ಸವದತ್ತಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸುಬ್ರಾವ್ ಆಯ್ಕೆ
ಸವದತ್ತಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸುಬ್ರಾವ್ ಆಯ್ಕೆ
ಕಲಬುರಗಿ : ಇಲ್ಲಿನ ಹಿರಿಯ ಸಾಹಿತಿ, ನಾಟಕಕಾರ, ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾಗಿರುವ ಸುಬ್ರಾವ ಕುಲಕರ್ಣಿ ಅವರು ಇದೇ ನ.21 ರಂದು ಜರುಗಲಿರುವ ಸವದತ್ತಿ ತಾಲೂಕು 9 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದ ಶ್ರೀಗುರುಮಠದ ಸಭಾಂಗಣದಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಲಬುರಗಿ ನಿವಾಸಿಯಾಗಿರುವ ಸುಬ್ರಾವ ಕುಲಕರ್ಣಿ ಅವರು ಆ ನೆಲದಲ್ಲಿ ಹುಟ್ಟಿಬೆಳೆದು, ವಿದ್ಯಾಭಾಸ ಮಾಡಿ, ಉದ್ಯೋಗ ನಿಮಿತ್ತ ಕಲಬುರಗಿಗೆ ಬಂದು ಇಲ್ಲೇ ನೆಲೆಸಿ, ಇಲ್ಲಿಯವರೇ ಆಗಿದ್ದರೂ ಅವರ ಸಾಹಿತ್ಯ ಕೃತಿಗಳಲ್ಲಿ ಬಾಲ್ಯಕಾಲದ ನೆನಪುಗಳು, ಹುಟ್ಟಿ ಬೆಳೆದ ಪರಿಸರವನ್ನು ಜೀವಂತವಾಗಿಟ್ಟಿದ್ದು, ಅವರ ಕಥಾ ನೈಪುಣ್ಯತೆಗೆ ಉದಾಹರಣೆಯಾಗಿದ್ದನ್ನು ಗಮನಿಸಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸವದತ್ತಿಯ ಸರ್ವ ಪದಾಧಿಕಾರಿಗಳು ಸುಬ್ರಾವ ಕುಲಕರ್ಣಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಸವದತ್ತಿ ತಾಲೂಕು ಕಸಾಪ ಅಧ್ಯಕ್ಷರಾದ ಡಾ.ವೈ.ಎಂ.ಯಾಕೊಳ್ಳಿ ಅವರು ತಿಳಿಸಿದ್ದಾರೆ.
ಆಯ್ಕೆಗೆ ಹರ್ಷ : ಹುಟ್ಟಿಬೆಳೆದ ಪರಿಸರದಿಂದ ಬಹಳ ದೂರದಲ್ಲಿ ಬದುಕುತ್ತಿದ್ದರೂ ಸಾಹಿತ್ಯ ಮಾತ್ರ ಯಾವತ್ತೂ ಬಾಲ್ಯಕಾಲವನ್ನು ಮರೆಯಲು ಬಿಡುವುದಿಲ್ಲ ಎನ್ನಲು ಸುಬ್ರಾವ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದೇ ಸಾಕ್ಷಿಯಾಗಿದೆ ಎಂದು ಹೆಸರಾಂತ ಪ್ರಕಾಶಕ ಮತ್ತು ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ.ಬಸವರಾಜ ಕೊನೇಕ, ನಿವೃತ್ತ ಅಭಿಯಂತರರಾದ ಪಾಂಡುರಂಗರಾವ ಮತ್ತು ಹಿರಿಯ ರಂಗಕರ್ಮಿ ಪ್ರಭಾಕರ ಜೋಶಿ ತಿಳಿಸಿದ್ದು, ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

