ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಕುಸಿತಕ್ಕೆ ಸಮನ್ವಯದ ಕೊರತೆ ಕಾರಣ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪಾಲುದಾರರ ಸಭೆಯಲ್ಲಿ ಸತ್ಯನಾಥ ಶೆಟ್ಟಿ ಹೇಳಿಕೆ

ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಕುಸಿತಕ್ಕೆ ಸಮನ್ವಯದ ಕೊರತೆ ಕಾರಣ   ವಿಶ್ವ ಪ್ರವಾಸೋದ್ಯಮ ದಿನಾಚರಣೆ  ಪಾಲುದಾರರ ಸಭೆಯಲ್ಲಿ ಸತ್ಯನಾಥ ಶೆಟ್ಟಿ ಹೇಳಿಕೆ

ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಕುಸಿತಕ್ಕೆ ಸಮನ್ವಯದ ಕೊರತೆ ಕಾರಣ

 ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪಾಲುದಾರರ ಸಭೆಯಲ್ಲಿ ಸತ್ಯನಾಥ ಶೆಟ್ಟಿ ಹೇಳಿಕೆ

 ಕಲಬುರಗಿ : ಜಿಲ್ಲೆಯ ಪ್ರವಾಸೋದ್ಯಮ ರಂಗ ಸೊರಗಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಉದ್ಯಮಿಗಳು ಹಾಗೂ ಪ್ರವಾಸೋದ್ಯಮದ ಇತರ ಪಾಲುದಾರರ ನಡುವೆ ಸಮನ್ವಯದ ಕೊರತೆಯೇ ಮುಖ್ಯ ಕಾರಣ ಎಂದು ರಾಜ್ಯ ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ಅಭಿಪ್ರಾಯ ಪಟ್ಟರು.

   ಕಲಬುರಗಿಯ ಹೋಟೆಲ್ ಬೃಂದಾವನ ಗ್ರ್ಯಾಂಡ್ನ ರಾಜ್ ರಸೋಯಿ ಸಭಾಂಗಣದಲ್ಲಿ ಕರ್ನಾಟಕ ಪ್ರವಾಸೋದ್ಯಮ ಫೋರಂನ ಕಲ್ಯಾಣ ಕರ್ನಾಟಕ ಚಾಪ್ಟರ್ ನೇತೃತ್ವದಲ್ಲಿ ವಿಶ್ವ ಪ್ರವಾಸೋದ್ಯಮದ ಅಂಗವಾಗಿ ಏರ್ಪಡಿಸಿದ ಸರಣಿ ಕಾರ್ಯಕ್ರಮಗಳಲ್ಲಿ ಕಲಬರಗಿ ಪ್ರವಾಸೋದ್ಯಮಿಗಳ ಮತ್ತು ಪಾಲುದಾರರ ಸಭೆಯನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದ ನಂತರ ಮಾತನಾಡಿ ಪ್ರವಾಸೋದ್ಯಮ ರಂಗದಲ್ಲಿ ಕಲಬುರಗಿ ಕೋಟೆ, ಶರಣಬಸವೇಶ್ವರ ದೇಗುಲ, ಖಾಜಾ ಬಂದೇ ನವಾಜ್ ದರ್ಗಾ, ದತ್ತನ ಗಾಣಗಾಪುರ ಮಳಖೇಡ, ಸನ್ನತಿ ಸೇರಿದಂತೆ ದೇಗುಲಗಳು ಹಾಗೂ ಶಿಲ್ಪಕಲಾ ವೈಭವದ ವೈಶಿಷ್ಟ್ಯತೆಯ ಅನೇಕ ತಾಣಗಳಿದ್ದರೂ ಉದ್ಯಮಿಗಳ ಮತ್ತು ಪಾಲುದಾರರ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆಯಿಂದ ಪ್ರವಾಸಿಗರನ್ನು ಸೆಳೆಯಲು ಹಿಂದೆ ಬಿದ್ದಿದ್ದೇವೆ. ಹೋಟೆಲ್, ವಸತಿ ಗೃಹಗಳಿಗೆ ಪರವಾನಿಗೆ ಸರಳೀಕರಣ, ವ್ಯವಹಾರದ ಮೇಲೆ ವಿಧಿಸುವ ಕಠಿಣ ನಿಯಮಗಳ ಸಡಿಲಿಕೆ, ಮನರಂಜನಾ ಪ್ರದರ್ಶನದ ವೇಳೆ ಅವಧಿ ವಿಸ್ತರಣೆ ಜೊತೆಗೆ ಪಾಲುದಾರ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಪ್ರಗತಿ ಹೊಂದಲು ಸಾಧ್ಯವಿದೆ. ಮಾತ್ರವಲ್ಲ ಉದ್ಯೋಗ ಸೃಷ್ಟಿ ಜೊತೆಗೆ ವ್ಯವಹಾರ ಪ್ರಗತಿ ಯೊಂದಿಗೆ ಈ ಭಾಗದ ಆರ್ಥಿಕ ಬೆಳವಣಿಗೆ ಕಂಡುಕೊಳ್ಳಬಹುದು ಎಂದರು.

    ಕರ್ನಾಟಕ ಟೂರಿಸಂ ಫೋರಂ ನ ಅಧ್ಯಕ್ಷರಾದ ಪ್ಯಾಟ್ರಿಕ್ ಜಾರ್ಜ್ ಮಾತನಾಡಿ ದೇಗುಲ ಟೂ ರಿಸಂ, ಕಲಾ ಟೂರಿಸಂ, ಸಾಂಸ್ಕೃತಿಕ ಟೂರಿಸಂ, ಆಹಾರ ಟೂರಿಸಂ, ವೆಲ್ ನೆಸ್ ಟೂರಿಸಂ ಮುಂತಾದವುಗಳ ಮೂಲಕ ಈ ಭಾಗದ ಸ್ಥಳೀಯ ಮಹತ್ವಗಳಿಗೆ ಪ್ರವಾಸೋದ್ಯಮದ ಸ್ಪರ್ಶ ನೀಡಿ ಅಭಿವೃದ್ಧಿ ಹೊಂದುವಂತೆ ಮಾಡಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳಿಗೆ ಯೋಜನೆ ಸಿದ್ಧಪಡಿಸಲು ಎಲ್ಲಾ ರೀತಿಯ ರೂಪುರೇಷೆ ನೀಡಿ ಸಲಹೆ ನೀಡಲಾಗುತ್ತಿದೆ. ಮೈಸೂರು, ಕರಾವಳಿ, ಹಂಪಿ, ಬಾದಾಮಿ ಮುಂತಾದ ಕಡೆಗಳಲ್ಲಿ ಪ್ರವಾಸೋದ್ಯಮ ಬೆಳೆದಂತೆ ಈ ಭಾಗಕ್ಕೂ ನೂತನ ಪ್ರವಾಸೋದ್ಯಮ ನೀತಿಯ ಅಗತ್ಯವಿದೆ. ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿರುವುದು ದಾಖಲೆ ಎಂದು ಅವರು ಹೇಳಿದರು.

    ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಚಾಪ್ಟರ್ ನ ಸಂಯೋಜಕರಾದ ಸಂದೀಪ್ ರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಭಾಗದ ಪ್ರವಾಸೀ ರಂಗದ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮವೇ ಬೆನ್ನೆಲುಬಾಗಿದ್ದು ಇದರ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಕರ್ನಾಟಕ ಪ್ರವಾಸೋದ್ಯಮ ಫೋರಂನ ವಿನಯ್, ವಿನುತ, ರವೀಂದ್ರ, ನಾಗರಾಜ್ ಸುಳೆಗಾರ, ಅಭಿಷೇಕ್ ಬೀದರ್, ಸೈಯದ್ ಅಬ್ದುಲ್ ರೌಫ್ ಖಾದ್ರಿ, ಮಹೇಶ್ ಕಡೇಚೂರ್ ಮತ್ತಿತರರು ಮಾತನಾಡಿದರು.

   ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಯಾದರೆ ಈ ಭಾಗದ ನಿರುದ್ಯೋಗ ಸಮಸ್ಯೆ ಕೊನೆಗೊಂಡು ವಲಸೆ ಹೋಗುವುದನ್ನು ತಪ್ಪಿಸಬಹುದು. ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮಕ್ಕಾಗಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನ ಮಾಡಿ ಕಲಬುರಗಿಯನ್ನು ಕೇಂದ್ರೀಕರಿಸಿ ಹೆಲಿ ಟೂರಿಸಂ ಆರಂಭಕ್ಕೆ ಉತ್ತಮ ಅವಕಾಶವಿದೆ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿ.

 ಡಾ. ಸದಾನಂದ ಪೆರ್ಲ, ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥರು, ಆಕಾಶವಾಣಿ

 ಕಲಬುರಗಿಯು ಶರಣ, ಸೂಫಿ, ದಾಸ ಪರಂಪರೆಯ ಭಾವೈಕ್ಯತೆಯ ಪುಣ್ಯಭೂಮಿ. ಧಾರ್ಮಿಕ,ಸಾಂಸ್ಕೃತಿಕ ಕೇಂದ್ರಗಳನ್ನು ಪ್ರವಾಸೋದ್ಯಮ ರಂಗದಲ್ಲಿ ಇವುಗಳನ್ನು ಸೂಕ್ತವಾಗಿ ಬಳಕೆ ಮಾಡಿ ದೇಶವಿದೇಶದ ಪ್ರವಾಸಿಗರನ್ನು ಆಕರ್ಷಿಸಿ ನೆಲದ ಸಾಂಸ್ಕೃತಿಕ ವೈಭವವನ್ನು ಬಿಂಬಿಸಲು ಸಾಧ್ಯ ಸಾಂಸ್ಕೃತಿಕ ಟೂರಿಸಂಗೆ ವಿಪುಲ ಅವಕಾಶ ಮತ್ತು ಈ ಭಾಗದ ಬೆಳವಣಿಗೆಗೆ ಉತ್ತಮ ಸಾಧ್ಯತೆ ಇದೆ.

ಸೈಯದ್ ಅಬ್ದುಲ್ ರೌಫ್ ಖಾದ್ರಿ, ಉರ್ದು ಸಾಹಿತಿ ಹಾಗೂ ಉರ್ದು ಅಕಾಡೆಮಿ ಮಾಜಿ ಸದಸ್ಯ,ಕಲಬುರಗಿ