ಜಿಪಂ ಸಿಇಒ ಕೈಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಓಡಿಸಾ ಮೂಲದ ನಕಲಿ ವೈದ್ಯ
ಜಿಪಂ ಸಿಇಒ ಕೈಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಓಡಿಸಾ ಮೂಲದ ನಕಲಿ ವೈದ್ಯ!
" ಸಿಇಒ ನಡೆ ಗ್ರಾಮಗಳ ಕಡೆ " ಗ್ರಾಮಗಳ ಭೇಟಿ ಸಮಯದಲ್ಲಿ ಸಿಇಒ ಬಲೆಗೆ ಬಿದ ನಕಲಿ ವೈದ್ಯ.
ಭಾಲ್ಕಿ : ಗ್ರಾಮೀಣ ಭಾಗದ ಮುಗ್ಧ ಜನರ ಅನಾರೋಗ್ಯದ ಲಾಭ ಪಡೆದು, ಅವರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಕನಿಷ್ಠ ವಿದ್ಯಾಭ್ಯಾಸವು ಕೂಡ ಇಲ್ಲದ ಒಡಿಶಾ ಮೂಲದ ವಿಶ್ವಜೀತ ಎನ್ನುವ ನಕಲಿ ವೈದ್ಯನೊಬ್ಬನನ್ನು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ (ಕೆ) ಗ್ರಾಮದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ. ಬೀದರ್ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗಿತ್ತೆ ಮಾಧವ್ ವಿಠಲರಾವ್ ಅವರ ಸಮಯಪ್ರಜ್ಞೆ ಹಾಗೂ ದಿಟ್ಟ ಕ್ರಮದಿಂದಾಗಿ ದೊಡ್ಡದೊಂದು ನಕಲಿ ವೈದ್ಯರ ಜಾಲ ಬಯಲಿಗೆ ಬಂದಿದೆ.
ಆಡಳಿತವನ್ನು ಜನರ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ 'ಸಿಇಒ ನಡೆ ಗ್ರಾಮಗಳ ಕಡೆ' / ಬೆಳಗಿನ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದ ಅಂಗವಾಗಿ, ಸಿಇಒ ಗಿತ್ತೆ ಮಾಧವ್ ವಿಠಲರಾವ್ ಅವರು ಭಾಲ್ಕಿ ತಾಲೂಕಿನ ಬೀರಿ (ಕೆ) ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು, ನೈರ್ಮಲ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ರೋಗಿಗಳಿಗೆ ಚುಚ್ಚುಮದ್ದು ಹಾಗೂ ಮಾತ್ರೆಗಳನ್ನು ನೀಡುತ್ತಿರುವುದು ಅವರ ಕಣ್ಣಿಗೆ ಬಿದ್ದಿದೆ.
ಆತನ ಹಾವಭಾವ ಹಾಗೂ ಚಿಕಿತ್ಸಾ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದ ಸಿಇಒ ಅವರಿಗೆ ಆತನ ಬಗ್ಗೆ ಬಲವಾದ ಅನುಮಾನ ಕಾಡಿದೆ. ತಕ್ಷಣವೇ ಆತನ ಬಳಿ ತೆರಳಿದ ಸಿಇಒ, ವೈದ್ಯಕೀಯ ಪದವಿಯ ಪ್ರಮಾಣಪತ್ರ ಹಾಗೂ ಪರವಾನಗಿ ದಾಖಲೆಗಳನ್ನು ತೋರಿಸುವಂತೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಬ್ಬಿಬ್ಬಾಗಿದ್ದು, ಯಾವುದೇ ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲನಾಗಿದ್ದಾನೆ. ಪ್ರಾಥಮಿಕ ತನಿಖೆಯಲ್ಲೇ ಆತ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಮತ್ತು ಒಡಿಶಾ ರಾಜ್ಯದಿಂದ ಬಂದು 2019 ರಿಂದ ಇದೆ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಲ್ಲಿ ನಕಲಿ ವೈದ್ಯನಾಗಿ ಅವೈಜ್ಞಾನಿಕವಾಗಿ ಚಿಕಿತ್ಸೆ ನೀಡುತ್ತಿದ್ದಾನೆ ಮತ್ತು ಚಿಕಿತ್ಸೆ ವೆಚ್ಚ 50 ರೂ ಪಡೆಯುತ್ತಿದ್ದಾನೆ ಎಂಬ ಆಘಾತಕಾರಿ ಸತ್ಯ ಸಾಬೀತಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದ್ದಾರೆ.
*ಔಷಧಿ ಪೂರೈಕೆದಾರರ ವಿರುದ್ಧವೂ ಕಠಿಣ ಕ್ರಮಕ್ಕೆ ಸಿಇಒ ತಾಕೀತು:*
ನಕಲಿ ವೈದ್ಯನ ಬಣ್ಣ ಬಯಲಾಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ, ಕೇವಲ ಈತನ ಬಂಧನದಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಈ ಜಾಲದ ಬೇರನ್ನು ಕಿತ್ತೊಗೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. "ಯಾವುದೇ ಮೆಡಿಕಲ್ ಸರ್ಟಿಫಿಕೇಟ್ ಅಥವಾ ಪರವಾನಗಿ ಇಲ್ಲದ ಈ ನಕಲಿ ವೈದ್ಯನಿಗೆ ಭಾರಿ ಪ್ರಮಾಣದಲ್ಲಿ ಔಷಧಿಗಳನ್ನು ಪೂರೈಕೆ ಮಾಡಿದವರು ಯಾರು? ಎಂಬುದು ಮೊದಲು ಪತ್ತೆಯಾಗಬೇಕು.
ಈ ಕುರಿತು ಸಮಗ್ರ ತನಿಖೆ ನಡೆಸಿ, ಆತನಿಗೆ ಔಷಧಿ ಸರಬರಾಜು ಮಾಡಿದ ಮೆಡಿಕಲ್ ಏಜೆನ್ಸಿ, ಹೋಲ್ ಸೇಲರ್ಸ್ ಅಥವಾ ವ್ಯಕ್ತಿಗಳ ಪತ್ತೆ ಹಚ್ಚಿ ಅವರ ವಿರುದ್ಧವೂ ಕಾನೂನು ರೀತಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು" ಜಿಲ್ಲಾ ಮತ್ತು ತಾಲೂಕಿನ ಅತ್ಯಂತ ಹಲೋ ಗ್ರಾಮಗಳಲ್ಲಿ ಈ ತರದ ನಕಲಿ ವೈದ್ಯರ ಜಾಲ ಹೆಚ್ಚಾಗಿದ್ದು, ಚಿಕಿತ್ಸೆ ನೆಪದಲ್ಲಿ ಹಣ ಸುಲಿಗೆ ಮಾಡುವುದರ ಜೊತೆಗೆ ಜನರ ಜೀವನ ಜೊತೆ ಆಟ ಆಡುತ್ತಿದ್ದಾರೆ. ಗ್ರಾಮಸ್ಥರಲ್ಲಿ ನಕಲಿ ವೈದ್ಯರ ಕುರಿತು ಜಾಗೃತಿ ಮೂಡಿಸಬೇಕು. ಹಾಗೂ ನಕಲಿ ವೈದ್ಯರು ಕಂಡುಬಂದಲ್ಲಿ ತಕ್ಷಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆಯ ಲಾಭ ಪಡೆದುಕೊಳ್ಳುವ ಇಂತಹ ನಕಲಿ ವೈದ್ಯರು, ಯಾವುದೇ ಅರಿವಿಲ್ಲದೆ ಹೈ-ಡೋಸ್ ಆಂಟಿಬಯೋಟಿಕ್ಸ್ ನೀಡಿ ಜನರ ಆರೋಗ್ಯವನ್ನು ಶಾಶ್ವತವಾಗಿ ಹಾಳುಮಾಡುತ್ತಿದ್ದಾರೆ. ಜಿಲ್ಲಾಧ್ಯಂತ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಇಂತಹ ನಕಲಿ ವೈದ್ಯರ ಹಾವಳಿಯನ್ನು ಸಂಪೂರ್ಣವಾಗಿ ಮಟ್ಟಹಾಕಬೇಕೆಂದು ಗ್ರಾಮಸ್ಥರು ಸಿಇಒ ಅವರಿಗೆ ಒತ್ತಾಯಿಸಿದರು.
ಬರುವ ಕೆಲವೇ ದಿನಗಳಲ್ಲಿ ನಕಲಿ ವೈದ್ಯರ ಜಾಲಕ್ಕೆ ಹೆಡೆಮುರಿ ಕಟ್ಟಲು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ಜಿಲ್ಲೆಯಲ್ಲಿ ನೆಲೆಸಿರುವ ಬಹುತೇಕ ನಕಲಿ ವೈದ್ಯರುಗಳ ಪಟ್ಟಿ ಸಿದ್ಧಪಡಿಸಿ ಕಾನೂನಿನ ಚೌಕಟ್ಟಿನಲ್ಲಿ ಕಠಿಣವಾದ ಶಿಕ್ಷೆ ಕುರಿ ಪಡಿಸಲು ಯೋಜನೆ ಮಾಡಿಕೊಳ್ಳಲಾಗಿದೆ. ಹಾಗೂ ಎಲ್ಲಾ ತಾಲೂಕಿನ, ತಾಲೂಕು ವೈದ್ಯಾಧಿಕಾರಿಗಳಿಗೆ ನಕಲಿ ವೈದ್ಯರ ಮೇಲೆ ನಿಗಾ ಇಡಲು ಸೂಚನೆ ಹೊರಡಿಸಲಾಗುವುದೆಂದು ಸಿಇಒ ರವರು ಹೇಳಿದರು.

