ಏಕೈಕ ಅಜೆಂಡಾ ಇಲ್ಲದ PDO ಅಸಹಕಾರ ಚಳವಳಿಗೆ ಬೆಂಬಲವಿಲ್ಲ: ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ

ಏಕೈಕ ಅಜೆಂಡಾ ಇಲ್ಲದ PDO ಅಸಹಕಾರ ಚಳವಳಿಗೆ ಬೆಂಬಲವಿಲ್ಲ: ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ

ಏಕೈಕ ಅಜೆಂಡಾ ಇಲ್ಲದ PDO ಅಸಹಕಾರ ಚಳವಳಿಗೆ ಬೆಂಬಲವಿಲ್ಲ: ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ

ಕಲಬುರಗಿ : ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳನ್ನು ಯಾವುದೇ ತಾರತಮ್ಯ ಅಥವಾ ಷರತ್ತುಗಳಿಲ್ಲದೆ ಏಕಕಾಲದಲ್ಲಿ ಗ್ರೂಪ್‌-ಬಿ ಹುದ್ದೆಗೆ ಉನ್ನತೀಕರಿಸುವ ಬೇಡಿಕೆಯೊಂದೇ ಪ್ರಮುಖ ಅಜೆಂಡಾವಾಗಿರಬೇಕು. ಈ ಬೇಡಿಕೆಯನ್ನು ಹೊರತುಪಡಿಸಿ ಇತರ ವಿಷಯಗಳನ್ನು ಒಳಗೊಂಡು ಸೆ.21ರಿಂದ ಕರ್ನಾಟಕ ರಾಜ್ಯ PDO ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಹಾಗೂ ಕರ್ತವ್ಯ ಬಹಿಷ್ಕಾರಕ್ಕೆ ತಮ್ಮ ಸಂಘದಿಂದ ಯಾವುದೇ ಬೆಂಬಲವಿಲ್ಲ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘದ ರಾಜ್ಯ ನಿರ್ದೇಶಕರು ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷರಾದ ಕು. ರಾಜೇಶ್ವರಿ ಸಾಹು ತಿಳಿಸಿದ್ದಾರೆ.

ಈ ಕುರಿತು ಸೆ.13ರಂದು ಅಧಿಕೃತ ಪ್ರಕಟಣೆ ಹೊರಡಿಸಿರುವ ಅವರು, ಈ ಹಿಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸಿದ ಹೋರಾಟಗಳಿಂದ PDO ಅಧಿಕಾರಿಗಳ ಮೂಲಭೂತ ಬೇಡಿಕೆಗಳು ಈಡೇರಿಲ್ಲ. ಸರ್ಕಾರದಿಂದ ಸಣ್ಣಪುಟ್ಟ ಅಥವಾ ತಾಂತ್ರಿಕ ಭರವಸೆಗಳನ್ನು ಪಡೆದು ಹೋರಾಟ ಹಿಂಪಡೆಯಲಾಗಿದ್ದು, ಪ್ರಮುಖವಾದ ಗ್ರೂಪ್‌-ಬಿ ಉನ್ನತೀಕರಣದ ಬೇಡಿಕೆ ಮಾತ್ರ ನನೆಗುದಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.

ಜೇಷ್ಠತಾ ಪಟ್ಟಿಗೆ ಸಂಬಂಧಿಸಿದ ವಿಷಯ ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ಕಾನೂನಾತ್ಮಕ ವಿಚಾರವನ್ನು ಮುಷ್ಕರದ ಪ್ರಮುಖ ಅಜೆಂಡಾವನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಸಂಘ ಅಭಿಪ್ರಾಯಪಟ್ಟಿದೆ. ಜತೆಗೆ 15ನೇ ಹಣಕಾಸು ಅನುದಾನ, ವಿ.ಬಿ.ಜಿ.-ರಾಮ್‌ಜಿ ಯೋಜನೆ, ಇ-ಸ್ವತ್ತು ತಂತ್ರಾಂಶ ಸೇರಿದಂತೆ ವಿವಿಧ ಆಡಳಿತಾತ್ಮಕ ವಿಷಯಗಳನ್ನು ಹೋರಾಟದೊಂದಿಗೆ ಸೇರಿಸುವುದರಿಂದ PDO ಹುದ್ದೆಗಳ ಸಮಗ್ರ ಗ್ರೂಪ್‌-ಬಿ ಉನ್ನತೀಕರಣದ ಮೂಲ ಬೇಡಿಕೆಯ ತೀವ್ರತೆ ಕುಂಠಿತವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೆ.21ರಿಂದ ಎಲ್ಲಾ PDO ಅಧಿಕಾರಿಗಳು ಎಂದಿನಂತೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಅಧಿಕೃತ ಇಲಾಖಾ ವಾಟ್ಸಾಪ್‌ ಗುಂಪುಗಳಿಂದ ಹೊರಬರಬಾರದು ಹಾಗೂ ಕಚೇರಿಯ ಆಡಳಿತಾತ್ಮಕ ಕಾರ್ಯಗಳನ್ನು ಸ್ಥಗಿತಗೊಳಿಸಬಾರದು ಎಂದು ಸಂಘ ಮನವಿ ಮಾಡಿದೆ. ಗ್ರಾಮೀಣ ಸಾರ್ವಜನಿಕರಿಗೆ ನಿರಂತರ ಸೇವೆ ಒದಗಿಸುವ ಮೂಲಕ ಯಾವುದೇ ವದಂತಿ ಅಥವಾ ಒತ್ತಡಗಳಿಗೆ ಮಣಿಯಬಾರದು ಎಂದು ಸೂಚಿಸಲಾಗಿದೆ.

ಎಲ್ಲಾ PDO ಹುದ್ದೆಗಳ ಏಕಕಾಲದ ಗ್ರೂಪ್‌-ಬಿ ಉನ್ನತೀಕರಣಕ್ಕಾಗಿ ಸರ್ಕಾರದ ಗಮನ ಸೆಳೆಯಲು ಮುಂದಿನ ದಿನಗಳಲ್ಲಿ ಪ್ರತ್ಯೇಕ ಹಾಗೂ ರಚನಾತ್ಮಕ ಹೋರಾಟದ ರೂಪುರೇಷೆಯನ್ನು ಪ್ರಕಟಿಸಲಾಗುವುದು ಎಂದು ಕು. ರಾಜೇಶ್ವರಿ ಸಾಹು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.