ಕಂಬಾರರು ಬಹುಮುಖ ಪ್ರತಿಭೆಯ ಸಾಹಿತಿ :ಕಟ್ಟಿ
ಕಂಬಾರರು ಬಹುಮುಖ ಪ್ರತಿಭೆಯ ಸಾಹಿತಿ :ಕಟ್ಟಿ
ಕಲಬುರಗಿ :ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಬಹುಮುಖ ಪ್ರತಿಭೆಯ ಸಾಹಿತಿಗಳಾಗಿದ್ದಾರೆ. ಎಂದು ಡಾ. ಎಂ.ಬಿ ಕಟ್ಟಿ ಹೇಳಿದರು
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಯೋಗದಲ್ಲಿ ಶ್ರೀಮತಿ ಶಾರದಾಬಾಯಿ ನಾಗೇಂದ್ರಪ್ಪ ಭೈರಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಡಾ ಚಂದ್ರಶೇಖರ ಕಂಬಾರ ಅವರ ಕುರಿತು ಉಪನ್ಯಾಸ ನೀಡುತ್ತಾ ಡಾ. ಚಂದ್ರಶೇಖರ ಕಂಬಾರ ಅವರು ಕವಿ, ನಾಟಕಕಾರ, ಕಾದಂಬರಿಕಾರ, ಜಾನಪದ ತಜ್ಞ ಹಾಗೂ ಚಲನಚಿತ್ರ ನಿರ್ದೇಶಕರಾಗಿ ಅವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಲ್ಲದೆ
,ಸಾಹಿತ್ಯದಲ್ಲಿ ಉತ್ತರ ಕರ್ನಾಟಕದ ಮಣ್ಣಿನ ಸೊಗಡು, ಜನಪದ ಜೀವನದ ವೈವಿಧ್ಯತೆ ಹಾಗೂ ಸಾಮಾಜಿಕ ವಾಸ್ತವಗಳು ಜೀವಂತವಾಗಿ ಮೂಡಿಬರುತ್ತವೆ. ಆಧುನಿಕ ಸಾಹಿತ್ಯದ ಅಭಿವ್ಯಕ್ತಿಯೊಂದಿಗೆ ಜಾನಪದ ಪರಂಪರೆಯನ್ನು ಸಮನ್ವಯಗೊಳಿಸಿರುವುದು ಅವರ ಬರವಣಿಗೆಯ ಪ್ರಮುಖ ವೈಶಿಷ್ಟ್ಯವಾಗಿದೆ.
ಕಂಬಾರರು ಕಾವ್ಯ, ನಾಟಕ, ಕಾದಂಬರಿ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ 'ಜೋಕುಮಾರಸ್ವಾಮಿ', 'ಸಿರಿಸಂಪಿಗೆ', 'ಕಾಡುಕುದುರೆ', 'ಮಹಾಮಾಯಿ', 'ಚಕೋರಿ' ಮತ್ತು 'ಶಿಖರ ಸೂರ್ಯ' ಪ್ರಮುಖವಾಗಿವೆ. ವಿಶೇಷವಾಗಿ ಅವರ ನಾಟಕಗಳು ಜಾನಪದ ಕಥನಶೈಲಿ, ಸಂಗೀತ, ನೃತ್ಯ ಮತ್ತು ರಂಗಭೂಮಿಯ ಸೃಜನಶೀಲ ಸಂಯೋಜನೆಯಿಂದ ಗಮನ ಸೆಳೆಯುತ್ತವೆ.
ಅವರ ಕೃತಿಗಳಲ್ಲಿ ಗ್ರಾಮೀಣ ಬದುಕಿನ ಸಂಘರ್ಷ, ಮನುಷ್ಯನ ಆಸೆ-ಆಕಾಂಕ್ಷೆಗಳು, ಅಧಿಕಾರದ ಸ್ವರೂಪ, ಸಾಮಾಜಿಕ ಅಸಮಾನತೆ ಹಾಗೂ ಮಾನವೀಯ ಸಂಬಂಧಗಳು ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಜನಸಾಮಾನ್ಯರ ಭಾಷೆಯನ್ನೇ ಸಾಹಿತ್ಯದ ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡಿರುವುದು ಅವರ ಬರವಣಿಗೆಯ ಹೆಗ್ಗಳಿಕೆಯಾಗಿದೆ.
ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ
ಕಂಬಾರರು ಕೇವಲ ಸಾಹಿತಿಗಳಲ್ಲ; ಕನ್ನಡದ ಜನಪದ ಸಂಸ್ಕೃತಿಯ ಜೀವಂತ ಪ್ರತಿನಿಧಿಯೂ ಹೌದು. ಮಣ್ಣಿನ ಭಾಷೆ, ಜನರ ಬದುಕು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಜಾಗತಿಕ ಸಾಹಿತ್ಯದ ಅಭಿವ್ಯಕ್ತಿಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಸಾಹಿತ್ಯ ಕೃತಿಗಳು ಮುಂದಿನ ಪೀಳಿಗೆಯ ಬರಹಗಾರರಿಗೆ ಸ್ಫೂರ್ತಿಯಾಗಿವೆ ಎಂದರು.
ಕನ್ನಡ ನಾಡು ಲೇಖಕರ ಓದುಗರ ಸಹಕಾರ ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ಸ್ವಾಮಿರಾವ ಕುಲಕರ್ಣಿ ಡಾ. ಶರಣಬಸಪ್ಪ ವಡ್ಡನಕೇರಿ ಶ್ರೀ ನಾಗೇಂದ್ರಪ್ಪ ಭೈರಪ್ಪ ಡಾ.ಸುಮಂಗಲಾ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

