ಮುಂಗಾರು ಮಳೆ ಕೈಕೊಟ್ಟ ರೈತರಿಗೆ ಎಕರೆಗೆ ₹20 ಸಾವಿರ ಪರಿಹಾರ ನೀಡಲು ಆಗ್ರಹ
ಮುಂಗಾರು ಮಳೆ ಕೈಕೊಟ್ಟ ರೈತರಿಗೆ ಎಕರೆಗೆ ₹20 ಸಾವಿರ ಪರಿಹಾರ ನೀಡಲು ಆಗ್ರಹ
ಬಸವಕಲ್ಯಾಣ: ಬೀದರ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಸಮರ್ಪಕವಾಗಿ ಆಗದೆ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಜೆಡಿಎಸ್ ಪಕ್ಷದ ನಗರ ಘಟಕದ ಅಧ್ಯಕ್ಷರಾದ ಡಾ. ಜಯಾವುದ್ದೀನ್ ನೀಲಂಗೆಕರ್ ಹಾಗೂ ಧನರಾಜ ಡಿ. ರಾಜೋಳೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೀದರ ಜಿಲ್ಲೆಯ ಬಸವಕಲ್ಯಾಣ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಬಿತ್ತನೆ, ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಿ ಬೆಳೆ ಬೆಳೆದ ರೈತರಿಗೆ ಮಳೆಯ ಅಭಾವದಿಂದ ನಿರೀಕ್ಷಿತ ಇಳುವರಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ರೈತರು ಈಗಾಗಲೇ ಕೃಷಿಗಾಗಿ ಸಾಲ ಮಾಡಿಕೊಂಡಿದ್ದು, ಬೆಳೆ ಹಾನಿಯಿಂದ ಸಾಲ ಮರುಪಾವತಿ ಮಾಡುವುದೂ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವರು ಬೀದರ ಜಿಲ್ಲೆಯ ರೈತರ ಪರಿಸ್ಥಿತಿಯನ್ನು ಪರಿಶೀಲಿಸಿ, ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಕನಿಷ್ಠ ಪ್ರತಿ ಎಕರೆಗೆ ₹20 ಸಾವಿರ ಪರಿಹಾರ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೆ, ಬೆಳೆ ಹಾನಿಯ ಕುರಿತು ತಕ್ಷಣವೇ ಸಮಗ್ರ ಸಮೀಕ್ಷೆ ನಡೆಸಿ, ಅರ್ಹ ರೈತರ ಖಾತೆಗಳಿಗೆ ಯಾವುದೇ ವಿಳಂಬವಿಲ್ಲದೆ ಪರಿಹಾರ ಹಣ ಜಮಾ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರೈತರ ಸಂಕಷ್ಟದ ಸಮಯದಲ್ಲಿ ಸರ್ಕಾರ ಅವರ ಬೆಂಬಲಕ್ಕೆ ನಿಲ್ಲಬೇಕು. ಕೃಷಿಯನ್ನೇ ನಂಬಿಕೊಂಡಿರುವ ರೈತರ ಬದುಕನ್ನು ರಕ್ಷಿಸಲು ವಿಶೇಷ ಪ್ಯಾಕೇಜ್ ಘೋಷಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಮಳೆ ಕೊರತೆ ಎದುರಾದಾಗ ರೈತರಿಗೆ ತ್ವರಿತವಾಗಿ ಪರಿಹಾರ ದೊರೆಯುವಂತಹ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ಡಾ. ಜಯಾವುದ್ದೀನ್ ನೀಲಂಗೆಕರ್ ಹಾಗೂ ಧನರಾಜ ಡಿ. ರಾಜೋಳೆ ಒತ್ತಾಯಿಸಿದ್ದಾರೆ.
ಧನರಾಜ ಡಿ. ರಾಜೋಳೆಬಸವಕಲ್ಯಾಣ

