟ್ಟವನ್ನು ಉತ್ತಮಪಡಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಲಹೆಗಾರ ತಳಿಶಾಸ್ತ್ರಜ್ಞ ಮತ್ತು ಚಯಾಪಚಯ ಅಸ್ವಸ್ಥತೆಗಳ ತಜ್ಞ ಯಶೋದಾ ಆಸ್ಪತ್ರೆಗಳು, ಹೈಟೆಕ್ ಸಿಟಿ ಡಾ. ಸಾರಾ ಬೈಲೂರ್, ಮಕ್ಕಳಲ್ಲಿ ಅನುವಂಶಿಕ ಕಾಯಿಲೆಗಳು, ವಂಶಪಾರಂಪರ್ಯ ಚಯಾಪಚಯ ಅಸ್ವಸ್ಥತೆಗಳು ಹಾಗೂ ಬಾಲ್ಯದ ಅಪಸ್ಮಾರದ ಬಗ್ಗೆ ಪೋಷಕರು ಹೆಚ್ಚಿನ ಜಾಗೃತಿ ಹೊಂದಿರಬೇಕು ಎಂದು ಹೇಳಿದರು.
ಮಕ್ಕಳಲ್ಲಿ ಬೆಳವಣಿಗೆಯ ವಿಳಂಬ, ಬೌದ್ಧಿಕ ಅಸಮರ್ಥತೆ, ಪದೇಪದೇ ಮೂರ್ಛೆ, ಸ್ನಾಯುಗಳ ದೌರ್ಬಲ್ಯ, ಕಾರಣವಿಲ್ಲದ ವಾಂತಿ, ದೈಹಿಕ ಬೆಳವಣಿಗೆಯಲ್ಲಿ ಹಿನ್ನಡೆ ಹಾಗೂ ಈ ಹಿಂದೆ ಕಲಿತ ಕೌಶಲಗಳನ್ನು ಕಳೆದುಕೊಳ್ಳುವ ಲಕ್ಷಣಗಳು ಕಂಡುಬಂದರೆ ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಇವುಗಳನ್ನು ಸಾಮಾನ್ಯ ಬಾಲ್ಯದ ಕಾಯಿಲೆಗಳೆಂದು ನಿರ್ಲಕ್ಷಿಸುವುದರಿಂದ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ವಿಳಂಬವಾಗಬಹುದು ಎಂದು ಎಚ್ಚರಿಸಿದರು.
ನವಜಾತ ಶಿಶುಗಳ ತಪಾಸಣೆ, ಜೀವರಾಸಾಯನಿಕ ಪರೀಕ್ಷೆಗಳು ಹಾಗೂ ಸುಧಾರಿತ ಅನುವಂಶಿಕ ಪರೀಕ್ಷೆಗಳ ಮೂಲಕ ಕಾಯಿಲೆಗಳ ಮೂಲ ಕಾರಣ ಪತ್ತೆಹಚ್ಚಬಹುದು. ಅನೇಕ ಚಯಾಪಚಯ ಕಾಯಿಲೆಗಳಿಗೆ ಆಹಾರ ಪದ್ಧತಿಯ ಬದಲಾವಣೆ, ವಿಟಮಿನ್ ಪೂರಕಗಳು, ಕಿಣ್ವ ಬದಲಿ ಚಿಕಿತ್ಸೆ ಸೇರಿದಂತೆ ನಿರ್ದಿಷ್ಟ ಚಿಕಿತ್ಸೆಗಳು ಲಭ್ಯವಿವೆ. ಆರಂಭಿಕ ಚಿಕಿತ್ಸೆ ನೀಡುವುದರಿಂದ ಶಾಶ್ವತ ನರಮಂಡಲದ ಹಾನಿಯನ್ನು ತಡೆಗಟ್ಟಬಹುದು ಎಂದು ವಿವರಿಸಿದರು.
ಪದೇಪದೇ ಮೂರ್ಛೆ ಕಾಣಿಸಿಕೊಳ್ಳುವ ಮಕ್ಕಳಲ್ಲಿ ಅದರ ಹಿಂದಿನ ಅನುವಂಶಿಕ ಅಥವಾ ಚಯಾಪಚಯ ಕಾರಣವನ್ನು ಪತ್ತೆಹಚ್ಚುವುದು ಮುಖ್ಯ. ಅನುವಂಶಿಕ ಸಮಾಲೋಚನೆಯಿಂದ ಕಾಯಿಲೆಯ ವಂಶಪಾರಂಪರ್ಯ ಸ್ವರೂಪ ಹಾಗೂ ಮುಂದಿನ ಮಕ್ಕಳಿಗೆ ರೋಗ ಹರಡುವ ಸಾಧ್ಯತೆಗಳ ಬಗ್ಗೆ ಕುಟುಂಬಗಳಿಗೆ ಮಾಹಿತಿ ನೀಡಬಹುದು. ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಯಿಂದ ಜೀನ್ ಆಧಾರಿತ ಚಿಕಿತ್ಸೆ ಸೇರಿದಂತೆ ಹೊಸ ಚಿಕಿತ್ಸಾ ವಿಧಾನಗಳು ಲಭ್ಯವಾಗುತ್ತಿದ್ದು, ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಲ್ಲಿಯೂ ಹೊಸ ಭರವಸೆ ಮೂಡಿದೆ ಎಂದರು.
ಮಕ್ಕಳ ತಜ್ಞರು, ನರವಿಜ್ಞಾನಿಗಳು, ವೈದ್ಯಕೀಯ ತಳಿಶಾಸ್ತ್ರಜ್ಞರು, ಚಯಾಪಚಯ ತಜ್ಞರು ಹಾಗೂ ಆಹಾರ ತಜ್ಞರನ್ನೊಳಗೊಂಡ ಬಹುಶಿಸ್ತೀಯ ವೈದ್ಯಕೀಯ ಆರೈಕೆ ಅಗತ್ಯವಾಗಿದೆ. ಪ್ರತಿಯೊಂದು ಮಗುವಿಗೂ ಆರಂಭಿಕ ರೋಗನಿರ್ಣಯ, ಪ್ರತಿಯೊಂದು ಕುಟುಂಬಕ್ಕೂ ಸರಿಯಾದ ಮಾಹಿತಿ ಹಾಗೂ ಪ್ರತಿಯೊಂದು ಮಗುವಿಗೂ ಉತ್ತಮ ಚಿಕಿತ್ಸೆ ದೊರೆಯಬೇಕು. ಆರಂಭಿಕ ರೋಗನಿರ್ಣಯವು ಮಕ್ಕಳ ಭವಿಷ್ಯವನ್ನು ಬದಲಾಯಿಸಬಲ್ಲದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ವಿ. ರೆಡ್ಡಿ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ 9154987847 ಈ ನಂಬರಗೆ ಸಂಪರ್ಕಿಸಬಹುದು.

