ಶಿವಾನುಭವ ಪತ್ರಿಕೆಯ ಶತಮಾನೋತ್ಸವ: ಹಳಕಟ್ಟಿಯವರ ಸಾಹಿತ್ಯ ಸೇವೆ ಸ್ಮರಣೆ
ಶಿವಾನುಭವ ಪತ್ರಿಕೆಯ ಶತಮಾನೋತ್ಸವ: ಹಳಕಟ್ಟಿಯವರ ಸಾಹಿತ್ಯ ಸೇವೆ ಸ್ಮರಣೆ
ಬಸವಕಲ್ಯಾಣ: ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಸಂಪಾದಕತ್ವದ ಶಿವಾನುಭವ ಪತ್ರಿಕೆಯ ಶತಮಾನೋತ್ಸವದ ಅಂಗವಾಗಿ ಗ್ರಂಥ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೆ ಮಾತನಾಡಿ, ಡಾ. ಫ.ಗು. ಹಳಕಟ್ಟಿಯವರು ವಕೀಲರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸುಮಾರು 35 ವರ್ಷಗಳ ಕಾಲ ಶಿವಾನುಭವ ಪತ್ರಿಕೆಯನ್ನು ಮುನ್ನಡೆಸಿದ ಮಹತ್ವದ ವ್ಯಕ್ತಿಯಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅನುಭವ ಮಂಟಪದ ಅಧ್ಯಕ್ಷ ಪರಮಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಹಳಕಟ್ಟಿಯವರ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯನ್ನು ವಿವರಿಸಿದರು. ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಪೂಜ್ಯ ಶಿವಾನಂದ ಸ್ವಾಮೀಜಿ, ಹುಣಸೂರು, ಮಾತನಾಡಿ, ಫ.ಗು. ಹಳಕಟ್ಟಿಯವರು ದೀನದಲಿತರು ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಮಾಜದ ದುರ್ಬಲ ವರ್ಗಗಳ ಏಳಿಗೆಗಾಗಿ ಹಲವು ರೀತಿಯ ಕಾರ್ಯಗಳನ್ನು ಮಾಡಿದ್ದರು ಎಂದು ಹೇಳಿದರು.
ಸಮಾರೋಪ ನುಡಿಯಲ್ಲಿ ಸಂಸ್ಕೃತಿ ಚಿಂತಕ ಶರಣ ಡಾ. ಬಸವರಾಜ ಕಲ್ಗುಡಿ, ಬೆಂಗಳೂರು, ಮಾತನಾಡಿ, ಬಸವಣ್ಣನವರ ವಚನಗಳನ್ನು ಹುಡುಕಿ, ಸಂಗ್ರಹಿಸಿ, ಗ್ರಂಥ ರೂಪದಲ್ಲಿ ಪ್ರಕಟಿಸುವ ಮಹತ್ವದ ಕಾರ್ಯವನ್ನು ಹಳಕಟ್ಟಿಯವರು ಕೈಗೊಂಡಿದ್ದರು. ಅವರ ಪರಿಶ್ರಮದಿಂದಾಗಿ ವಚನ ಸಾಹಿತ್ಯದ ಅಮೂಲ್ಯ ಸಂಪತ್ತು ಇಂದಿನ ಪೀಳಿಗೆಗೆ ಲಭ್ಯವಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಸೋಮನಾಥ ಯಾಳವರ್, ಹುಮ್ನಾಬಾದ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರೂಪಣ್ಣ ಕಲ್ಲೂರ, ಕಾರ್ಯದರ್ಶಿ ಸಂತೋಷ್ ಹಾನಗಲ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಚಾರ ಸಂಕಿರಣದ ಮೂಲಕ ಹಳಕಟ್ಟಿಯವರ ಸಾಹಿತ್ಯ, ಸಾಮಾಜಿಕ ಹಾಗೂ ವಚನ ಸಂರಕ್ಷಣಾ ಸೇವೆಯನ್ನು ಸ್ಮರಿಸಲಾಯಿತು.

