ಕಲಬುರಗಿಯಲ್ಲಿ ಕಲ್ಯಾಣ ಸೌಧ ನಿರ್ಮಾಣದ ಘೋಷಣೆ ಮಾಡಿ, ಅಧಿವೇಶನ ನಡೆಸಲು: ಶರಣು ಪಾಟೀಲ್ ಆಗ್ರಹ
ಕಲಬುರಗಿಯಲ್ಲಿ ಕಲ್ಯಾಣ ಸೌಧ ನಿರ್ಮಾಣದ ಘೋಷಣೆ ಮಾಡಿ, ಅಧಿವೇಶನ ನಡೆಸಲು: ಶರಣು ಪಾಟೀಲ್ ಆಗ್ರಹ
ಚಿಂಚೋಳಿ : ಆಡಳಿತದಿಂದ ಬೆಂಗಳೂರು ರಾಜಧಾನಿಯಾಗಿದ್ದರೂ, ಆಡಳಿತ ಸೇವೆ ರಾಜ್ಯದ ಎಲ್ಲಾ ಭಾಗದ ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ ಪ್ರತಿ ವರ್ಷ ಅಧಿವೇಶನ ನಡೆಸುವ ಮೂಲಕ ಉತ್ತರ ಕರ್ನಾಟಕದ ಪ್ರಗತಿಗೆ ಸರ್ಕಾರ ಮುನ್ನುಡಿ ಬರೆದಿದ್ದರು, ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ವಿಮೋಚನೆಗೊಂಡ ಕಲ್ಯಾಣ ಕರ್ನಾಟಕ ಪ್ರದೇಶ ಇಂದಿಗೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ ಎಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ತಿಳಿಸಿದ್ದಾರೆ.
ಹೀಗೆಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು,
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಸೇರಿ ಏಳು ಜಿಲ್ಲೆಗಳಿಗೆ ವಿಭಾಗೀಯ ಕೇಂದ್ರವಾದ ಕಲಬುರಗಿಗೆ ಕಲ್ಯಾಣ ಸೌಧ ನಿರ್ಮಾಣ ಮಾಡಿ ಕಲ್ಯಾಣ ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರವು ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಬೇಕಾಗಿದೆ.
ಕಾಂಗ್ರೆಸ್ ಪಕ್ಷ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸದಾ ವಿಶೇಷ ಗಮನ ಹರಿಸಿದೆ. ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಐತಿಹಾಸಿಕ 371(ಜೆ) ಕಲಂ ಜಾರಿಗೆ ತಂದಿದ್ದು ಕಾಂಗ್ರೆಸ್. ಈ ಭಾಗಕ್ಕೆ ವಿಶ್ವವಿದ್ಯಾಲಯಗಳು, ವೈದ್ಯಕೀಯ ಸಂಸ್ಥೆಗಳು, ನೀರಾವರಿ ಯೋಜನೆಗಳು ಮತ್ತು ವಿಶೇಷ ಅಭಿವೃದ್ಧಿ ಅನುದಾನಗಳು ಹರಿದು ಬಂದಿರುವುದು ಕೂಡ ಕಾಂಗ್ರೆಸ್ ಪಕ್ಷದ ಅವಧಿಗಳಲ್ಲಿ ಮಾತ್ರ. ಬದ್ಧತೆಗೆ ಕಾಂಗ್ರೆಸ್ ಪಕ್ಷ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಗಟ್ಟಿ ನೆಲೆಯನ್ನು ಕೊಟ್ಟು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಲ್ಯಾಣ ಕರ್ನಾಟಕ ಭಾಗದ ಬಹುಪಾಲು ಕೊಡುಗೆ ಇದೆ. ಏಳು ಜಿಲ್ಲೆಗಳ 41 ವಿಧಾನಸಭಾ ಕ್ಷೇತ್ರಗಳ ಜನರು ಯಾವಾಗಲೂ ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ನಂಬಿಕೆ ಇಟ್ಟು ಬೆಂಬಲಿಸುತ್ತಾ ಬಂದಿದ್ದಾರೆ. ಕಲ್ಯಾಣದ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು, ಕೃಷ್ಣಾ-ಭೀಮಾ ನದಿ ನೀರಾವರಿ, ಕೈಗಾರಿಕೆ, ಶಿಕ್ಷಣ, ಮೂಲ ಸೌಕರ್ಯ ಮತ್ತು ನಿರುದ್ಯೋಗದಂತಹ ಸಮಸ್ಯೆಗಳಿಗೆ ನಿವಾರಣೆ ಆಗಬೇಕಾದರೆ ಆಡಳಿತ ವಿಕೇಂದ್ರೀಕರಣ ಅವಶ್ಯಕತೆ ಇದೆ. ದಿಂದ ಮಾತ್ರ ಸಾಧ್ಯವಿದೆ.
ಆದ್ದರಿಂದ ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಮುಖ್ಯಮಂತ್ರಿಗಳು ಕಲ್ಯಾಣ ಸೌಧ ನಿರ್ಮಾಣದ ಘೋಷಣೆಯನ್ನು ಮಾಡಬೇಕೆಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಅವರು ಆಗ್ರಹಿಸಿದ್ದಾರೆ.

