ವಿವೇಚನೆಗೆ ಹಚ್ಚುವ ವಿವೇಚನೆ ಮಾರ್ಗ

ವಿವೇಚನೆಗೆ ಹಚ್ಚುವ ವಿವೇಚನೆ ಮಾರ್ಗ

ವಿವೇಚನೆಗೆ ಹಚ್ಚುವ ವಿವೇಚನೆ ಮಾರ್ಗ

ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಪರ, ಮಾನವೀಯ ಮೌಲ್ಯ, ಅನುಭವದ ಅಮೃತಗಳೊಂದಿಗೆ ತಮ್ಮ ಯಶಸ್ವಿಯಾದ ಸೇವೆಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು ಹದಿನೈದು ವರ್ಷಗಳಿಂದ ಭೋಧನೆ ಮಾಡುತ್ತಾ ಬರುತ್ತಿರುವ ಡಾ. ಬಸವರಾಜ ಮಠಪತಿ ಅವರು ಸೃಜನಶೀಲ, ಪ್ರತಿಭಾವಂತ ಪ್ರಾಧ್ಯಾಪಕರಾಗಿ, ಆಡಳಿತಾಧಿಕಾರಿಯಾಗಿ, ಪ್ರಾಶುಂಪಾಲರಾಗಿ ನಮ್ಮ ನಡುವಿನ ಆದರ್ಶಮಯ ಬದುಕಿನ ಕೈದೀವಿಗೆಯಾಗಿದ್ದಾರೆ. ಅಷ್ಟೆ ಅಲ್ಲದೆ ಹಲವು ಕಾರ್ಯಗಳ ಒತ್ತಡದ ನಡುವೆ ಸಾಹಿತ್ಯ ಸಾರಸ್ವತ ಲೋಕಕ್ಕೆ ಎರಡು ಕೃತಿಗಳನ್ನು ನೀಡಿದ್ದಾರೆ.

ಡಾ. ಬಸವರಾಜ ಮಠಪತಿ ಅವರು ರಚಿಸಿದ “ವಿವೇಚನೆ ಮಾರ್ಗ” ಇದು ಅವರ ಎರಡನೇ ಕೃತಿ. ಈ ಕೃತಿಯಲ್ಲಿ ಹದಿನಾಲ್ಕು ಲೇಖನಗಳಿದ್ದು, ಅವುಗಳಲ್ಲಿ ಏಳು ಲೇಖನಗಳು ಬಸವಾದಿ ಶರಣರ ವಚನಗಳ ಹಿನ್ನೆಲೆಯಲ್ಲಿ ಮೂಡಿ ಬಂದಿದ್ದರೆ, ಇನ್ನೂ ಕೆಲವು ಲೇಖನಗಳು ಆಯಾ ಸಂದರ್ಭಕ್ಕನುಸರಿಸಿ ಮೂಡಿಬಂದ ಲೇಖನಗಳು ಇಲ್ಲಿರುವುದರಿಂದ ಕೃತಿಯ ಏಕತಾನತೇ ಕಾಯ್ದುಕೊಂಡು ಬರುವುದರಲ್ಲಿ ಏರಿಳಿತ ಕಾಣಬಹುದು. ಆದರೇ ಸರಳತೆ, ಸಾತ್ವಿಕತೆಗೆ ಒತ್ತು ಕೊಟ್ಟು ಬರೆದಿರುವುದರಿಂದ ವಿಷಯಾಂತರ ಏನಿಸಲಾರದು 'ವಿವೇಚನೆ ಮಾರ್ಗ' ಪುಸ್ತಕ ಓದುಗರ ಗಮನವನ್ನು ಸೆಳೆದುಕೊಂಡು, ಓದಿಸಿಕೊಂಡು ಹೋಗುತ್ತದೆ. ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ಮೂಡಿಬಂದ ಲೇಖನಗಳು ಓದುಗನನ್ನು ವೈಚಾರಿಕ, ವೈಜ್ಞಾನಿಕ ವಿವೇಚನೆಗೆ ಒಳಪಡಿಸುತ್ತವೆ.

| "ಶರಣರು ಮತ್ತು ಅಸಂಗ್ರಹ", "ಶರಣರ ದೃಷ್ಟಿಯಲ್ಲಿ ಸ್ವಯಂ ಉದ್ಯೋಗ ಹಾಗೂ ತೆರಿಗೆ" ಲೇಖನಗಳಲ್ಲಿ ಕೂಡಿಡುವ ಪದ್ದತಿಗೆ “ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯ” ಎಂದು ಎಳೆದ ಬರೆ ಮಾನವನ ಹೃದಯ ಪಟಲದಲ್ಲಿ ಕೊರೆದ ಗೆರೆ' ಗಳಂತಿದ್ದರೆ ಸಂಗ್ರಹ ಪ್ರವೃತ್ತಿ ಎಂದಿಗೀಂತಲೂ ಇಂದು ಹೆಚ್ಚಾಗಿದ್ದುದು ಕಂಡು ಬರುತ್ತದೆ. ಮಾನವ ಹಣ, ಹಣ ಎಂದು ಹಣದ ದಾಹ ಹಿಂಗಿಲ್ಲ. ಮಾನವ ತಾನು ದುಡಿದು ಗಳಿಸಿದ ಹಣಕ್ಕೆ ಕಟ್ಟಬೇಕಾದ ತೆರಿಗೆಯ ಮಹತ್ವವನ್ನೇ ಮರೆತಿದ್ದಾನೆ. ಶರಣ ಸುಂಕದ ಬಂಕಣ್ಣ ಹೇಳುವ ಮಾತಿನಲ್ಲಿ ಅಡಗಿದ ಸೂಕ್ಷ್ಮತೆ ಬಹಳ ಜನರಿಗೆ ಗೊತ್ತೇ ಇಲ್ಲ. “ಆತ್ಮ ಶೂದ್ದೀಕರಣಕ್ಕೆ ಪರಮಾತ್ಮನಿಗೆ ಭಕ್ತಿಯೆಂಬ "ಸುಂಕ” ನೀಡುವ ಅರಿವು ಯಾರಲ್ಲಿದೆ?ಇಂದು ಭಾರತದಲ್ಲಿ ಅನೇಕ ಜನರು ತೆರಿಗೆ ಕಟ್ಟುವಲ್ಲಿ ತಪ್ಪಿಸಿಕೊಳ್ಳುವಲ್ಲಿ ಪ್ರಯತ್ನಿಸುತ್ತಾರೆ. ಅದು ದೊಡ್ಡ ದೊಡ್ಡ ಜನರೆ ಅಡ್ಡದಾರಿ ತುಳಿದು ದೊಡ್ಡ ತಪ್ಪು ಮಾಡಿ ಸಂಕಟಕ್ಕೆ ಗುರಿಯಾಗುತ್ತಾರೆ. ಇಂತಹ ಜನರ ಕಣ್ಣು ತೆರೆಸಲು ನಮ್ಮ ಶರಣರು ಹಿಂದೆ ಬಿದ್ದಿಲ್ಲ. "ಭಾಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು" ಬಸವಣ್ಣನವರೇ ಹೇಳುತ್ತಾರೆ. ಈ ಮೊದಲು ದೇವರ ದಾಸಿಮಯ್ಯನವರು ತಮ್ಮ ವಚನದಲ್ಲಿ ಉದಾಹರಣೆಯೊಂದಿಗೆ ಹೇಳಿದ್ದು ಓದಿದವರೆಲ್ಲ ಮರೆತು ಬಿಟ್ಟದ್ದು ನಾವು ನಿತ್ಯ ನೋಡುತ್ತೇವೆ. ಇದೇ ಅಕ್ಷಮ್ಯ ಅಪರಾಧ. ಅಂತಹ ಅಪರಾಧವಾಗಬಾರದೆಂದು ಡಾ. ಬಸವರಾಜ ಮಠಪತಿ ಅವರ ಸಂಪಾದಿಸಿದ ಹಣಕ್ಕೆ ಕಟ್ಟಬೇಕಾದ ತೆರಿಗೆಯ ಮಹತ್ವ” ಲೇಖನ ಪ್ರಸ್ತುತವೆನಿಸುತ್ತದೆ.

ಮಹಾಗಾಂವ ಕಳ್ಳಿಮಠದ ಲಿಂಗೈಕ್ಯ ಗುರುಲಿಂಗ ಶಿವಾಚಾರ್ಯರು ರಚಿಸಿದ "ಸೂಕ್ತಿ ಸುಧೆಯಲ್ಲಿ ಮುಕ್ತಿಯ ಧೋರಣೆ", "ಹಸಿರು ಹಸಿವು" ಒಂದು ಅವಲೋಕನ, ಕಲಬುರ್ಗಿ ತಾಲೂಕಿನ ಪ್ರಕಾಶಕರು, ಪರಿಸರದ ಅಧ್ಯಯನ- ಸೂಕ್ಷ್ಮ ದೃಷ್ಟಿಕೋನ, ಸಾಮಾಜಿಕ ಪಿಡುಗುಗಳು-ಲೇಖನಗಳೂ ಅಧ್ಯಯನಕ್ಕೆ ಯೋಗ್ಯವಾಗಿವೆ.

ವೇದಗಳು ಸುಳ್ಳಾಗಬಹುದು ಗಾದೆಗಳು ಸುಳ್ಳಾಗಲಾರವು. ಇಲ್ಲಿ ಮಿಂಚಿದ ತಾಯಿ ಚಿಂತನೆ ಅತ್ಯಂತ ಉಪಯುಕ್ತ ಲೇಖನ, ವಿದ್ಯಾರ್ಥಿಗಳು ತಪ್ಪದೇ ಓದಲೇಬೇಕಾದ ಖಣಿ.

'ವಿವೇಚನ ಮಾರ್ಗ'ದಲ್ಲಿ 'ಬಿಚ್ಚಿಟ್ಟ ಬಾಳಬುತ್ತಿ' ಹಿರಿಯ ಸಾಹಿತಿ ಶ್ರೀ ಸುಭಾಶ್ಚಂದ್ರ ಕಶಟ್ಟಿ ಅವರ ಜೀವನ ಸಾಧನೆ, 'ಸರಳ ಜೀವನದ ಉನ್ನತ ವಿಚಾರದ ಹರಿಕಾರ ಶ್ರೀ ಎಸ್. ವಿ. ಹತ್ತಿ ಅವರ ಕರ್ತವ್ಯ ನಿಷ್ಠೆ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತದೆ. ಹೀಗೆ ವೈವಿಧ್ಯತೆಯಿಂದ, ವೈಶಿಷ್ಟ್ಯತೆಯಿಂದ ಕೂಡಿದ ಲೇಖನಗಳಿಂದ “ವಿವೇಚನ ಮಾರ್ಗ" ಒಂದು ಉತ್ತಮ ಕೃತಿಯೆಂದು ಹೇಳಬಹುದು.

 ಪುಸ್ತಕ ಮುದ್ರಣ ಅಂದವಾಗಿದ್ದು, ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡಣಕೇರಿ ಪ್ರತಿಷ್ಠಾನದಿಂದ ಪ್ರಕಟಗೊಂಡ ಈ ಕೃತಿಯಲ್ಲಿ 122 ಪುಟಗಳಿದ್ದು, 120 ಬೆಲೆ ನಿಗದಿಪಡಿಸಲಾಗಿದೆ.

-ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ