ನಿವೃತ್ತ ನೌಕರರ ಉಪಧನ ಪಾವತಿಗೆ ವಿಳಂಬ ಖಂಡಿಸಿ ಆ.24ರಂದು ಪ್ರತಿಭಟನೆ

ನಿವೃತ್ತ ನೌಕರರ ಉಪಧನ ಪಾವತಿಗೆ ವಿಳಂಬ ಖಂಡಿಸಿ ಆ.24ರಂದು ಪ್ರತಿಭಟನೆ

ನಿವೃತ್ತ ನೌಕರರ ಉಪಧನ ಪಾವತಿಗೆ ವಿಳಂಬ ಖಂಡಿಸಿ ಆ.24ರಂದು ಪ್ರತಿಭಟನೆ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಹತ್ತು ವರ್ಷಗಳ ಕಾಲ ದಿನಗೂಲಿ ಸೇವೆ ಸಲ್ಲಿಸಿ ನಂತರ ಸಕ್ರಮಗೊಂಡು ನಿವೃತ್ತರಾದ ನೌಕರರಿಗೆ ದಿನಗೂಲಿ ಸೇವಾ ಅವಧಿಯ ಹತ್ತು ವರ್ಷಗಳ ಉಪಧನ ಪಾವತಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಕಲಬುರಗಿ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ವತಿಯಿಂದ ಆ.24ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ  ನಿವೃತ್ತ ನೌಕರರಿಗೆ ಉಪಧನ ಪಾವತಿಸುವಂತೆ ಸರ್ಕಾರದ ಆದೇಶ, ಸಕ್ಷಮ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆಯ ನ್ಯಾಯಾಲಯದ ತೀರ್ಪುಗಳಿದ್ದರೂ ಕಳೆದ ಎರಡು ವರ್ಷಗಳಿಂದ ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಮಟ್ಟದಲ್ಲಿ ಕಡತವನ್ನು ವಿಳಂಬಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಜಾರಿಕೆಯ ಉತ್ತರಗಳನ್ನು ನೀಡಿ ಕಾಲಹರಣ ಮಾಡಲಾಗುತ್ತಿದೆ. ಅರ್ಹತಾದಾಯಕ ಸೇವಾ ಮಂಜೂರಾತಿಯಲ್ಲಿಯೂ ಇದೇ ರೀತಿ 7–8 ವರ್ಷಗಳ ಕಾಲ ವಿಳಂಬ ಮಾಡಲಾಗಿದೆ. ಇದೀಗ ಉಪಧನ ಪಾವತಿಗೆ ಅರ್ಹರಾಗಿರುವ ಫಲಾನುಭವಿಗಳ ಆದೇಶಗಳನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಶಿಫಾರಸು ಮಾಡದೆ ಮಹಾನಗರ ಪಾಲಿಕೆ ಮಟ್ಟದಲ್ಲೇ ಇರಿಸಲಾಗಿದೆ ಎಂದು ದೂರಿದ್ದರು.

ವಿಳಂಬ ಹಾಗೂ ನಿರ್ಲಕ್ಷ್ಯವನ್ನು ಖಂಡಿಸಿ ಜು.13ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಆ.17ರೊಳಗಾಗಿ ಅರ್ಹ ನಿವೃತ್ತ ನೌಕರರ ಉಪಧನ ಪಾವತಿ ಆದೇಶಗಳನ್ನು ಡಿಎಂಎಗೆ ಶಿಫಾರಸು ಮಾಡುವಂತೆ ಆಗ್ರಹಿಸಲಾಗಿತ್ತು. ಆದರೆ ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆ.24ರಂದು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಪೌರಕಾರ್ಮಿಕರು ಸೇರಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಯೋವೃದ್ಧ ನಿವೃತ್ತ ನೌಕರರ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಉಪಧನ ಪಾವತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ನ್ಯಾಯ ಒದಗಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿಳಂಬ ಹಾಗೂ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೀರಭದ್ರ ಸಿಂಪಿ ಒತ್ತಾಯಿಸಿದ್ದಾರೆ.