ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಹೋರಾಟ: ಬಂಗ್ಲೆ ಮಲ್ಲಿಕಾರ್ಜುನ್ ಎಚ್ಚರಿಕೆ
ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಹೋರಾಟ: ಬಂಗ್ಲೆ ಮಲ್ಲಿಕಾರ್ಜುನ್ ಎಚ್ಚರಿಕೆ
ಹುಬ್ಬಳ್ಳಿ, ಆ. 19: ರಾಜ್ಯದಲ್ಲಿ ನೈಜವಾಗಿ ದುಡಿಯುತ್ತಿರುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು. ಈ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಆಯೋಜಿಸಿದ್ದ ಸಂಘಟನೆಯ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಮಹತ್ವದ ಸಭೆ ಮತ್ತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಕ್ಷೇತ್ರಮಟ್ಟದ ಸವಾಲುಗಳು, ಕಿರುಕುಳ, ಮಾಧ್ಯಮ ಮಾನ್ಯತೆ ಹಾಗೂ ಕಾರ್ಮಿಕ ಕಾಯ್ದೆಗಳ ಅನುಷ್ಠಾನದಲ್ಲಿನ ಲೋಪದೋಷಗಳ ಕುರಿತು ಅವರು ಪ್ರಸ್ತಾಪಿಸಿದರು. ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿದ್ದು, ಸತ್ಯವನ್ನು ಸಮಾಜಕ್ಕೆ ಮುಟ್ಟಿಸುವ ಶ್ರಮಜೀವಿ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದರೆ ಸಂಘಟನೆ ಕೈಕಟ್ಟಿ ಕೂರುವುದಿಲ್ಲ ಎಂದರು.
ಸಂಘಟನೆಯ ಹೆಸರಿನಲ್ಲಿ ನಡೆಯುವ ಯಾವುದೇ ಹಣಕಾಸಿನ ಅಕ್ರಮ ಹಾಗೂ ಪತ್ರಕರ್ತರ ಶ್ರಮವನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿಯನ್ನು ಸಹಿಸುವುದಿಲ್ಲ. ಅರ್ಹ ಪತ್ರಕರ್ತರಿಗೆ ನ್ಯಾಯ ದೊರೆಯುವವರೆಗೆ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರಮಟ್ಟದಲ್ಲಿ ಪತ್ರಕರ್ತರ ರಕ್ಷಣೆಗೆ ಒಗ್ಗಟ್ಟು ಅಗತ್ಯ
ಸಂಘಟನೆಯ ಗದಗ ಜಿಲ್ಲಾಧ್ಯಕ್ಷ ಅಂದಪ್ಪ ಮಾದರ ಮಾತನಾಡಿ, ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರು ತಳಮಟ್ಟದ ಜನರ ಧ್ವನಿಯಾಗಿ ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವರದಿಗಾರರಿಗೆ ಬೆದರಿಕೆ ಹಾಗೂ ಕಿರುಕುಳ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.
ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಯಾವುದೇ ಮೂಲೆಯಲ್ಲಿ ಕಾರ್ಯನಿರ್ವಹಿಸುವ ಪ್ರಾಮಾಣಿಕ ಪತ್ರಕರ್ತರಿಗೆ ಅನ್ಯಾಯವಾದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಅವರ ಬೆನ್ನಿಗೆ ನಿಲ್ಲಲಿದೆ. ಪತ್ರಕರ್ತರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಪತ್ರಕರ್ತರಲ್ಲಿ ದೊಡ್ಡವರು–ಚಿಕ್ಕವರು ಎಂಬ ಭೇದಭಾವವಿಲ್ಲದೆ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡಬೇಕು. ಯಾವುದೇ ಬಾಹ್ಯ ಒತ್ತಡ ಅಥವಾ ಭಯಕ್ಕೆ ಮಣಿಯದೆ ನೈತಿಕತೆಯಿಂದ ವರದಿಗಾರಿಕೆ ನಡೆಸಬೇಕು ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಡಾ. ಎಸ್.ಎಸ್. ಪಾಟೀಲ್ ಹೇಳಿದರು.
ಮಹಿಳಾ ಪತ್ರಕರ್ತೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮಹಿಳಾ ವರದಿಗಾರರಿಗೆ ಆತ್ಮಸ್ಥೈರ್ಯ ತುಂಬಲು ಸಂಘಟನೆಯು ಎಲ್ಲ ರೀತಿಯ ಸಾಂಸ್ಥಿಕ ಹಾಗೂ ಕಾನೂನಾತ್ಮಕ ನೆರವು ನೀಡಲಿದೆ ಎಂದು ಮುಖಂಡರು ಭರವಸೆ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಧಾರವಾಡ ಜಿಲ್ಲಾಧ್ಯಕ್ಷ ಸಂಗನಗೌಡ ಹೂವಣ್ಣವರ ವಂದಿಸಿದರು. ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ,
ಕಲ್ಯಾಣ ಕಹಳೆ, ಗದಗ

