ಶ್ರಾವಣ ಮಾಸದ ಒಂದು ತಿಂಗಳ ಭಜನೆಗೆ ಭಕ್ತಿಭಾವದ ಸಮಾರೋಪ
ಶ್ರಾವಣ ಮಾಸದ ಒಂದು ತಿಂಗಳ ಭಜನೆಗೆ ಭಕ್ತಿಭಾವದ ಸಮಾರೋಪ
ಕಕ್ಕಯ್ಯ ಸಮಾಜದ ದೇವಸ್ಥಾನ ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಶಾಸಕ ಅಲ್ಲಮಪ್ರಭು ಪಾಟೀಲ
ಕಲಬುರಗಿ: ನಗರದ ಜಗತ್ ವೃತ್ತದ ಸಮೀಪದಲ್ಲಿರುವ ಶರಣ ಡೋಹಾರ ಕಕ್ಕಯ್ಯ ದೇವಸ್ಥಾನದಲ್ಲಿ ಶರಣ ಡೋಹಾರ ಕಕ್ಕಯ್ಯ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಸತತ ಒಂದು ತಿಂಗಳ ಕಾಲ ನಡೆದ ಭಜನೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕಕ್ಕಯ್ಯ ಸಮಾಜದವರು ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಭಕ್ತಿಭಾವದಿಂದ ಶಿವನ ಆರಾಧನೆ ಹಾಗೂ ಭಜನೆ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಭಗವಂತನ ಕೃಪೆಯಿಂದ ಸಮಾಜದ ಎಲ್ಲರ ಕಾರ್ಯಗಳು ಯಶಸ್ವಿಯಾಗಲಿ ಎಂದು ಹಾರೈಸಿದರು. ದೇವಸ್ಥಾನದ ಅಭಿವೃದ್ಧಿಗೆ ಈಗಾಗಲೇ ಅನುದಾನ ನೀಡಲಾಗಿದ್ದು, ಟ್ರಸ್ಟ್ ಅಧ್ಯಕ್ಷ ಸೈಬಣ್ಣ ಹೊಳ್ಳರ್ ಅವರು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಂದೆಯೂ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಕಕ್ಕಯ್ಯ ಸಮುದಾಯದವರು ಸೌಮ್ಯ ಸ್ವಭಾವದವರಾಗಿದ್ದು, ಎಲ್ಲ ಸಮುದಾಯಗಳೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ. ಕಾಯಕವನ್ನು ನಂಬಿಕೊಂಡು ಬದುಕುತ್ತಿರುವ ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ಕಕ್ಕಯ್ಯ ದೇವಸ್ಥಾನಕ್ಕೆ ಈ ಹಿಂದೆ ಅನುದಾನ ನೀಡಿದ್ದು, ಮುಂದೆಯೂ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಪ್ರಭು ಶ್ರೀ ತಾಯಿ ಅವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಜೇಸ್ಕಾಂನ ವಾಣಿಜ್ಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಖಂಡಪ್ಪ ಸೋನಾವಣೆ, ಡಿಯುಡಿಸಿ ಕಲಬುರಗಿಯ ಎಇಇ ರಾಮಚಂದ್ರ ಬಿ. ಕಟಕೆ, ಯಾದಗಿರಿ ಜಿಲ್ಲಾ ಬಿಸಿಎಂ ಅಧಿಕಾರಿ ಸದಾಶಿವ ಎಂ. ನಾರಾಯಣಕರ್, ಎಸ್‌ಎಸ್‌ಟಿವಿ ಹಾಗೂ ಜೈಭೀಮ್ ಪತ್ರಿಕೆ ಸಂಪಾದಕ ಶಂಕರ ಕೊಡ್ತಾ, ಪಿಡಬ್ಲ್ಯುಡಿ ಗುತ್ತಿಗೆದಾರ ಭೀಮಾಶಂಕರ ಪಟ್ಟಣ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಶಿಕಲಾ ಕಟಕೆ, ಓಂಸಾಯಿ ಟೆಂಟ್ ಹೌಸ್ ಮಾಲೀಕ ಶುಭಾಶ್ಚಂದ್ರ ತ್ರಿಮುಖೆ ಹಾಗೂ ನಿವೃತ್ತ ಯೋಧ ಸಿಂದೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಸೈಬಣ್ಣ ಹೊಳ್ಳರ್ ವಹಿಸಿದ್ದರು. ಕರ್ನಾಟಕ ರಾಜ್ಯ ಡೋಹಾರ ಕಕ್ಕಯ್ಯ ಸಮಾಜದ ಅಧ್ಯಕ್ಷ ಲಿಂಗೋಜಿ ಗಜರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋತಿಲಾಲ ಕಟಕೆ ನಿರೂಪಿಸಿದರು. ಶಾಮರಾವ್ ಕಟಕೆ ಸ್ವಾಗತಿಸಿದರು. ಡಾ. ತುಳಜಾರಾಮ ಗಾಯದನಕರ ವಂದಿಸಿದರು.
ಒಂದು ತಿಂಗಳ ಕಾಲ ನಿರಂತರವಾಗಿ ಭಜನೆ ಸೇವೆ ಸಲ್ಲಿಸಿದ ಸೂರ್ಯಕಾಂತ ಸಾವಲ್ಕರ್ ಹಾಗೂ ಪ್ರಸಾದ ಸೇವೆ ನೀಡಿದ ಶಂಕ್ರುಬಾಯಿ ಬಾಬುರಾವ್ ಕಟಕೆ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಟ್ರಸ್ಟ್ ನಿರ್ದೇಶಕರು ಹಾಗೂ ಸಮಾಜದ ಹಿರಿಯ ನಾಗರಿಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಸಹ ಕಾರ್ಯದರ್ಶಿ ಅರ್ಜುನ್ ಸೊನಕವಡೆ, ಖಜಾಂಚಿ ರಮೇಶ್ ಗಾಯದನಕರ, ನಿರ್ದೇಶಕರಾದ ಡಾ. ಲಕ್ಷ್ಮಣ ಕವಳೆ, ಅಮೃತ ಮಹಾವರ್ಕರ್, ಸಮಾಜದ ಹಿರಿಯರಾದ ಗುಂಡಪ್ಪ ಗಾಯದನಕರ, ಅಶೋಕ್ ಮಹಾವರ್ಕರ್ ಸೇರಿದಂತೆ ಟ್ರಸ್ಟ್‌ನ ನಿರ್ದೇಶಕರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

