ಮ್ಯಾರಥಾನ್‌ನಲ್ಲಿ ಎಂ.ಎಸ್. ಇರಾಣಿ ಕಾಲೇಜಿಗೆ ಡಬಲ್ ಸಂಭ್ರಮ: ಅಂಬಿಕಾಗೆ ಚಿನ್ನದ ಓಟ, ಇಮ್ರಾನ್‌ಗೆ ಮೂರನೇ ಸ್ಥಾನ
ಮ್ಯಾರಥಾನ್‌ನಲ್ಲಿ ಎಂ.ಎಸ್. ಇರಾಣಿ ಕಾಲೇಜಿಗೆ ಡಬಲ್ ಸಂಭ್ರಮ: ಅಂಬಿಕಾಗೆ ಚಿನ್ನದ ಓಟ, ಇಮ್ರಾನ್‌ಗೆ ಮೂರನೇ ಸ್ಥಾನ
ಕಲಬುರಗಿ, ಸೆ. 30: ಜಿಲ್ಲಾ ಪಂಚಾಯತ್, ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಎನ್‌ಎಸ್‌ಎಸ್ ಘಟಕ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಸೆ.29ರಂದು ಬೆಳಿಗ್ಗೆ ಜಿಲ್ಲಾ ಮಟ್ಟದ ಅಂತರಮಹಾವಿದ್ಯಾಲಯಗಳ 5 ಕಿ.ಮೀ. ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗಿತ್ತು.
ಎಚ್‌ಐವಿ/ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಮ್ಯಾರಥಾನ್‌ನಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಮಹಾವಿದ್ಯಾಲಯದ ಬಿ.ಕಾಂ ವಿದ್ಯಾರ್ಥಿನಿ ಅಂಬಿಕಾ ಕೆ. ಅವರು 5 ಕಿ.ಮೀ. ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಪಡೆದು ₹5,000 ನಗದು ಬಹುಮಾನ ಗಳಿಸುವುದರೊಂದಿಗೆ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇದೇ ಸ್ಪರ್ಧೆಯಲ್ಲಿ ಬಿ.ಎ. ವಿದ್ಯಾರ್ಥಿ ಇಮ್ರಾನ್ ಅವರು ತೃತೀಯ ಸ್ಥಾನ ಪಡೆದು ₹2,000 ನಗದು ಬಹುಮಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ. ಕೈಲಾಸ ಪಾಟೀಲ್, ಕಾಲೇಜಿನ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ನಾಗಣ್ಣ ಘಂಟಿ, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ರಾಜಶೇಖರ್ ವಿ. ಬೀರನಳ್ಳಿ, ಕ್ರೀಡಾ ನಿರ್ದೇಶಕರಾದ ಡಾ. ಶಂಕ್ರಪ್ಪ ಕಲಬುರ್ಗಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ ವರ್ಗಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅಂಬಿಕಾ ಕೆ. ಅವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಲಿ ಎಂದು ಕಾಲೇಜಿನ ವತಿಯಿಂದ ಶುಭ ಹಾರೈಸಲಾಗಿದೆ.

