ವಿದ್ಯಾರ್ಥಿಗಳೇ, ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ ಶಾಂತಾ ಭೀಮಸೇನರಾವ್
ವಿದ್ಯಾರ್ಥಿಗಳೇ, ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ ಶಾಂತಾ ಭೀಮಸೇನರಾವ್
ಕಲಬುರ್ಗಿ:ವಿದ್ಯಾರ್ಥಿ ಜೀವನವು ಮನುಷ್ಯನ ಬದುಕಿನ ಅತ್ಯಂತ ಮಹತ್ವದ ಘಟ್ಟ. ಈ ಅವಧಿಯಲ್ಲಿ ರೂಪುಗೊಳ್ಳುವ ಆಲೋಚನೆಗಳು, ಅಭ್ಯಾಸಗಳು, ಸ್ನೇಹಗಳು, ಮೌಲ್ಯಗಳು ಮತ್ತು ಗುರಿಗಳು ಮುಂದಿನ ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕದ ಜ್ಞಾನವನ್ನು ಪಡೆಯುವುದರ ಜೊತೆಗೆ ತಮ್ಮನ್ನು ತಾವು ಅರಿತುಕೊಳ್ಳುವುದು ಮತ್ತು ಪ್ರೀತಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಎಂ ಎಸ್ ಇರಾಣಿ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ ಶಾಂತಾ ಭೀಮಸೇನ ರಾವ್ ಹೇಳಿದರು.
ಅವರು ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಸಾಮಾನ್ಯವಾಗಿದೆ. ‘ಅವನಿಗೆ ಹೆಚ್ಚು ಅಂಕ ಬಂದಿದೆ’, ‘ಅವಳು ನನ್ನಿಗಿಂತ ಚೆನ್ನಾಗಿ ಮಾತನಾಡುತ್ತಾಳೆ’, ‘ಅವನು ನನ್ನಿಗಿಂತ ಹೆಚ್ಚು ಪ್ರತಿಭಾವಂತ’ ಎಂಬ ಆಲೋಚನೆಗಳು ನಿಧಾನವಾಗಿ ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಭಿನ್ನ. ಒಬ್ಬರಿಗೆ ಗಣಿತದಲ್ಲಿ ಪ್ರತಿಭೆ ಇರಬಹುದು; ಇನ್ನೊಬ್ಬರಿಗೆ ಇತಿಹಾಸದಲ್ಲಿ ಆಸಕ್ತಿ ಇರಬಹುದು. ಮತ್ತೊಬ್ಬರು ಕ್ರೀಡೆ, ಸಂಗೀತ, ಚಿತ್ರಕಲೆ, ಭಾಷೆ, ತಂತ್ರಜ್ಞಾನ ಅಥವಾ ನಾಯಕತ್ವದಲ್ಲಿ ಅದ್ಭುತ ಸಾಧನೆ ಮಾಡಬಹುದು ಎಂದು ಹೇಳಿದರು
ಮುಂದುವರೆದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಕೆಲವರು ತಮ್ಮನ್ನು ತಾವು ವಿಫಲರೆಂದು ಭಾವಿಸುತ್ತಾರೆ. ಆದರೆ ಒಂದು ಪರೀಕ್ಷೆಯ ಫಲಿತಾಂಶ ನಿಮ್ಮ ಸಂಪೂರ್ಣ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ.
ಕಡಿಮೆ ಅಂಕ ಬಂದರೆ ನಿಮ್ಮನ್ನು ದೂಷಿಸಿಕೊಳ್ಳುವುದಕ್ಕಿಂತ
ನಾನು ಎಲ್ಲಿ ತಪ್ಪಿದೆ?’ ನನ್ನ ಓದುವ ವಿಧಾನದಲ್ಲಿ ಏನು ಬದಲಾವಣೆ ಮಾಡಬೇಕು?’, ‘ಮುಂದಿನ ಬಾರಿ ಹೇಗೆ ಉತ್ತಮವಾಗಿ ಮಾಡಬಹುದು?’ ಎಂದು ಪ್ರಶ್ನಿಸಿಕೊಳ್ಳಿ.
ವಿಫಲತೆ ಅಂತ್ಯವಲ್ಲ ಅದು ಹೊಸ ಪ್ರಯತ್ನಕ್ಕೆ ನೀಡುವ ಪಾಠ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳ ಜೀವನದಲ್ಲಿ ಮೊಬೈಲ್ ಅವಿಭಾಜ್ಯವಾಗಿದೆ. ಜ್ಞಾನ ಪಡೆಯಲು, ಕಲಿಯಲು ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ತಂತ್ರಜ್ಞಾನ ಬಹಳ ಉಪಯುಕ್ತ. ಆದರೆ ಅದರ ಅತಿಯಾದ ಬಳಕೆ ಸಮಯ, ಏಕಾಗ್ರತೆ ಮತ್ತು ನಿದ್ರೆಯನ್ನು ಹಾಳು ಮಾಡಬಹುದು.
ಆದ್ದರಿಂದ ಮೊಬೈಲ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ. ಓದುವ ಸಮಯದಲ್ಲಿ ಗಮನವನ್ನು ಬೇರೆಡೆ ಸೆಳೆಯುವ ಸೂಚನೆಗಳನ್ನು ನಿಯಂತ್ರಿಸಿ. ಸಾಮಾಜಿಕ ಜಾಲತಾಣದಲ್ಲಿ ಕಾಣುವ ಇತರರ ಜೀವನವನ್ನು ನಿಮ್ಮ ಜೀವನದೊಂದಿಗೆ ಹೋಲಿಸಿಕೊಳ್ಳಬೇಡಿ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನಿರ್ದೆಶಕಿ ಉಪನ್ಯಾಸಕಿ ಶ್ವೇತಾ ಶೆಟ್ಟಿ, ಸಂಗೀತಾ ಸಡಕೀನ್, ಡಾ ಪಾಂಡುರಂಗ ಚಿಂಚನಸೂರ,ಚಂದ್ರಶೇಖರ್ ಪಟ್ಟಣಕರ್, ಡಾ ಕೃಷ್ಣವೇಣಿ ಪಾಟೀಲ್,ಆನಂದ ಕೊಪ್ಪದ,ರಾಮು ಕಟ್ಟಿ,ಉಷಾ ಪಾಟೀಲ್,,ಮಧುಶ್ರೀ ಘಂಟಿ,ವಿಜಯಲಕ್ಷ್ಮೀ ಶಾಬಾದಿ,ಸವಿತಾ ಪಾಟೀಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು, ನಂದಿತಾ ವಂದಿಸಿದರು

