ಸಾವಿನ ದವಡೆಯಿಂದ ಮಹಿಳೆಗೆ ಮರುಜೀವ: ಹರಿದಾಸ್ ಹಾರ್ಟ್ ಆಸ್ಪತ್ರೆಯಲ್ಲಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿ

ಸಾವಿನ ದವಡೆಯಿಂದ ಮಹಿಳೆಗೆ ಮರುಜೀವ: ಹರಿದಾಸ್ ಹಾರ್ಟ್ ಆಸ್ಪತ್ರೆಯಲ್ಲಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿ

ಸಾವಿನ ದವಡೆಯಿಂದ ಮಹಿಳೆಗೆ ಮರುಜೀವ: ಹರಿದಾಸ್ ಹಾರ್ಟ್ ಆಸ್ಪತ್ರೆಯಲ್ಲಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿ

ಕುತ್ತಿಗೆಯಿಂದ ಹೃದಯ, ಶ್ವಾಸಕೋಶಗಳವರೆಗೆ ಹರಡಿದ್ದ ಮಾರಣಾಂತಿಕ ಸೋಂಕು; ಸೆಪ್ಟಿಕ್ ಶಾಕ್‌ನಲ್ಲಿದ್ದ 50 ವರ್ಷದ ಮಹಿಳೆಗೆ ಚಿಕಿತ್ಸೆ

ಕಲಬುರಗಿ: ಕುತ್ತಿಗೆಯಿಂದ ಎದೆಭಾಗಕ್ಕೆ ಹರಡಿ ಹೃದಯ ಹಾಗೂ ಎರಡೂ ಶ್ವಾಸಕೋಶಗಳನ್ನು ಬಾಧಿಸಿದ್ದ ಮಾರಣಾಂತಿಕ ಸೋಂಕಿನಿಂದ ಸೆಪ್ಟಿಕ್ ಶಾಕ್‌ಗೆ ಒಳಗಾಗಿದ್ದ 50 ವರ್ಷದ ಮಹಿಳೆಗೆ ನಗರದ ಜವಳಿ ಕಾಂಪ್ಲೆಕ್ಸ್‌ನಲ್ಲಿರುವ ಹರಿದಾಸ್ ಹಾರ್ಟ್ ಆಸ್ಪತ್ರೆಯ ವೈದ್ಯರ ತಂಡ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡಿದೆ. ನಗರದ ಹರಿದಾಸ್ ಹಾಟ್ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ 

ಜಗದೇವಿ ಎಂಬ ಮಹಿಳೆಯ ಕುತ್ತಿಗೆಯಲ್ಲಿ ಆರಂಭವಾಗಿದ್ದ ರೆಟ್ರೋಫ್ಯಾರಿಂಜಿಯಲ್ ಅಬ್ಸೆಸ್ ಸೋಂಕು ಎದೆಯ ಮಧ್ಯಭಾಗಕ್ಕೆ ಹರಡಿ ನೆಕ್ರೋಟೈಸಿಂಗ್ ಮೀಡಿಯಾಸ್ಟೈನೈಟಿಸ್ ಎಂಬ ಗಂಭೀರ ಸ್ಥಿತಿಗೆ ತಲುಪಿತ್ತು. ತೀವ್ರ ಜ್ವರ, ರಕ್ತದಲ್ಲಿ ಸೋಂಕು ಹರಡುವಿಕೆ, ಆಹಾರ ನುಂಗಲು ಸಾಧ್ಯವಾಗದ ಸ್ಥಿತಿ ಹಾಗೂ ಹೃದಯ ಮತ್ತು ಶ್ವಾಸಕೋಶಗಳ ಸುತ್ತ ಕೀವು ಸಂಗ್ರಹವಾಗಿದ್ದರಿಂದ ಅವರ ಜೀವಕ್ಕೆ ಅಪಾಯ ಎದುರಾಗಿತ್ತು.

ಉತ್ತಮ ಚಿಕಿತ್ಸೆಗಾಗಿ ಕುಟುಂಬದವರು ಬೆಂಗಳೂರಿನ ನಾರಾಯಣ ಹೃದಯಾಲಯ, ರಾಮಯ್ಯ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳನ್ನು ಸಂಪರ್ಕಿಸಿದ್ದರು. ಆದರೆ ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ ಶಸ್ತ್ರಚಿಕಿತ್ಸೆಯ ಅಪಾಯ ಹೆಚ್ಚಿದೆ ಎಂದು ತಿಳಿಸಲಾಗಿತ್ತು. ಚಿಕಿತ್ಸೆಗೆ ಸುಮಾರು ₹20 ಲಕ್ಷ ವೆಚ್ಚವಾಗಬಹುದೆಂಬ ಅಂದಾಜನ್ನೂ ನೀಡಲಾಗಿತ್ತು. ಬಳಿಕ ಕಲಬುರಗಿಯ ಇಎಸ್‌ಐ ಆಸ್ಪತ್ರೆ ಮತ್ತು ಜಿಮ್ಸ್‌ ಆಸ್ಪತ್ರೆಗಳನ್ನೂ ಸಂಪರ್ಕಿಸಿದರೂ ನಿರೀಕ್ಷಿತ ಚಿಕಿತ್ಸೆ ದೊರೆಯದೆ ಕುಟುಂಬದವರು ಹರಿದಾಸ್ ಹಾರ್ಟ್ ಆಸ್ಪತ್ರೆಯನ್ನು ಸಂಪರ್ಕಿಸಿದರು.

ಆಸ್ಪತ್ರೆಯ ಹಿರಿಯ ಹೃದಯ, ಶ್ವಾಸಕೋಶ ಮತ್ತು ರಕ್ತನಾಳ ಶಸ್ತ್ರಚಿಕಿತ್ಸಾ ತಜ್ಞ ಡಾ. ಅರುಣ್ ಕುಮಾರ್ ಹರಿದಾಸ್ ಅವರು ರೋಗಿಯ ಸ್ಥಿತಿಯನ್ನು ಪರಿಶೀಲಿಸಿ, ವೈದ್ಯಕೀಯ ತಂಡದೊಂದಿಗೆ ಚರ್ಚಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು. ಬೆಂಗಳೂರಿನಲ್ಲಿ ಅಂದಾಜಿಸಿದ್ದ ಚಿಕಿತ್ಸಾ ವೆಚ್ಚಕ್ಕೆ ಹೋಲಿಸಿದರೆ ಸುಮಾರು ಶೇ.25ರಷ್ಟು ವೆಚ್ಚದಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಎರಡು ಲೀಟರ್ ಕೀವು ಹೊರತೆಗೆದ ವೈದ್ಯರು

ಡಾ. ಅರುಣ್ ಕುಮಾರ್ ಹರಿದಾಸ್ ನೇತೃತ್ವದಲ್ಲಿ ನಾಲ್ವರು ತಜ್ಞ ವೈದ್ಯರ ತಂಡ ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸಿತು. ಎದೆಯ ಮಧ್ಯಭಾಗದ ಮೂಳೆಯನ್ನು ತೆರೆದು ಸೋಂಕಿತ ಭಾಗಗಳಿಗೆ ಪ್ರವೇಶ ಪಡೆಯುವ ಮಿಡಿಯನ್ ಸ್ಟರ್ನೋಟಮಿ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು.

ಎದೆಯ ಮಧ್ಯಭಾಗ, ಹೃದಯದ ಸುತ್ತ ಹಾಗೂ ಎರಡೂ ಶ್ವಾಸಕೋಶಗಳ ಸುತ್ತಲಿನ ಪೊರೆಗಳಲ್ಲಿ ಅಪಾರ ಪ್ರಮಾಣದ ಕೀವು ಸಂಗ್ರಹವಾಗಿರುವುದು ಕಂಡುಬಂದಿತು. ಸೋಂಕಿನಿಂದ ಹಾನಿಗೊಳಗಾಗಿದ್ದ ಸತ್ತ ಅಂಗಾಂಶಗಳನ್ನು ತೆಗೆದುಹಾಕಿ, ಸುಮಾರು ಎರಡು ಲೀಟರ್ ಕೀವನ್ನು ಹೊರತೆಗೆಯಲಾಯಿತು. ಶ್ವಾಸಕೋಶಗಳ ಮೇಲೆ ಅಂಟಿಕೊಂಡಿದ್ದ ಸೋಂಕಿತ ಪದರವನ್ನು ತೆಗೆದು ಅವು ಸಹಜವಾಗಿ ವಿಸ್ತರಿಸಲು ಲಂಗ್ ಡೆಕಾರ್ಟಿಕೇಶನ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಹೃದಯದ ಸುತ್ತಲಿನ ಪೆರಿಕಾರ್ಡಿಯಂ ಪೊರೆಯನ್ನು ತೆರೆದು ಅದರೊಳಗೆ ಸಂಗ್ರಹವಾಗಿದ್ದ ಸೋಂಕಿತ ದ್ರವ ಮತ್ತು ಕೀವನ್ನು ಹೊರಹಾಕಲಾಯಿತು.

12ನೇ ದಿನಕ್ಕೆ ಚೇತರಿಕೆ

ಶಸ್ತ್ರಚಿಕಿತ್ಸೆಯ ಬಳಿಕ ಎರಡು ದಿನಗಳ ಕಾಲ ರೋಗಿಗೆ ವೆಂಟಿಲೇಟರ್ ಸಹಾಯ ನೀಡಲಾಯಿತು. ನಂತರ ಆರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮತ್ತು ನಿರಂತರ ಮೇಲ್ವಿಚಾರಣೆ ನಡೆಸಲಾಯಿತು. ಇದೀಗ ಶಸ್ತ್ರಚಿಕಿತ್ಸೆಯ 12ನೇ ದಿನಕ್ಕೆ ರೋಗಿಯ ಆರೋಗ್ಯದಲ್ಲಿ ಗಣನೀಯ ಸುಧಾರಣೆಯಾಗಿದ್ದು, ಸ್ವತಃ ಆಹಾರ ಸೇವಿಸುತ್ತಿದ್ದಾರೆ ಹಾಗೂ ಯಾರ ಸಹಾಯವೂ ಇಲ್ಲದೆ ನಡೆಯುತ್ತಿದ್ದಾರೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ಮರಳುವ ನಿರೀಕ್ಷೆಯಿದೆ.

ರೋಗಿಯ ಮಗಳ ವಿವಾಹ ಮುಂದಿನ ತಿಂಗಳು ನಿಗದಿಯಾಗಿದ್ದು, ತಾಯಿ ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆಯೇ ಎಂಬ ಆತಂಕ ಕುಟುಂಬದವರನ್ನು ಕಾಡಿತ್ತು. ಇದೀಗ ತಾಯಿಯ ಆರೋಗ್ಯ ಸುಧಾರಿಸಿರುವುದರಿಂದ ಕುಟುಂಬದಲ್ಲಿ ಸಂತಸ ಮನೆಮಾಡಿದೆ.

ವೈದ್ಯಕೀಯ ತಂಡದ ಸಾಧನೆ

ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ಅರುಣ್ ಕುಮಾರ್ ಹರಿದಾಸ್ ನೇತೃತ್ವ ವಹಿಸಿದ್ದರು. ಡಾ. ಲಿಯಾಕತ್ ಅರಿವಳಿಕೆ ತಜ್ಞರಾಗಿ, ಡಾ. ಹರ್ಷ ದೇಶಪಾಂಡೆ ಹೃದಯ ಶಸ್ತ್ರಚಿಕಿತ್ಸಾ ತಜ್ಞರಾಗಿ ಹಾಗೂ ಡಾ. ಹರ್ಷಮೂರ್ತಿ ಶ್ವಾಸಕೋಶ ತಜ್ಞರಾಗಿ ಕಾರ್ಯನಿರ್ವಹಿಸಿದರು. ತೀವ್ರ ನಿಗಾ ಘಟಕದ ವೈದ್ಯರು, ದಾದಿಯರು, ತಂತ್ರಜ್ಞರು ಹಾಗೂ ಇತರ ಸಿಬ್ಬಂದಿಯ ಸಹಕಾರದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು.

ಈ ಪ್ರಕರಣವು ಉತ್ತರ ಕರ್ನಾಟಕದಲ್ಲಿಯೇ ಅತ್ಯಾಧುನಿಕ ಹೃದಯ, ಶ್ವಾಸಕೋಶ ಮತ್ತು ರಕ್ತನಾಳ ಶಸ್ತ್ರಚಿಕಿತ್ಸಾ ಸೌಲಭ್ಯಗಳ ಲಭ್ಯತೆಯ ಮಹತ್ವವನ್ನು ತೋರಿಸಿದೆ ಎಂದು ಆಸ್ಪತ್ರೆಯ ನಿರ್ದೇಶಕಿ ಕೋಮಲೇಶ್ವರಿ ಹರಿದಾಸ್ ತಿಳಿಸಿದ್ದಾರೆ.

ಸಂಕೀರ್ಣ ಕಾಯಿಲೆಗಳ ಚಿಕಿತ್ಸೆಗೆ ದೂರದ ಮಹಾನಗರಗಳಿಗೆ ತೆರಳುವ ಅನಿವಾರ್ಯತೆ ತಪ್ಪಿಸಿ, ಸ್ಥಳೀಯವಾಗಿಯೇ ಅನುಭವಿ ತಜ್ಞ ವೈದ್ಯರಿಂದ ಕೈಗೆಟುಕುವ ವೆಚ್ಚದಲ್ಲಿ ಅತ್ಯಾಧುನಿಕ ಚಿಕಿತ್ಸೆ ಒದಗಿಸುವುದು ಆಸ್ಪತ್ರೆಯ ಉದ್ದೇಶವಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಹಾಗೂ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಅರುಣ್ ಕುಮಾರ್ ಹರಿದಾಸ್ ತಿಳಿಸಿದ್ದಾರೆ.