ಶಿಕ್ಷಕರ ಕ್ಷೇತ್ರದ ನೈಜ ಸಮಸ್ಯೆಗಳು ಚುನಾವಣಾ ಚರ್ಚೆಯಿಂದ ಹೊರಗೆ
ಶಿಕ್ಷಕರ ಕ್ಷೇತ್ರದ ನೈಜ ಸಮಸ್ಯೆಗಳು ಚುನಾವಣಾ ಚರ್ಚೆಯಿಂದ ಹೊರಗೆ
ಕಲಬುರಗಿ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಕ್ಷೇತ್ರದ ನೈಜ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ ಎಂದು ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಾಗೂ ನ್ಯಾಯವಾದಿ ವಿನೋದಕುಮಾರ ಜೆನವೇರಿ ಆರೋಪಿಸಿದ್ದಾರೆ.
ಅನುಚ್ಛೇದ 171(3)(C)ರ ಪ್ರಸ್ತುತ ನಿಯಮಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರು, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಶಿಕ್ಷಕರ ತರಬೇತಿ ಪಡೆದವರು ಹಾಗೂ ನೇಮಕಾತಿ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳು ಶಿಕ್ಷಕರ ಕ್ಷೇತ್ರದ ಮತದಾನದ ಹಕ್ಕಿನಿಂದ ಹೊರಗುಳಿದಿದ್ದಾರೆ. ಇದರಿಂದ ಶಿಕ್ಷಣ ಕ್ಷೇತ್ರದ ಬಹುಸಂಖ್ಯಾತರ ಸಮಸ್ಯೆಗಳು ಚುನಾವಣಾ ಚರ್ಚೆಗೆ ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಬಿಎಡ್ ಹಾಗೂ ಇತರೆ ಶಿಕ್ಷಕರ ತರಬೇತಿ ಪಡೆದ ನಿರುದ್ಯೋಗಿಗಳ ನೇಮಕಾತಿ ವಿಳಂಬ, ಖಾಲಿ ಹುದ್ದೆಗಳ ಭರ್ತಿ, ವಯೋಮಿತಿ, ನೇಮಕಾತಿ ಅಕ್ರಮಗಳು ಹಾಗೂ ಕೆಪಿಎಸ್‌ಸಿ ಹಗರಣಗಳಂತಹ ಸಮಸ್ಯೆಗಳಿಗೆ ಇನ್ನೂ ಸಮರ್ಪಕ ಪರಿಹಾರ ದೊರೆತಿಲ್ಲ. ಈ ಸಮಸ್ಯೆಗಳು ಚುನಾವಣೆಯ ಪ್ರಮುಖ ವಿಚಾರಗಳಾಗಬೇಕು ಎಂದು ಒತ್ತಾಯಿಸಿದ್ದಾರೆ.
ಅನುಚ್ಛೇದ 171(3)(B) ಮತ್ತು (C)ಕ್ಕೆ ಸೂಕ್ತ ತಿದ್ದುಪಡಿ ಮಾಡಿ, ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂತೆ ಅರ್ಹ ಎಲ್ಲ ಶಿಕ್ಷಕ ವರ್ಗಗಳಿಗೆ ಮತದಾನದ ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ನೈಜ ಸಮಸ್ಯೆಗಳು ಮುಂದೆಯೂ ನಿರ್ಲಕ್ಷ್ಯಕ್ಕೊಳಗಾಗುತ್ತವೆ ಎಂದು ವಿನೋದಕುಮಾರ ಜೆನವೇರಿ ತಿಳಿಸಿದ್ದಾರೆ.

