ನವದೆಹಲಿಯಲ್ಲಿ ಅದ್ಧೂರಿಯಾಗಿ ಜರುಗಿದ “ಕಲ್ಯಾಣ ಕರ್ನಾಟಕ ಉತ್ಸವ–2026”
ನವದೆಹಲಿಯಲ್ಲಿ ಅದ್ಧೂರಿಯಾಗಿ ಜರುಗಿದ “ಕಲ್ಯಾಣ ಕರ್ನಾಟಕ ಉತ್ಸವ–2026”
ನವದೆಹಲಿಯಲ್ಲಿರುವ ಕಲ್ಯಾಣ ಕರ್ನಾಟಕದ ಕನ್ನಡಿಗರ ಸಾಂಸ್ಕೃತಿಕ ಸಮ್ಮಿಲನಕ್ಕೆ ವೇದಿಕೆಯಾದ ಉತ್ಸವ
ನವದೆಹಲಿ, 27 ಸೆಪ್ಟೆಂಬರ್ 2026: ಕಲ್ಯಾಣ ಕರ್ನಾಟಕದ ಶ್ರೀಮಂತ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪರಿಚಯಿಸುವ ಉದ್ದೇಶದಿಂದ ಕಲ್ಯಾಣ ಕನ್ನಡಿಗರ ಸಾಂಸ್ಕೃತಿಕ ಟ್ರಸ್ಟ್ (ರಿ.), ನವದೆಹಲಿ, ದೆಹಲಿ ಕರ್ನಾಟಕ ಸಂಘದ ಸಹಯೋಗದಲ್ಲಿ “ಕಲ್ಯಾಣ ಕರ್ನಾಟಕ ಉತ್ಸವ–2026”ವನ್ನು ಸೆಪ್ಟೆಂಬರ್ 27ರಂದು ದೆಹಲಿ ಆರ್ ಕೆ ಪುರಂ ನಲ್ಲಿ ಇರುವ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ, ಅದ್ಧೂರಿಯಾಗಿ ಆಯೋಜಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಶ್ರೀ ಬಸವರಾಜ ದೇಸಳ್ಳಿ ಭಾಗವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ, ಜನಪದ ಪರಂಪರೆ ಮತ್ತು ಕಲಾ ವೈಭವದ ಕುರಿತು ವಿವರಿಸಿದರು. ಈ ಪ್ರದೇಶದ ಸಾಂಸ್ಕೃತಿಕ ಕೊಡುಗೆ ಕರ್ನಾಟಕದ ಒಟ್ಟಾರೆ ಸಾಂಸ್ಕೃತಿಕ ಪರಂಪರೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ಅವರು ಹೇಳಿದರು.
ಗೌರವ ಅತಿಥಿಯಾಗಿ ಎನ್‌ಸಿಐಎಸ್‌ಎಂನ ಬೋರ್ಡ್ ಆಫ್ ಆಯುರ್ವೇದ ಅಧ್ಯಕ್ಷರಾದ ಡಾ. ಅಲ್ಲಮಪ್ರಭು ಗುಡ್ಡ ಮಾತನಾಡಿ, ಒಂದು ಕಾಲದಲ್ಲಿ ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಕಲ್ಯಾಣ ಕರ್ನಾಟಕ ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸುತ್ತಿದ್ದು, ಕ್ರಮೇಣ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳುತ್ತಿರುವುದನ್ನು ವಿವರಿಸಿದರು. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಈ ಪ್ರದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆಗಳ ಕುರಿತು ಅವರು ಮಾತನಾಡಿದರು.
ಕಲ್ಯಾಣ ಕನ್ನಡಿಗರ ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷರು ಮಾತನಾಡಿ, ಹಿಂದಿನ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಹಿನ್ನೆಲೆ, ಅದರ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆ ಹಾಗೂ ನಂತರ “ಕಲ್ಯಾಣ ಕರ್ನಾಟಕ” ಎಂದು ಮರುನಾಮಕರಣಗೊಂಡ ಹಿನ್ನೆಲೆಯನ್ನು ವಿವರಿಸಿದರು. ಕಲ್ಯಾಣ ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿಯನ್ನು ದೇಶದ ವಿವಿಧ ಭಾಗಗಳಲ್ಲಿ ಪರಿಚಯಿಸುವುದು ಹಾಗೂ ದೆಹಲಿ-ಎನ್‌ಸಿಆರ್‌ನಲ್ಲಿರುವ ಕಲ್ಯಾಣ ಕರ್ನಾಟಕದ ಕನ್ನಡಿಗರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ಟ್ರಸ್ಟ್‌ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಆರ್. ರೇಣುಕುಮಾರ್ ಮಾತನಾಡಿ, ದೆಹಲಿ-ಎನ್‌ಸಿಆರ್‌ನಲ್ಲಿ ನೆಲೆಸಿರುವ ಕಲ್ಯಾಣ ಕರ್ನಾಟಕದ ಕನ್ನಡಿಗರಿಗೆ ದೆಹಲಿ ಕರ್ನಾಟಕ ಸಂಘದಿಂದ ಅಗತ್ಯ ಸಹಕಾರ ಮತ್ತು ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು. ದೆಹಲಿಯ ಕನ್ನಡಿಗರಿಗಾಗಿ ಕಲ್ಯಾಣ ಕರ್ನಾಟಕದ ಜನರು ನೀಡುತ್ತಿರುವ ಸಹಕಾರಕ್ಕೆ ಪ್ರತಿಯಾಗಿ ಸಂಘವೂ ಸದಾ ಅವರೊಂದಿಗೆ ನಿಲ್ಲಲಿದೆ ಎಂದು ಹೇಳಿದರು.
“ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ–2026” ಪ್ರದಾನ
ಕಾರ್ಯಕ್ರಮದ ಅಂಗವಾಗಿ ಕಲ್ಯಾಣ ಕರ್ನಾಟಕದ ಶಿಕ್ಷಣ, ಸಮಾಜ ಮತ್ತು ಸಾರ್ವಜನಿಕ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ “ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ–2026” ಅನ್ನು
ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪಾ, ಅಧ್ಯಕ್ಷರು, ವಿದ್ಯಾವರ್ಧಕ ಸಂಘ, ಕಲಬುರಗಿ ಹಾಗೂ
ಡಾ. ಗುರುಲಿಂಗಪ್ಪ ಎಂ. ಪಾಟೀಲ್, ವಿಶ್ರಾಂತ ಸಹ -ಕುಲಪತಿ, ದೆಹಲಿ-ಎನ್‌ಸಿಆರ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆರುಗು ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೆಹಲಿ-ಎನ್‌ಸಿಆರ್‌ನ ಸ್ಥಳೀಯ ಕನ್ನಡ ಕಲಾವಿದರು ವಿವಿಧ ಜಾನಪದ, ಶಾಸ್ತ್ರೀಯ ಮತ್ತು ಭಕ್ತಿ ಪ್ರಧಾನ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಖ್ಯಾತ ಹಾಸ್ಯ ಕಲಾವಿದ ಡಾ. ಬೆಣ್ಣಿ ಬಸವರಾಜ್ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಕನ್ನಡ ಸರಿಗಮಪ ಫೈನಲಿಸ್ಟ್ ಗಾಯಕಿ ಕು. ಭೂಮಿಕಾ ಗಡಾದ್ ತಮ್ಮ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಿ, ಹಲವರನ್ನು ಹೆಜ್ಜೆ ಹಾಕುವಂತೆ ಮಾಡಿದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಜನಪದ ಸೊಗಡು, ಭಕ್ತಿ ಪರಂಪರೆ ಮತ್ತು ಕನ್ನಡ ಸಂಸ್ಕೃತಿಯ ವೈವಿಧ್ಯಮಯ ಮುಖಗಳು ಅನಾವರಣಗೊಂಡವು.
ಕಾರ್ಯಕ್ರಮದ ಆರಂಭದಲ್ಲಿ ಕಲ್ಯಾಣ ಕನ್ನಡಿಗರ ಸಾಂಸ್ಕೃತಿಕ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ರಾಜಕುಮಾರ್ ನೀಲೂರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಕಾಶಿನಾಥ್ ಬಿರಾದಾರ್ ಹಾಗೂ ಶ್ರೀ ಪ್ರಭಾಕರ್ ಮಡ್ಡಿತೋಟ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಶ್ರೀ ರಾಧಾಕೃಷ್ಣ ಅವರು ವಂದನಾರ್ಪಣೆ ಸಲ್ಲಿಸಿದರು.
ಕಲ್ಯಾಣ ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಸಾಧನೆಗಳನ್ನು ದೆಹಲಿ-ಎನ್‌ಸಿಆರ್‌ನ ಇಂದಿನ ಪೀಳಿಗೆಗೆ ಪರಿಚಯಿಸುವುದರೊಂದಿಗೆ, ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರ ನಡುವೆ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ “ಕಲ್ಯಾಣ ಕರ್ನಾಟಕ ಉತ್ಸವ–2026” ಮಹತ್ವದ ವೇದಿಕೆಯಾಯಿತು.

