ರಟಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 23ನೇ ವಾರ್ಷಿಕ ಮಹಾಸಭೆ
ರಟಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 23ನೇ ವಾರ್ಷಿಕ ಮಹಾಸಭೆ
ರಟಕಲ್: ರಟಕಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 23ನೇ ವಾರ್ಷಿಕ ಮಹಾಸಭೆ ಇಂದು ಮುರಗೇಂದ್ರ ಶಿವಯೋಗಿಗಳ ವಿರಕ್ತಮಠದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಸಭೆಯಲ್ಲಿ 2025-26ನೇ ಸಾಲಿನಲ್ಲಿ ಸಂಘವು ಆದಾಯ ಗಳಿಸಿರುವ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು. ಸಂಘದ ವಿವಿಧ ಕಾರ್ಯಚಟುವಟಿಕೆಗಳು, ರೈತರಿಗೆ ನೀಡುತ್ತಿರುವ ಸೇವೆಗಳು ಹಾಗೂ ಮುಂದಿನ ದಿನಗಳಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಕುರಿತು ಚರ್ಚೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ರೇವಣಸಿದ್ಧ ಬಡಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆಗಳು ಹಾಗೂ ಸಾಧನೆಗಳ ಕುರಿತು ವಿವರಿಸಿದರು. ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸಂಘವನ್ನು ಬಲಿಷ್ಠಗೊಳಿಸುವಲ್ಲಿ ಸದಸ್ಯರ ಸಾಲ ಮರುಪಾವತಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಬಿಸಿನೆಸ್ ಡೆವಲಪ್‌ಮೆಂಟ್ ಲೋನ್‌ಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ, ಸಂಘದ ಆರ್ಥಿಕ ಸದೃಢತೆಗೆ ಹಾಗೂ ಲಾಭದಾಯಕತೆಗೆ ಸಹಕರಿಸಿದ ಉದ್ಯಮಿಗಳು ಹಾಗೂ ರೈತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಮೂಲಕ ಇತರ ಸದಸ್ಯರಿಗೂ ಮಾದರಿಯಾಗಿರುವ ಫಲಾನುಭವಿಗಳ ಸೇವೆಯನ್ನು ಸಭೆಯಲ್ಲಿ ಪ್ರಶಂಸಿಸಲಾಯಿತು.
ಸಭೆಯಲ್ಲಿ ರೈತರು ತಮಗೆ ಅಗತ್ಯವಿರುವ ಸೌಲಭ್ಯಗಳು ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂಘದ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಬಲಿಷ್ಠಗೊಳಿಸಿ, ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ವ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದಿನ ವರ್ಷದ ಸಂಘದ ಕಾರ್ಯಚಟುವಟಿಕೆಗಳ ಅಂದಾಜು ಪಟ್ಟಿಯನ್ನು ಸರ್ವ ಸದಸ್ಯರ ಗಮನಕ್ಕೆ ತರಲಾಯಿತು. ವಿವಿಧ ವಿಷಯಗಳ ಕುರಿತು ಸದಸ್ಯರೊಂದಿಗೆ ಚರ್ಚೆ ನಡೆಸಿ, ಅಗತ್ಯ ಸಲಹೆ-ಸೂಚನೆಗಳನ್ನು ಪಡೆಯಲಾಯಿತು.
ಸಭೆಯ ಮುಖ್ಯ ಅತಿಥಿಗಳಾಗಿ ರಟಕಲ್ ಗ್ರಾಮದ ಮುರಗೇಂದ್ರ ಶಿವಯೋಗಿಗಳ ವಿರಕ್ತಮಠದ ಪರಮಪೂಜ್ಯ ಶ್ರೀ ನೀಲಕಂಠ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಚಂದ್ರಕಾಂತ ಸೀಗಿ, ಗುಂಡಯ್ಯ ಸ್ವಾಮಿ ಮಠಪತಿ, ಮಲ್ಲಿಕಾರ್ಜುನ್ ಬುಳ್ಳ, ಸೂರತ್ ಭಾಯಿ ಚಿಕ್ಕಅಗಸಿ, ಕಮಲಾಬಾಯಿ ಚೇಂಗಟಿ, ತರುಣಶೇಖರ್ ಬಿರಾದರ್, ರೇವಣ್ಣ ಕುಮಾರ, ಹನುಮಂತ ಕೂಡ್ಲಿ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೂವಪ್ಪ ಪೂಜಾರಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

