ಅಖಿಲ ಕರ್ನಾಟಕ ಹರಿದಾಸ ಸಾಹಿತ್ಯ ಸಮ್ಮೇಳನ - ಸರ್ವಾಧ್ಯಕ್ಷ ರಾಗಿ ಸಾಹಿತಿ, ದಾಸ ಸಾಹಿತ್ಯ ವಿದ್ವಾಂಸ ಡಾ.ಸ್ವಾಮಿರಾವ ಕುಲಕರ್ಣಿ ಆಯ್ಕೆ
ಬಾಗಲಕೋಟೆಯಲ್ಲಿ ಅಖಿಲ ಕರ್ನಾಟಕ ಹರಿದಾಸ ಸಾಹಿತ್ಯ ಸಮ್ಮೇಳನ -
ಹಿರಿಯ ಸಾಹಿತಿ, ದಾಸ ಸಾಹಿತ್ಯ ವಿದ್ವಾಂಸ ಡಾ.ಸ್ವಾಮಿರಾವ ಕುಲಕರ್ಣಿಯವರಿಗೆ ಸರ್ವಾಧ್ಯಕ್ಷ ಗೌರವ
ಕಲಬುರಗಿ : ಪ್ರಸನ್ನ ವೆಂಕಟದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಬಾಗಲಕೋಟೆಯಲ್ಲಿ ಸೆಪ್ಟೆಂಬರ ೨೦, ೨೧, ೨೨ರಂದು ಮೂರು ದಿನ ನಡೆಯಲಿರುವ ಅಖಿಲ ಕರ್ನಾಟಕ ಹರಿದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಲಬುರಗಿಯ ಹಿರಿಯ ಸಾಹಿತಿ, ದಾಸ ಸಾಹಿತ್ಯ ವಿದ್ವಾಂಸ ಡಾ.ಸ್ವಾಮಿರಾವ ಕುಲಕರ್ಣಿಯವರಿಗೆ ದೊರಕಿದೆ. ಹರಿದಾಸ ತೊಟ್ಟಿಲು, ತವರುಮನೆ ಎಂಬುದಾಗಿ ವಿದ್ವಾಂಸರಿಂದ ಗುರುತಿಸಿಕೊಂಡಿರುವ ರಾಯಚೂರು ಜಿಲ್ಲೆ ಸ್ವಾಮಿರಾವ ಅವರ ಜನ್ಮ ಸ್ಥಳವಾದರೆ, ಕಲಬುರಗಿ ಜಿಲ್ಲೆ ಅವರ ಕಾಯಕ ಸ್ಥಳ.
ನಿವೃತ್ತ ಪ್ರಾಚಾರ್ಯರಾಗಿ, ಸಾಹಿತ್ಯ, ರಂಗಭೂಮಿ, ಸಂಘಟನೆ, ಪ್ರಕಾಶಕ, ಉತ್ತಮ ವಾಗ್ಮಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಪಡೆದಿರುವ ಸ್ವಾಮಿರಾವ ಅವರು, ಕಾವ್ಯ, ನಾಟಕ, ಸಂಶೋಧನ, ಲಲಿತಪ್ರಬಂಧ, ವ್ಯಕ್ತಿ ಚಿತ್ರಣ, ಜಾನಪದ, ವಚನ, ದಾಸ ಸಾಹಿತ್ಯ, ಲಲಿತ ಪ್ರಬಂಧ, ವೈಚಾರಿಕ ಮುಂತಾದ ವಿಷಯಗಳಲ್ಲಿ ಈವರೆಗೆ ೮೧ ಪುಸ್ತಕಗಳನ್ನು ಬರೆದಿದ್ದಾರೆ. ೫ ಸಾವಿರಕ್ಕೂ ಮೇಲ್ಪಟ್ಟು ಭಾಷಣ ಮಾಡಿದ್ದಾರೆ. ಡಾ.ಚನ್ನಣ್ಣ ವಾಲೀಕಾರ ಅವರ ಮಾರ್ಗದರ್ಶನದಲ್ಲಿ ಶ್ರೀರಾಮದಾಸರಾಗಿ, ಶ್ರೀರಾಮ ಅಂಕಿತದಿAದ ೮೦೦ ಕೀರ್ತನೆಗಳನ್ನು ಬರೆದು ದಾಸ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕಾಣಿಕೆ ನೀಡಿದ ಧಾರ್ಮಿಕ ಭಾವೈಕ್ಯದ ಹರಿದಾಸರೆಂದೇ ಜನಪ್ರಿಯರಾಗಿರುವ ಇಸ್ಲಾಂ ಧರ್ಮದ ಪಿಂಜಾರ ಬಡೇಸಾಹೇಬರ ಕುರಿತು ಬರೆದ ಸಂಶೋಧನಾ ಮಹಾಪ್ರಬಂಧಕ್ಕೆ ೧೯೯೫ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಪಿಹೆಚ್.ಡಿ. ಪದವಿ ನೀಡಿದೆ. ದಾಸ ಸಾಹಿತ್ಯ ವಿಷಯ ಕುರಿತಂತೆ ಈವರೆಗೆ ೨೫ ಗ್ರಂಥಗಳನ್ನು ರಚಿಸಿದ್ದಾರೆ. ಮಂತ್ರಾಲಯ ಮಠ, ತಿರುಪತಿ ದೇವಸ್ಥಾನ ನೀಡುವ ದಾಸ ಸಾಹಿತ್ಯ ಪ್ರಶಸ್ತಿ ಸನ್ಮಾನಕ್ಕೆ ಪಾತ್ರರಾಗುವುದು ಮಾತ್ರವಲ್ಲ, ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ `ಕನಕಶ್ರೀ' ಪ್ರಶಸ್ತಿ ಪುರಸ್ಕೃತರು.
ಬಾಲಕೋಟೆಯ ಪ್ರಸನ್ನ ವೆಂಕಟ ಸಂಶೋಧನಾ ಪ್ರತಿಷ್ಠಾನ, ಅಖಿಲ ಕರ್ನಾಟಕ ಹರಿದಾಸ ಸಂಶೋಧನಾ ಸಂಸ್ಥೆ, ರಾಷ್ಟಿçÃಯ ವೇದವಿಜ್ಞಾನ ಸಂಸ್ಥೆಗಳ ಆಶ್ರಯದಲ್ಲಿ, ತಿರುಪತಿ ತಿರುಮಲ ದೇವಸ್ಥಾನ ದಾಸ ಸಾಹಿತ್ಯ ಯೋಜನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದೊಂದಿಗೆ, ಸೆಪ್ಟೆಂಬರ ೨೦, ೨೧, ೨೨ ರಂದು ಮೂರು ದಿನಗಳ ದಾಸ ಸಾಹಿತ್ಯ ಸಮ್ಮೇಳನವು ಬಾಗಲಕೋಟೆಯ ಪ್ರಸನ್ನ ವೆಂಕಟದಾಸರ ಸ್ಮಾರಕಭವನದಲ್ಲಿ ನಡೆಯಲಿದೆ.
ದಿನಾಂಕ ೨೦ರಂದು ಮುಂಜಾನೆ ೯.೩೦ಕ್ಕೆ ಪೂಜ್ಯ ಶ್ರೀರಘುವಿಜಯತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ, ಡಾ.ಸ್ವಾಮಿರಾವ ಕುಲಕರ್ಣಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ದಾಸ ಸಾಹಿತ್ಯ ವಿದ್ವಾಂಸರಾದ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಹಾಗು ಲೋಕಸಭಾ ಸದಸ್ಯ ವಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯರಾಗಿರುವ ನಾರಾಯಣ ಭಾಂಡಗೆ, ವಿ.ಎಚ್.ಪೂಜಾರ, ನಿಕಟಪೂರ್ವ ವಿಧಾನಸಭಾ ಸದಸ್ಯ ಡಾ.ವೀರಣ್ಣ ಚರಂತಿಮಠ, ಯೋಗ, ಸಂಸ್ಕೃತ ವಿದ್ಯಾಲಯ ಫ್ಲೋರಿಡಾ, ಅಮೆರಿಕಾ ಕುಲಪತಿಗಳಾಗಿರುವ ಡಾ.ಬಿ.ವಿ.ಕೆ. ಶಾಸ್ತಿçಯವರು ಭಾಗವಹಿಸಲಿದ್ದು, ನಾಡಿನ ಅನೇಕ ದಾಸ ಸಾಹಿತ್ಯ ವಿದ್ವಾಂಸರು ಉಪಸ್ಥಿತರಿರುವರು.
ದಾಸಭವನ, ಸಂಶೋಧನಾ ಗ್ರಂಥಾಲಯ, ದಾಸ ಸಾಹಿತ್ಯ ಗ್ರಂಥಗಳ ಉದ್ಘಾಟನೆ, ಬಿಡುಗಡೆ ಹಾಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.
ಸಮ್ಮೇಳನದ ಮೂರು ದಿನಗಳಲ್ಲಿ ದಾಸ ಸಾಹಿತ್ಯದ ವಿವಿಧ ವಿಷಯಗಳ ಕುರಿತಂತೆ ಗೋಷ್ಠಿಗಳು, ಮುಖ್ಯವಾಗಿ ದಾಸರ ಸಮಾಜಮುಖಿ ಚಿಂತನೆ ಹಾಗು ದಾಸ ಸಾಹಿತ್ಯಕ್ಕೆ ಬ್ರಾಹ್ಮಣೇತರರ ಕೊಡುಗೆಯ ವಿಷಯಗಳ ಮೇಲೆ ಪ್ರಬಂಧಗಳ ಮಂಡನೆ, ಚರ್ಚೆ ನಡೆಯಲಿವೆ. ಪ್ರತಿದಿನವೂ ಸಂಜೆ ಸಮಯದಲ್ಲಿ ದಾಸರ ಕೀರ್ತನೆ ಗಾಯನ, ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಆಸಕ್ತರು ಪ್ರತಿನಿಧಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಬಹುದೆಂದು ಪ್ರಸನ್ನ ವೆಂಕಟದಾಸರ ಟ್ರಸ್ಟ್ ಸಂಸ್ಥಾಪಕರ ಅಧ್ಯಕ್ಷರು, ಹಿರಿಯ ವಿಜ್ಞಾನಿಗಳೂ ಆಗಿರುವ ಡಾ.ಸುಭಾಸ ಕಾಖಂಡಕಿಯವರು ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.

