120 ಗ್ರಾಮಗಳಿಗೆ ಉಚಿತ ಮಣ್ಣಿನ ಗಣೇಶ; ಪ್ರತಿ ಮೂರ್ತಿಯೊಂದಿಗೆ ತುಳಸಿ ಸಸಿ ವಿತರಣೆ

120 ಗ್ರಾಮಗಳಿಗೆ ಉಚಿತ ಮಣ್ಣಿನ ಗಣೇಶ; ಪ್ರತಿ ಮೂರ್ತಿಯೊಂದಿಗೆ ತುಳಸಿ ಸಸಿ ವಿತರಣೆ

120 ಗ್ರಾಮಗಳಿಗೆ ಉಚಿತ ಮಣ್ಣಿನ ಗಣೇಶ; ಪ್ರತಿ ಮೂರ್ತಿಯೊಂದಿಗೆ ತುಳಸಿ ಸಸಿ ವಿತರಣೆ

ದೇವರಹಿಪ್ಪರಗಿ: ಗಣೇಶೋತ್ಸವದ ಸಂಭ್ರಮದ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ), ವಿಜಯಪುರ ಹಾಗೂ ಬಸವ ಹಸಿರು ಬಳಗ (ರಿ), ದೇವರಹಿಪ್ಪರಗಿ ವತಿಯಿಂದ ವಿಶಿಷ್ಟ ಪರಿಸರ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ.

ಪಿಓಪಿ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಾಗುವ ಗಣೇಶ ಮೂರ್ತಿಗಳಿಗೆ ಪರ್ಯಾಯವಾಗಿ ನೈಸರ್ಗಿಕ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಉಚಿತವಾಗಿ ವಿತರಿಸುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ. ದೇವರಹಿಪ್ಪರಗಿ, ತಾಳಿಕೋಟೆ ಹಾಗೂ ಸಿಂದಗಿ ತಾಲ್ಲೂಕಿನ ಆಯ್ದ 120 ಗ್ರಾಮಗಳಿಗೆ 120 ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಾಗಿದ್ದು, ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲು ಗ್ರಾಮಸ್ಥರಿಗೆ ನೀಡಲಾಗಿದೆ.

ಎಂಟು ದಿನಗಳ ಕಲಾ ಶಿಬಿರ

ಈ ಅಭಿಯಾನದ ಭಾಗವಾಗಿ ದೇವರಹಿಪ್ಪರಗಿ ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಎಂಟು ದಿನಗಳ ಮಣ್ಣಿನ ಗಣೇಶ ತಯಾರಿಕಾ ಕಲಾ ಶಿಬಿರ ಆಯೋಜಿಸಲಾಗಿತ್ತು. ಕಲಾವಿದರು, ಬಸವ ಭಕ್ತರು, ವಿದ್ಯಾರ್ಥಿಗಳು ಹಾಗೂ ಯುವಕರು ಭಾಗವಹಿಸಿ ಮಣ್ಣಿನ ಮೂರ್ತಿಗಳನ್ನು ತಯಾರಿಸುವ ಪ್ರಾಯೋಗಿಕ ತರಬೇತಿ ಪಡೆದರು.

ಮಣ್ಣಿನ ಸಿದ್ಧತೆ, ಮೂರ್ತಿಯ ಮೂಲ ರಚನೆ, ಅಂಗಾಂಗಗಳ ಪ್ರಮಾಣಬದ್ಧ ವಿನ್ಯಾಸ, ಮುಖದ ರಚನೆ, ಮುಖಭಾವ, ಸೂಕ್ಷ್ಮ ಕೆತ್ತನೆ ಹಾಗೂ ಅಲಂಕಾರ ಸೇರಿದಂತೆ ಮೂರ್ತಿ ತಯಾರಿಕೆಯ ವಿವಿಧ ಹಂತಗಳನ್ನು ಶಿಬಿರದಲ್ಲಿ ಕಲಿಸಿಕೊಡಲಾಯಿತು.

ಇಂಗಳೇಶ್ವರ ಗುಡ್ಡದಿಂದ ಕೆಂಪು ಮಣ್ಣನ್ನು ತರಿಸಿ, ಅದನ್ನು ನೀರಿನಲ್ಲಿ ನೆನೆಸಿ, ಅರಳೆ ಹಿಂಡಿ ಮಣ್ಣಿನೊಂದಿಗೆ ಬೆರೆಸಿ, ನಂತರ ಅಕ್ಕಿಹಿಟ್ಟು ಸೇರಿಸಿ ಸೂಕ್ತ ಹದಕ್ಕೆ ತಂದು ಮೂರ್ತಿಗಳನ್ನು ತಯಾರಿಸಲಾಯಿತು. ಸಿದ್ಧಪಡಿಸಿದ ಮೂರ್ತಿಗಳನ್ನು ಒಣಗಿಸಿ ನೈಸರ್ಗಿಕ ಬಣ್ಣಗಳ ಮೂಲಕ ಸರಳವಾಗಿ ಅಲಂಕರಿಸಿ ಪರಿಸರ ಸ್ನೇಹಿ ಗಣೇಶನಿಗೆ ರೂಪ ನೀಡಲಾಯಿತು.

ಗಣೇಶನೊಂದಿಗೆ ತುಳಸಿಯೂ ಮನೆಗೆ

ಈ ಅಭಿಯಾನದ ವಿಶೇಷತೆ ಎಂದರೆ ಪ್ರತಿ ಮಣ್ಣಿನ ಗಣೇಶ ಮೂರ್ತಿಯೊಂದಿಗೆ ಒಂದೊಂದು ತುಳಸಿ ಸಸಿಯನ್ನು ವಿತರಿಸುವುದು. ಬಸವ ಹಸಿರು ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ತುಳಸಿ ಸಸಿ ವಿತರಣೆಯಲ್ಲಿ ಭಾಗವಹಿಸಿದರು.

ಮೂರ್ತಿಯನ್ನು ವಿಸರ್ಜನೆಗಾಗಿ ಕೆರೆ, ನದಿ ಸೇರಿದಂತೆ ಜಲಮೂಲಗಳಿಗೆ ಹಾಕದೆ, ಮನೆಯಲ್ಲಿಯೇ ಒಂದು ಮಡಿಕೆಯಲ್ಲಿ ನೀರಿನಲ್ಲಿ ಕರಗಿಸಿ, ಅದೇ ಮಣ್ಣಿನಲ್ಲಿ ತುಳಸಿ ಸಸಿಯನ್ನು ನೆಡುವಂತೆ ಜನರಿಗೆ ತಿಳಿಸಲಾಗುತ್ತಿದೆ.

ಇದರಿಂದ ಗಣೇಶನ ವಿಸರ್ಜನೆಯ ನಂತರವೂ ಆ ಮಣ್ಣಿನಿಂದ ಬೆಳೆದುಬರುವ ತುಳಸಿ ಗಿಡದ ಮೂಲಕ “ವಿಸರ್ಜನೆಯಿಂದ ವಿನಾಶವಲ್ಲ, ವಿಸರ್ಜನೆಯಿಂದ ಸೃಷ್ಟಿ” ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನ ಮಾಡಲಾಗಿದೆ.

ಪಿಓಪಿ ಗಣೇಶನ ಬದಲಾಗಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಲು ಪರಿಸರ ಪ್ರೇಮಿಗಳು, ಸಾರ್ವಜನಿಕರು ಹಾಗೂ ವಿವಿಧ ಗ್ರಾಮಗಳ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆರಂಭದಲ್ಲಿ ಪರಿಸರ ಜಾಗೃತಿಗಾಗಿ ಕೈಗೊಂಡಿದ್ದ ಈ ಪ್ರಯತ್ನಕ್ಕೆ ಇದೀಗ ಹಲವು ಗ್ರಾಮಗಳಿಂದ ಬೇಡಿಕೆ ಬರುತ್ತಿದ್ದು, ಅಭಿಯಾನಕ್ಕೆ ಹೆಚ್ಚಿನ ಜನಬೆಂಬಲ ದೊರೆತಿರುವುದು ಸಂಘಟಕರಲ್ಲಿ ಸಂತಸ ಮೂಡಿಸಿದೆ.

“ಗಣೇಶೋತ್ಸವದ ಭಕ್ತಿಯೊಂದಿಗೆ ಪರಿಸರವೂ ಉಳಿಯಬೇಕು. ಮಣ್ಣಿನ ಗಣೇಶನನ್ನು ಮನೆಗೆ ತಂದು, ವಿಸರ್ಜನೆಯ ನಂತರ ಅದೇ ಮಣ್ಣಿನಲ್ಲಿ ತುಳಸಿ ಬೆಳೆಸುವ ಮೂಲಕ ಭಕ್ತಿ ಮತ್ತು ಪರಿಸರ ಸಂರಕ್ಷಣೆಯನ್ನು ಒಟ್ಟಿಗೆ ಸಾಗಿಸಬಹುದು” ಎಂಬ ಸಂದೇಶವನ್ನು ಸಂಘಟನೆಗಳು ಜನರಿಗೆ ನೀಡುತ್ತಿವೆ.

ದೃಶ್ಯಬಿಂಬ ಕಲಾ ಪ್ರತಿಷ್ಠಾನದ ಅಧ್ಯಕ್ಷ ಸತೀಶ ಕೇಮಶೆಟ್ಟಿ ಹಾಗೂ ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಣಕನಾಳ ಅವರ ನೇತೃತ್ವದಲ್ಲಿ ನಡೆದ ಈ ಪರಿಸರ ಸ್ನೇಹಿ ಅಭಿಯಾನಕ್ಕೆ ಕಲಾವಿದರು, ಬಸವ ಭಕ್ತರು, ವಿದ್ಯಾರ್ಥಿಗಳು, ಯುವಕರು ಹಾಗೂ ಗ್ರಾಮಸ್ಥರು ಕೈಜೋಡಿಸಿದ್ದಾರೆ.

ಮುಂದಿನ ವರ್ಷ ಮತ್ತಷ್ಟು ಗ್ರಾಮಗಳಿಗೆ ವಿಸ್ತರಣೆ

ಈ ವರ್ಷದ ಅಭಿಯಾನಕ್ಕೆ ದೊರೆತಿರುವ ಜನಸ್ಪಂದನದಿಂದ ಪ್ರೇರಿತರಾಗಿರುವ ಸಂಘಟಕರು, ಮುಂದಿನ ವರ್ಷ ಇನ್ನಷ್ಟು ಗ್ರಾಮಗಳಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ತಲುಪಿಸಿ ಪರಿಸರ ಸ್ನೇಹಿ ಗಣೇಶೋತ್ಸವದ ಸಂದೇಶವನ್ನು ವ್ಯಾಪಕವಾಗಿ ಹರಡುವ ಸಂಕಲ್ಪ ಮಾಡಿದ್ದಾರೆ.

ಗಣೇಶ ಮೂರ್ತಿಗಳ ವಿತರಣೆ ಸಂದರ್ಭದಲ್ಲಿ ಬಸವ ಹಸಿರು ಬಳಗದ ಉಪಾಧ್ಯಕ್ಷ ಬಸವರಾಜ ಕಲಬುರ್ಗಿ, ಸದಸ್ಯರಾದ ರವಿಕುಮಾರ ಬಿರಾದಾರ, ಪ್ರಭುಗೌಡ ನಾಮಣ್ಣವರ, ಸಿದ್ದು ಕೊಟ್ಟಾರ್ ಗಸ್ತಿ, ಮಲ್ಲು ಚಿಕ್ಕಮಠ, ಶಿವಶಂಕರ ಬೂದಿಹಾಳ, ಪ್ರಶಾಂತ ಜಾವಡಗಿ, ಪ್ರಕಾಶ ಗರಡಿಮನಿ ಹಾಗೂ ದಶರಥ ಖ್ಯಾಡ ಉಪಸ್ಥಿತರಿದ್ದರು ಎಂದು ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಡಿ.ಜಿ. ತಿಳಿಸಿದರು.

“ಗಣೇಶೋತ್ಸವವೂ ಇರಲಿ... ಪರಿಸರವೂ ಉಳಿಯಲಿ”

                                                     ವರದಿ ಸತೀಶ್ ಕೇಮಶೆಟ್ಟಿ